ಹುಬ್ಬಳ್ಳಿ: ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಶೇಷಚೇತನರು ಇಂದು ಮನೆಯಿಂದಲೇ ತಮ್ಮ ಮತ ಹಾಕಿದರು. ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ-72 ವ್ಯಾಪ್ತಿಯಲ್ಲಿರುವ ಹುಬ್ಬಳ್ಳಿಯ ನವಅಯೋಧ್ಯನಗರದ ನಿವಾಸಿ ಹಿರಿಯ ನಾಗರಿಕ ಆತ್ಮಾರಾವ್ ಯಾದವಾಡ ಮತದಾನ ಮಾಡಿದರು. ಇವರ ವಿಶೇಷಚೇತನ ಮೊಮ್ಮಕ್ಕಳಾದ ಆದರ್ಶ ಹಾಗೂ ಸಂಪ್ರದಾ ಅವರು ಇದೇ ಮೊದಲ ಬಾರಿಗೆ ತಮ್ಮ ಮತದಾನದ ಹಕ್ಕು ಚಲಾಯಿಸಿ ಖುಷಿಪಟ್ಟರು.
ಬಳಿಕ ಮಾತನಾಡಿದ ಆತ್ಮರಾವ್ ಯಾದವಾಡ, ನನಗೆ 87 ವರ್ಷ ವಯಸ್ಸಾಗಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಮನೆಯಿಂದ ಮತದಾನ ಮಾಡಲು ಅವಕಾಶ ಕಲ್ಪಿಸಿರುವುದು ಸಂತಸ ತಂದಿದೆ. ಇದರಿಂದಾಗಿ ಹಿರಿಯ ನಾಗರಿಕರು ಮತದಾನದಂದು ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಿದೆ. ನನ್ನ ಜೊತೆಗೆ ನನ್ನ ಮೊಮ್ಮಕ್ಕಳು ಸಹ ಮತ ಚಲಾಯಿಸಿರುವ ಖುಷಿ ಇದೆ. ಮನೆಯಿಂದ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಬಹಳಷ್ಟು ಜನರಿಗೆ ಅನುಕೂಲವಾಗಿದೆ. ಹಿರಿಯ ನಾಗರಿಕರು ಹಾಗೂ ವಿಶೇಷಚೇತನರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕು. ಮತ ಚಲಾಯಿಸಲು ಅನುಕೂಲ ಮಾಡಿಕೊಟ್ಟಿರುವ ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗಕ್ಕೆ ಧನ್ಯವಾದಗಳು ಎಂದರು.
ಮೊದಲ ಬಾರಿಗೆ ಮತ ಚಲಾಯಿಸಿದ ಸಂಪ್ರದಾ ಮತ್ತು ಆದರ್ಶ ಯಾದವಾಡ ಮಾತನಾಡಿ, ಇದೇ ಮೊದಲ ಬಾರಿಗೆ ಮತ ಚಲಾಯಿಸಲು ಅವಕಾಶ ಸಿಕ್ಕಿರುವುದು ಬಹಳ ಖುಷಿಯಾಗಿದೆ. ವಿಶೇಷಚೇತನರು ಸಹ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಮಾಡಿ ಕೊಟ್ಟಿರುವುದು ಅನುಕೂಲವಾಗಿದೆ ಎಂದು ತಿಳಿಸಿದರು.
ಕ್ಷೇತ್ರದ ಸಾಮಾನ್ಯ ವೀಕ್ಷಕ ಹಿರಿಯ ಐಎಎಸ್ ಅಧಿಕಾರಿ ಅಜಯ ಗುಪ್ತಾ ಅವರು ಯಾದವಾಡ ಕುಟುಂಬದ ಮನೆಗೆ ಖುದ್ದು ಭೇಟಿ ನೀಡಿ, ಮತದಾನ ಪ್ರಕ್ರಿಯೆ ವೀಕ್ಷಿಸಿದರು. ಮತದಾನ ಮಾಡಿದ ಮತದಾರರೊಂದಿಗೆ ಸೌಲಭ್ಯದ ಉಪಯುಕ್ತತೆಯ ಬಗ್ಗೆ ಅಭಿಪ್ರಾಯ ಪಡೆದರು. ಅಜ್ಜ, ಮೊಮ್ಮಕ್ಕಳು ಒಟ್ಟಾಗಿ ಮನೆಯಿಂದ ಮತದಾನ ಮಾಡಿದ್ದಕ್ಕೆ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ಪರವಾಗಿ ಧನ್ಯವಾದ ತಿಳಿಸಿದ ಅವರು, ಮತದಾನದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು.
ಹಿರಿಯ ನಾಗರಿಕರು, ವಿಶೇಷಚೇತನರಿಂದ ಮತದಾನ: ಶಿವಮೊಗ್ಗ ನಗರ ವ್ಯಾಪ್ತಿಯ ಶರಾವತಿ ನಗರದ 91 ವರ್ಷದ ಹಿರಿಯ ನಾಗರಿಕ ಚಂದ್ರಶೇಖರಪ್ಪ, ಕೋಟೆ ರೋಡ್ ವ್ಯಾಪ್ತಿಯ 90 ವರ್ಷದ ಹಿರಿಯ ನಾಗರಿಕ ಅನ್ನಪೂರ್ಣಮ್ಮ ಹಾಗೂ ಹೊಸಮನೆ ವ್ಯಾಪ್ತಿಯ ಹನುಮಂತರಾಯಪ್ಪ ಹಾಗೂ ವಿಶೇಷಚೇತನ ಮತದಾರರು Postal Ballot ಮೂಲಕ ಮತದಾನ ಮಾಡಿದರು. ಜಿಲ್ಲೆಯಲ್ಲಿ ವಿಶೇಷ ಚೇತನ ಮತದಾರರು 2,515 ಇದ್ದಾರೆ. ಅದೇ ರೀತಿ AVPD ಮತದಾರರು 1,064 ಸೇರಿ ಒಟ್ಟು 3,579 ಜನ ಮತದಾರರಿದ್ದಾರೆ.
ಈ ವೇಳೆ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅಭಿನಂದಿಸಿದರು. ಮುಖ್ಯ ಯೋಜನಾಧಿಕಾರಿಗಳು, ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿಗಳು, ಸೆಕ್ಟರ್ ಆಫೀಸರ್ ಹಾಗೂ ಚುನಾವಣಾ ಕರ್ತವ್ಯನಿರತ ಅಧಿಕಾರಿಗಳು, ಬಿಎಲ್‌ಒ ಹಾಜರಿದ್ದರು.
ಇದನ್ನೂಓದಿ: ಎನ್ಡಿಎ 150 ಸ್ಥಾನ ದಾಟಲ್ಲ: ಸುರ್ಜೇವಾಲಾ ಭವಿಷ್ಯ - Surjewala