ಹುಬ್ಬಳ್ಳಿ: ಬಿಜೆಪಿಯ ಭದ್ರಕೋಟೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕೈ-ಕಮಲ ಪಕ್ಷಗಳ ಮಧ್ಯೆ ತೀವ್ರ ಜಿದ್ದಾಜಿದ್ದಿ ಇದೆ. ಸತತ ನಾಲ್ಕು ಬಾರಿ ಗೆದ್ದಿರುವ ಪ್ರಹ್ಲಾದ್ ಜೋಶಿ ಅವರಿಗೆ ಕಾಂಗ್ರೆಸ್‌ನ ಹೊಸ ಮುಖ ವಿನೋದ್ ಅಸೂಟಿ ಭಾರೀ ಪೈಪೋಟಿ ನೀಡುತ್ತಿದ್ದಾರೆ.
ದಿಂಗಾಲೇಶ್ವರ ಶ್ರೀ ಆಕ್ರೋಶದ ಎಫೆಕ್ಟ್ ಏನು?: ಸಾಂಪ್ರದಾಯಿಕ ಲಿಂಗಾಯತ ಮತಗಳು ಬಿಜೆಪಿಗೆ ದೊಡ್ಡ ಶಕ್ತಿ. ಆದರೆ ಈ ಬಾರಿ ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಜೋಶಿ ಅವರ ವಿರುದ್ಧ ನೇರವಾಗಿ ಪ್ರಚಾರಕ್ಕಿಳಿದಿದ್ದರು. ಇದು ಲಿಂಗಾಯತ ಮತದಾರರ ಮೇಲೆ ಪ್ರಭಾವ ಬೀರಿದರೆ 5ನೇ ಬಾರಿ ಜಯದ ನಿರೀಕ್ಷೆಯಲ್ಲಿರುವ ಜೋಶಿಗೆ ಹೊಡೆತ ಬೀಳೂಬುದು. ಕುರುಬ ಸಮುದಾಯದ ವಿನೋದ್ ಅಸೂಟಿ ಅವರಿಗೆ ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಮತಗಳ ಬೆಂಬಲವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್ ಒಗ್ಗಟ್ಟು: ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ನಲ್ಲಿ ಒಗ್ಗಟ್ಟಿನ ಕೊರತೆ ಇತ್ತು. ಆದರೆ ಈ ಬಾರಿ ಕೈ ಪಾಳಯದಲ್ಲಿ ಯಾವುದೇ ಅಸಮಾಧಾನದ ಹೊಗೆಯಾಡಿಲ್ಲ. ನಾಯಕರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಶೇ. 70.12ರಷ್ಟು ಮತದಾನವಾಗಿತ್ತು. ಆಗ ಬಿಜೆಪಿಯಿಂದ ಪ್ರಹ್ಲಾದ್ ಜೋಶಿ 2.05 ಲಕ್ಷ ಮತಗಳ ಅಂತರದ ಗೆಲುವು ಕಂಡಿದ್ದರು. ಈ ಬಾರಿ ಶೇ.74.37ರಷ್ಟು ಮತದಾನವಾಗಿದೆ. ಆದರೆ, ಹೆಚ್ಚುವರಿ ಮತಗಳು ಯಾರ ಪರ ಇವೆ ಎಂಬುದು ಫಲಿತಾಂಶದ ಬಳಿಕ ಗೊತ್ತಾಗಲಿದೆ.
ಮಹಿಳಾ ಮತದಾನ ಪ್ರಮಾಣ ಕಡಿಮೆ: ಕಳೆದ ಮತ್ತು ಈ ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರ ಮತದಾನ ಪ್ರಮಾಣದಲ್ಲಿ ಸಾಕಷ್ಟು ವ್ಯತ್ಯಾಸವಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ 8,77,396 ಮಹಿಳಾ ಮತದಾರರ ಪೈಕಿ 5,69,597 ಮಹಿಳೆಯರು ಮತದಾನ ಮಾಡಿದ್ದರು. 8,49,809 ಪುರುಷರ ಪೈಕಿ 6,40,913 ಮತ ಚಲಾಯಿಸಿದ್ದರು. ಅಂದರೆ 2,08,896 ಪುರುಷ ಮತ್ತು 3,07,799 ಮಹಿಳಾ ಮತದಾರರು ಮತದಾನ ಮಾಡಿರಲಿಲ್ಲ. ಈ ಸಲ 9,17,926 ಪುರುಷ, 9,13,949 ಮಹಿಳಾ ಮತದಾರರ ಪೈಕಿ ಕ್ರಮವಾಗಿ 6,99,244 ಪುರುಷರು ಮತ್ತು 6,63,151 ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ. ಅಂದರೆ 2,18,682 ಪುರುಷ ಹಾಗೂ 2,50,798 ಮಹಿಳಾ ಮತದಾರರು ಮತದಾನ ಮಾಡಿಲ್ಲ. ಪ್ರಸಕ್ತ ಚುನಾವಣೆಯಲ್ಲಿ 36,553 ಮಹಿಳಾ ಮತದಾರರು ಹೆಚ್ಚಿದರೂ ಮತದಾನದಿಂದ ದೂರ ಉಳಿದ ಮಹಿಳಾ ಮತದಾರರ ಸಂಖ್ಯೆ 3.07 ಲಕ್ಷಕ್ಕಿಂತ ಕಡಿಮೆ ಇದೆ.
ಎಲ್ಲಿ, ಯಾರು ಹೆಚ್ಚು? ಯಾರು ಕಮ್ಮಿ?: ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ತಲಾ ನಾಲ್ಕು ಕ್ಷೇತ್ರಗಳಲ್ಲಿ ಕೈ ಮತ್ತು ಕಮಲ ಶಾಸಕರಿದ್ದಾರೆ. ಬಿಜೆಪಿ ನಗರ ಪ್ರದೇಶದ ಮತಗಳಲ್ಲಿ ಹೆಚ್ಚು ನಂಬಿಕೆ ಇಟ್ಟುಕೊಂಡಿದೆ. ಕಲಘಟಗಿ, ಹು-ಧಾ ಸೆಂಟ್ರಲ್, ಹು-ಧಾ ಪಶ್ಚಿಮ, ಕುಂದಗೋಳ ಕ್ಷೇತ್ರದಲ್ಲಿ ಅತೀ ಹೆಚ್ಚು ಮತಗಳನ್ನು ಪಡೆಯುವ ನಿರೀಕ್ಷೆಯನ್ನು ಬಿಜೆಪಿ ಹೊಂದಿದೆ. ಕಾಂಗ್ರೆಸ್ ನವಲಗುಂದ, ಶಿಗ್ಗಾವಿ, ಹು-ಧಾಪೂರ್ವ, ಕುಂದಗೋಳ, ಧಾರವಾಡ ಗ್ರಾಮೀಣ, ಕಲಘಟಗಿ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿದೆ. ಆದರೆ ವಿಧಾನಸಭೆ ಚುನಾವಣೆಯ ಮತದಾನ ನೋಡಿದರೆ 48,147 ಮತಗಳು ತಮ್ಮ ಪಕ್ಷಕ್ಕೆ ಹೆಚ್ಚುವರಿಯಾಗಿ ಲಭಿಸುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.
ಗ್ಯಾರಂಟಿ ಯೋಜನೆಗಳು 'ಕೈ' ಹಿಡಿಯುತ್ತಾ?: ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2.3 ಲಕ್ಷ ಮಹಿಳೆಯರು ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಉಚಿತ ಬಸ್ ಸೌಲಭ್ಯ ಪಡೆದವರ ಸಂಖ್ಯೆಯೂ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ ಕಾಂಗ್ರೆಸ್ ವಿಶ್ವಾಸದಲ್ಲಿದೆ.
ಬಿಜೆಪಿ ಲೆಕ್ಕಾಚಾರವೇನು?: ಪ್ರಧಾನಿ ನರೇಂದ್ರ ಮೋದಿ ಅಲೆ ಮತ್ತು ಸಚಿವರಾಗಿ ಪ್ರಹ್ಲಾದ್ ಜೋಶಿ ಅವರ ಅಭಿವೃದ್ಧಿ ಕಾರ್ಯಗಳಿಂದ ಬಿಜೆಪಿ ಮುನ್ನಡೆ ಸಾಧಿಸುವ ಹುಮ್ಮಸ್ಸಿನಲ್ಲಿದೆ. ಪಕ್ಷಗಳ ಲೆಕ್ಕಾಚಾರ ಮತ್ತು ವಿಶ್ಲೇಷಣೆಗಳು ಏನೇ ಇದ್ದರೂ ಜೂನ್ 4ರ ಫಲಿತಾಂಶ ಎಲ್ಲದಕ್ಕೂ ಉತ್ತರವಾಗಲಿದೆ.
ಇದನ್ನೂ ಓದಿ: ಲೋಕಸಮರ: ಯಾರಿಂದ ಯಾರಿಗೆ ಹೊಡೆತ? ರಾಜ್ಯದ 28 ಕ್ಷೇತ್ರಗಳ ಮಾಹಿತಿ - Lok Sabha Election