ಧಾರವಾಡ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಮಳೆ ಹೆಚ್ಚಾಗುತ್ತಿದ್ದು, ಯಾವುದೇ ಸಂದರ್ಭದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡ ಜಿಲ್ಲಾಡಳಿತ ಪ್ರವಾಹ ಸ್ಥಿತಿ ಎದುರಿಸಲು ಸಿದ್ದತೆ ಮಾಡಿಕೊಂಡಿದೆ. ಎನ್‌ಡಿಆರ್‌ಎಫ್ ತಂಡವನ್ನು ಮೀಸಲು ಇಡಲಾಗಿದೆ. ಜನರನ್ನು ರಕ್ಷಿಸಬಹುದು ಎಂಬುದರ ಕುರಿತು ಅಣಕು ಪ್ರದರ್ಶನ ಮಾಡುವ ಮೂಲಕ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಜಿಲ್ಲಾಡಳಿತ ಮಾಡಿದೆ.
ಧಾರವಾಡದ ಕೆಲಗೇರಿ ಕೆರೆಯಲ್ಲಿ ಜಿಲ್ಲಾಡಳಿತ ಅಣಕು ಪ್ರದರ್ಶನ ಮಾಡಿತು. ಜಿಲ್ಲೆಯಲ್ಲಿ ಬೆಣ್ಣೆಹಳ್ಳ, ತುಪ್ಪರಿಹಳ್ಳಗಳು ಪ್ರವಾಹ ಸೃಷ್ಟಿಸುತ್ತವೆ. ಹೀಗಾಗಿ ವಿಪತ್ತು ನಿರ್ವಹಣೆಗೆ ಧಾರವಾಡ ಜಿಲ್ಲಾಡಳಿತ ಸಜ್ಜಾಗಿ ನಿಂತಿದ್ದು, ಬೆಳಗಾವಿ ಪ್ರಾದೇಶಿಕ ವಿಭಾಗಕ್ಕೆ 25 ರಕ್ಷಣಾ ಸಿಬ್ಬಂದಿ ಹೊಂದಿರುವ ಎನ್‌ಡಿಆರ್‌ಎಫ್ ತಂಡವನ್ನು ಕಾಯ್ದಿರಿಸಲಾಗಿದೆ.
ಒಂದು ವೇಳೆ, ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ಈ ತಂಡವೇ ಅಗ್ನಿಶಾಮಕ ದಳ ಹಾಗೂ ಎಸ್ಡಿಆರ್ಎಫ್ ಜೊತೆಗೆ ರಕ್ಷಣಾ ಕಾರ್ಯಾಚರಣೆಗೆ ಇಳಿಯಲಿದೆ. ಹೀಗಾಗಿ ಈ ಎನ್‌ಡಿಆರ್‌ಎಫ್ ತಂಡವು ತನ್ನ ರಕ್ಷಣಾ ಕೌಶಲ್ಯವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಅಣಕು ಕಾರ್ಯಾಚರಣೆ ಕೈಗೊಂಡಿತು. ಧಾರವಾಡದ ಪಕ್ಕದ ಜಿಲ್ಲೆಗಳಾದ ಬೆಳಗಾವಿ ಮತ್ತು ಉತ್ತರಕನ್ನಡ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಅಕ್ಕಪಕ್ಕದ ಜಿಲ್ಲೆಗಳಲ್ಲಿ ಸುರಿಯುವ ಮಳೆ ಧಾರವಾಡದಲ್ಲಿ ಪ್ರವಾಹ ಸೃಷ್ಟಿ ಮಾಡಿ ಬಿಡುತ್ತದೆ. ಹೀಗಾಗಿ ಧಾರವಾಡದ ಮಳೆ ಯಾವತ್ತೂ ನಿರ್ಲಕ್ಷಿಸುವಂತಿಲ್ಲ.
ಸದ್ಯದ ಅಂಕಿ - ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಮುಂಗಾರಿನ ಆರಂಭದಿಂದ ಇಲ್ಲಿಯವರೆಗೆ 224 ಮಿಲಿ ಮೀಟರ್ ವಾಡಿಕೆ ಮಳೆಯಾಗಬೇಕಿತ್ತು. ವಾಸ್ತವದಲ್ಲಿ 232 ಮಿಲಿ ಮೀಟರ್ ಮಳೆಯಾಗಿದೆ. ಈ ಪ್ರಮಾಣ ಸ್ವಲ್ಪವೇ ಹೆಚ್ಚಳ ಎನಿಸುತ್ತದೆಯಾದರೂ ಈ ವಾರದಲ್ಲಿ ಸುರಿಯುತ್ತಿರುವ ಮಳೆಯನ್ನು ಹೋಲಿಸಿದರೆ ಧಾರವಾಡದಲ್ಲೂ ಹಳ್ಳಗಳು ಉಕ್ಕಿ ಹರಿಯುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಅಪಾಯವನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಇದನ್ನೂ ಓದಿ: ಮಳೆಯ ಆರ್ಭಟ: ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಈವರೆಗಿನ ಸ್ಥಿತಿಗತಿ ಏನಿದೆ? - KARNATAKA RAIN UPDATE