ಧಾರವಾಡ: ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗದೇ ಇದ್ದರೂ ಸಹ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಂದು ಕೆಲಗೇರಿ ಬಡಾವಣೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ನೇತೃತ್ವದಲ್ಲಿ ಜಾಗೃತಿ ಜಾಥಾ ನಡೆಯಿತು.
ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, "ಇಂದು ಕೆಲಗೇರಿಯ ವಾರ್ಡ್ ನಂ.10ರಲ್ಲಿ ಡೆಂಗ್ಯೂ ಕುರಿತು ಅರಿವು ಮೂಡಿಸಲು ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದಕ್ಕೂ ಮೊದಲು ರೋಗದ ಬಗ್ಗೆ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಿದ್ದೆವು. ಸದ್ಯ ಈ ಕಾರ್ಯಕ್ರಮವನ್ನು ಪ್ರತಿ ಶುಕ್ರವಾರ ಒಂದೊಂದು ಏರಿಯಾದಲ್ಲಿ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಲಿದ್ದೇವೆ. ಪ್ರತಿ ಶುಕ್ರವಾರ ಆರೋಗ್ಯ ಸಿಬ್ಬಂದಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಿದ್ದಾರೆ. ಡೆಂಗ್ಯೂಗೆ ಕಾರಣವಾಗುವ ಸೊಳ್ಳೆಗಳ ಲಾರ್ವಾ ನಿಯಂತ್ರಣ ಮಾಡುತ್ತಿದ್ದೇವೆ. ಇಲ್ಲಿಯವರೆಗೆ 2060 ಡೆಂಗ್ಯೂ ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಜನವರಿಯಿಂದ ನಿನ್ನೆಯವರೆಗೆ 254 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಪ್ರತಿದಿನ ಡೆಂಗ್ಯೂ ಪರೀಕ್ಷೆಗಳನ್ನು ಮಾಡುತ್ತಿದ್ದೇವೆ" ಎಂದರು.
ಕಳೆದ ಒಂದೇ ತಿಂಗಳಿನಲ್ಲಿ 134 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿದ್ದವು. ಹೀಗಾಗಿ ಧಾರವಾಡ ಜಿಲ್ಲಾಡಳಿತ ಶಾಲೆಗಳನ್ನೇ ಕೇಂದ್ರೀಕರಿಸಿ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿತ್ತು. ಆಯಾ ತಾಲೂಕುಗಳಲ್ಲಿ ಖುದ್ದು ಶಾಸಕರು ಶಾಲಾ ಮಕ್ಕಳೊಂದಿಗೆ ಸೇರಿ ಡೆಂಗ್ಯೂ ಜಾಗೃತಿ ಮೂಡಿಸಿದ್ದರು. ಆದರೂ ಸಹ ಡೆಂಗ್ಯೂ ನಿಯಂತ್ರಣಕ್ಕೆ ಮಾತ್ರ ಬರುತ್ತಿಲ್ಲ. ಹವಾಮಾನ ದಲ್ಲಾಗುತ್ತಿರುವ ಏರುಪೇರಿನಿಂದಾಗಿ ಜನರಲ್ಲಿ ಜ್ವರದ ಲಕ್ಷಣಗಳು ಕಾಣುತ್ತಿದ್ದು, ನಿಧಾನಕ್ಕೆ ಅದು ಡೆಂಗ್ಯೂಗೆ ತಿರುಗುತ್ತಿದೆ.
ಹೀಗಾಗಿ ಧಾರವಾಡ ಜಿಲ್ಲಾಡಳಿತ ಈಗ ಸೊಳ್ಳೆಗಳ ನಿರ್ಮೂಲನಾ ದಿನ ಎಂಬ ಘೋಷವಾಕ್ಯದ ಮೂಲಕ ಜನರಿಗೆ ಜಾಗೃತಿ ಮೂಡಿಸಲು ಮುಂದಾಗಿದ್ದು, ಪ್ರತಿ ಶುಕ್ರವಾರ ಈ ಜನಜಾಗೃತಿ ಅಭಿಯಾನವನ್ನು ಗ್ರಾಮ ಪಂಚಾಯಿತಿ ಮಟ್ಟದ ಪ್ರತಿ ಹಳ್ಳಿಗೆ ಅಧಿಕಾರಿಗಳು ತೆರಳಿ, ಅಲ್ಲಿ ಜನರಿಗೆ ಲಾರ್ವಾ ಬಗ್ಗೆ ತಿಳಿಹೇಳಿ ನೀರಿನ ತೊಟ್ಟಿ, ನೀರು ಸಂಗ್ರಹದ ಸ್ಥಳಗಳ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ.
ಕಳೆದ ತಿಂಗಳು ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ 4 ವರ್ಷದ ಬಾಲಕಿ ಡೆಂಗ್ಯೂ ಜ್ವರದಿಂದ ಅಸುನೀಗಿದ್ದಳು.
ಇದನ್ನೂ ಓದಿ: ಡೆಂಗ್ಯೂ ಜೊತೆಗೆ ಝೀಕಾ ವೈರಸ್ ಬಗ್ಗೆಯೂ ಮುನ್ನೆಚ್ಚರಿಕೆ ವಹಿಸಿ: ದಿನೇಶ್ ಗುಂಡೂರಾವ್ - Dinesh Gundu Rao