ಮಂಗಳೂರು: ತಿರುಪತಿ ಲಡ್ಡು ಪ್ರಸಾದ ಅಪವಿತ್ರತೆಯ ಆರೋಪದ ಹಿನ್ನೆಲೆ ವಿಶ್ವ ಹಿಂದೂ ಪರಿಷತ್ ನಗರದ ಡೊಂಗರಕೇರಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ ಧರ್ಮಾಗ್ರಹ ಸಭೆ ನಡೆಸಿತು.
ಧರ್ಮಾಗ್ರಹ ಸಭೆಯಲ್ಲಿ ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ, ಓಂ ಶ್ರೀ ಮಠ ಗುರುನಗರ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಓಂ ಶ್ರೀ ಮಠ ಗುರುನಗರ ಶ್ರೀ ಶಿವ ಜ್ಞಾನಮಹಿ ಸರಸ್ವತಿ, ಕನ್ಯಾನ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಆರ್‌ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ವಿಹಿಂಪ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಡಾ. ಎಂ.ಬಿ.ಪುರಾಣಿಕ್ ಸೇರಿದಂತೆ ಹಿಂದೂ ಮುಖಂಡರು ಪಾಲ್ಗೊಂಡಿದ್ದರು.
ಈ ವೇಳೆ ಹಿಂದೂ ಮುಖಂಡರು ಕೆಲವೊಂದು ನಿರ್ಣಯಗಳನ್ನು ತೆಗೆದುಕೊಂಡರು. ಈ ನಿರ್ಣಯದ ಬಗ್ಗೆ ಮಾಹಿತಿ ನೀಡಿದ ಎಂ.ಬಿ. ಪುರಾಣಿಕ್, "ತಿರುಪತಿಯ ಲಡ್ಡು ಅಪವಿತ್ರತೆಯಲ್ಲಿ ಯಾರು ಕಾರಣರಾಗಿದ್ದಾರೋ, ಅದರಲ್ಲಿ ಯಾರು ಕರ್ತವ್ಯ ಲೋಪ ಎಸಗಿದ್ದಾರೋ ಅದನ್ನು ಸಿಬಿಐ ತನಿಖೆ ನಡೆಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಸಭೆ ಒತ್ತಾಯಿಸಿದೆ. ಇನ್ನು ಮುಂದೆ ಯಾವುದೇ ದೇವಸ್ಥಾನದಲ್ಲಿ ಇಂತಹ ಕೃತ್ಯ ಆಗಬಾರದೆಂದು ಸಭೆಯು ಒತ್ತಾಯಿಸಿತು" ಎಂದು ತಿಳಿಸಿದರು.
ದೇವಸ್ಥಾನಕ್ಕೆ ಅವಶ್ಯಕ ಇರುವ ತುಪ್ಪವನ್ನು ದೇವಸ್ಥಾನದ ಟ್ರಸ್ಟ್ ವತಿಯಿಂದಲೇ ತಯಾರು ಮಾಡಲು ಅನುಕೂಲವಾಗುವಂತೆ 25 ಸಾವಿರ ದೇಸಿ ಹಸುಗಳಿರುವ ಬೃಹತ್ ಗೋಶಾಲೆ ಪ್ರಾರಂಭಿಸಲು ತಿರುಮಲ ತಿರುಪತಿ ದೇವಸ್ಥಾನದವರನ್ನು ಸಭೆ ಒತ್ತಾಯಿಸಿತು. ದೇಶದ ಇತರ ದೇವಸ್ಥಾನಗಳಲ್ಲಿಯೂ ದೇವರ ವಿನಿಯೋಗಕ್ಕೆ ಅವಶ್ಯಕತೆ ಇರುವ ತುಪ್ಪಕ್ಕೆ ಬೇಕಾದ ಗೋವುಗಳನ್ನು ಆಯಾ ದೇವಸ್ಥಾನದವರು ಸಾಕಬೇಕು ಎಂದು ಸಭೆ ಒತ್ತಾಯಿಸಿತು" ಎಂದು ತಿಳಿಸಿದರು.
"ದೇಶದ ಎಲ್ಲ ದೇವಸ್ಥಾನಗಳನ್ನು ರಾಜಕೀಯ ಹಾಗೂ ಸರಕಾರದ ಹಿಡಿತದಿಂದ ಮುಕ್ತಿಗೊಳಿಸಿ ಸರ್ವ ಸಮ್ಮತ ರೀತಿಯಲ್ಲಿ ಹಿಂದೂ ಸಮಾಜಕ್ಕೆ ಹಸ್ತಾಂತರಿಸಬೇಕು. ಅದಕ್ಕಾಗಿ ರಾಷ್ಟ್ರೀಯ ಧಾರ್ಮಿಕ ಪರಿಷತ್ತು ಮತ್ತು ರಾಜ್ಯ ಧಾರ್ಮಿಕ ಪರಿಷತ್ತನ್ನು ಸ್ಥಾಪಿಸಬೇಕು. ದೀಪಕ್ಕೆ ಹಾಕುವ ಎಳ್ಳೆಣ್ಣೆ, ದೀಪದ ಎಣ್ಣೆ, ತೆಂಗಿನ ಎಣ್ಣೆಗಳು ಸಾಕಷ್ಟು ಕಲಬೆರಿಕೆಯಿಂದ ಕಂಡು ಬರುತ್ತಿದ್ದು, ಎಲ್ಲ ದೇವಸ್ಥಾನಗಳಲ್ಲಿ ಪರಿಶುದ್ಧ ಎಣ್ಣೆ ತುಪ್ಪಗಳಿಂದ ದೀಪವನ್ನು ಹಚ್ಚಬೇಕು ಎಂದು ಈ ಸಭೆ ಎಲ್ಲ ದೇವಸ್ಥಾನದವರನ್ನು ವಿನಂತಿಸಿತು" ಎಂದು ತಿಳಿಸಿದರು.
ಇದನ್ನೂ ಓದಿ: 'ಕನಿಷ್ಠ ದೇವರನ್ನಾದರೂ ರಾಜಕೀಯದಿಂದ ದೂರವಿಡಿ': ತಿರುಪತಿ ಲಡ್ಡು ವಿವಾದದ ಬಗ್ಗೆ ಸುಪ್ರೀಕೋರ್ಟ್ ಬೇಸರ - Tirupati laddu row