ಹುಬ್ಬಳ್ಳಿ: ದಿನದಿಂದ ದಿನಕ್ಕೆ ಈರುಳ್ಳಿ ದರ ಏರಿಕೆಯಾಗುತ್ತಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಬೆಲೆ ಏರಿಕೆಯಿಂದ ರೋಸಿ ಹೋಗಿದ್ದ ಗ್ರಾಹಕರ ನೇರವಿಗೆ ಕೇಂದ್ರ ಸರ್ಕಾರ ಧಾವಿಸಿದೆ. ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದಿಂದ (ಎನ್‌ಸಿಸಿಎಫ್) ಕಡಿಮೆ ಬೆಲೆಗೆ ಉಳ್ಳಾಗಡ್ಡಿ ವಿತರಣೆ ಮಾಡಲಾಗುತ್ತಿದೆ. ಗ್ರಾಹಕರು ಈಗ ಫುಲ್ ಖುಷ್ ಆಗಿದ್ದಾರೆ.
ಒಂದು ಕಡೆ ರಾಜ್ಯದಲ್ಲಿ ಮಳೆ ಇನ್ನೊಂದು ಕಡೆ ಅಗತ್ಯವಾದ ವಸ್ತುಗಳ ಬೆಲೆ ಏರಿಕೆ ಇದರಿಂದ ಜನಸಾಮಾನ್ಯರು ಆರ್ಥಿಕವಾಗಿ ನಲುಗಿ ಹೋಗಿದ್ದಾರೆ. ಇದರ ನಡುವೆ ಉಳ್ಳಾಗಡ್ಡಿ ಬೆಲೆ ಕೂಡ ಏರಿಕೆಯಾಗಿತ್ತು. ಸದ್ಯ ಒಂದು ಕೆಜಿ ಉಳ್ಳಾಗಡ್ಡಿ 70 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ. ಈ ಬೆಲೆ ಏರಿಕೆಯಿಂದಾಗಿ ಗ್ರಾಹಕರು ಖರೀದಿಗೆ ಪರದಾಡುವ ಸ್ಥಿತಿ ಇತ್ತು. ಇದೀಗ ಎನ್ಸಿಸಿಎಫ್ನಿಂದ ಸದ್ಯ ಕಡಿಮೆ ಬೆಲೆಗೆ ಉಳ್ಳಾಗಡ್ಡಿ ವಿತರಣೆ ಮಾಡಲಾಗುತ್ತಿದ್ದು, ಸಾಕಷ್ಟು ಗ್ರಾಹಕರು ಖುಷಿಯಿಂದ ಉಳ್ಳಾಗಡ್ಡಿ ಖರೀದಿ ಮಾಡುತ್ತಿದ್ದಾರೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಹೇಳಿದರು.
ಕೇಂದ್ರ ಸರ್ಕಾರವು ಬೆಲೆ ಸ್ಥಿರೀಕರಣ ನಿಧಿ (ಪಿಎಸ್‌ಎ) ಅಡಿ 550 ಉತ್ಪನ್ನಗಳನ್ನು ಗುರುತಿಸಿದ್ದು, ಯಾವ ಉತ್ಪನ್ನದ ಬೆಲೆ ಮಾರುಕಟ್ಟೆಯಲ್ಲಿ ದುಬಾರಿಯಾಗುತ್ತದೋ ಅಂತಹ ಉತ್ಪನ್ನವನ್ನು ಸಂಗ್ರಹಿಸಿ, ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೂಲಕ ಬೆಲೆ ಇಳಿಕೆಗೆ ಸಹಕಾರಿಯಾಗುವ ಮೂಲಕ ಗ್ರಾಹಕರಿಗೆ ಉಂಟಾಗುವ ಹೊರೆಯನ್ನು ಇಳಿಸಲಾಗುತ್ತಿದೆ.
"ಅದೇ ರೀತಿ ಇದೀಗ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ದರ 80 ರೂ.ಗೆ ತಲುಪಿದೆ. ಅದರಲ್ಲಿ ಸಣ್ಣ ಗಾತ್ರದ, ಗುಣಮಟ್ಟವಲ್ಲದ ಈರುಳ್ಳಿ 60 ರೂ.ಗೆ ಲಭ್ಯವಾಗುತ್ತಿವೆ. ಹೀಗಾಗಿ ಮಹಾರಾಷ್ಟ್ರ, ಮಧ್ಯಪ್ರದೇಶದಿಂದ ಗುಣಮಟ್ಟದ ಈರುಳ್ಳಿಯನ್ನು ಖರೀದಿಸಿ, ವಿತರಣೆ ಮಾಡಲು ಆರಂಭಿಸಿದೆ. ಅದೇ ರೀತಿ ಹುಬ್ಬಳ್ಳಿ ಧಾರವಾಡದಲ್ಲಿ ಕೆ.ಜಿಗೆ 35 ರೂ.ನಂತೆ ಈರುಳ್ಳಿಯನ್ನು ಮಾರಾಟ ಮಾಡಲಾಗುತ್ತಿದೆ. ನಗರದಲ್ಲಿಯೂ ಕೂಡ 8-10 ವಾಹನಗಳ ಮೂಲಕ ವಿವಿಧ ಪ್ರದೇಶಗಳಲ್ಲಿ ಗ್ರಾಹಕರಿಗೆ ಈರುಳ್ಳಿ ಮಾರಾಟ ಮಾಡಲಾಗುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗುವವರೆಗೆ ಮಾರಾಟ ಮುಂದುವರಿಯಲಿದೆ. ಪ್ರತಿದಿನವು ವಿತರಣೆ ಜಾಗವನ್ನು ಗುರುತಿಸಿ ಜನನಿಬಿಡ ಪ್ರದೇಶಗಳಲ್ಲಿ ವ್ಯಾಪಾರ ಮಾಡಲಾಗುತ್ತಿದ್ದು, ಬೆಲೆ ಕಡಿಮೆಯಾಗುವರೆಗೂ ಈ ವ್ಯಾಪಾರ ಮಾಡಲಾಗುತ್ತದೆ ಎಂದು ಎನ್‌ಸಿಸಿಎಫ್ ಸಿಬ್ಬಂದಿ ವೀರೇಶ ಹೇಳಿದರು.
ಇದನ್ನೂ ಓದಿ: ಬೆಳಗಾವಿ: ಎಪಿಎಂಸಿಯಲ್ಲಿ ಈರುಳ್ಳಿಗೆ ಬಂಪರ್ ಬೆಲೆ: ರೈತರ ಮೊಗದಲ್ಲಿ ಮಂದಹಾಸ - Onion rate increasing in Belagavi