ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಗೋಪಾಲಯ್ಯ ಅವರಿಗೆ ಕೊಲೆ ಬೆದರಿಕೆ ವಿಚಾರ ವಿಧಾನ ಪರಿಷತ್ನಲ್ಲಿ ಪ್ರತಿಧ್ವನಿಸಿತು. ಕಲಾಪದಲ್ಲಿ ವಿಧಾನ ಪರಿಷತ್ನ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ವಿಷಯ ಪ್ತಸ್ತಾಪಿಸುತ್ತಿದ್ದಂತೆ ಸದನದಲ್ಲಿ ಕೆಲ ಕಾಲ ಆಡಳಿತ- ವಿಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೆಯಿತು.
ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಚುನಾಯಿತ ಪ್ರತಿನಿಧಿಯಾದ ಗೋಪಾಲಯ್ಯಗೆ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಪದ್ಮರಾಜ್ ಎಂಬಾತ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಎಲ್ಲಿಗೆ ಬಂದಿದೆ ಎಂದು ಸೂಚಿಸುತ್ತದೆ. ಈ ಬಗ್ಗೆ ಗೃಹ ಮಂತ್ರಿಯವರನ್ನ ಕರೆಯಿಸಿ ಸದನಕ್ಕೆ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸಚೇತಕ ಸಲೀಂ ಅಹಮ್ಮದ್, ಸದನದ ಕೆಳಮನೆಯಲ್ಲಿ ಚರ್ಚೆಯಾಗಿದೆ. ಇಲ್ಲಿ ಚರ್ಚೆಯಾಗೋದು ಬೇಡ ಎಂದು ಹೇಳುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರ ವಿರೋಧಕ್ಕೆ ಕಾರಣವಾಯಿತು. ಮಾತಿನ ಚಕಮಕಿಯಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಉಪಸಭಾಪತಿ ಎಂ.ಕೆ.ಪ್ರಾಣೇಶ್, ರಾಜಕೀಯವಾಗಿ ಚರ್ಚೆ ಮಾಡೋದು ಸರಿಯಿಲ್ಲ, ಪಕ್ಷಾತೀತವಾಗಿ ಚರ್ಚೆಯಾಗಬೇಕು. ಚುನಾಯಿತ ಪ್ರತಿನಿಧಿಗಳಿಗೆ ರಕ್ಷಣೆ ನೀಡುವ ಕೆಲಸವಾಗಬೇಕು ಎಂದರು.
ಸರ್ಕಾರದ ಪರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, "ಶಾಸಕ ಗೋಪಾಲಯ್ಯ ಅವರಿಗೆ ಕೊಲೆ ಬೆದರಿಕೆ ಬಂದಿರುವ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗಿದೆ. ಗೋಪಾಲಯ್ಯ ಪರವಾಗಿ ಸರ್ಕಾರವಿದೆ. ಪಕ್ಷಾತೀತವಾಗಿ ಸ್ಪಂದಿಸಿದ್ದೇವೆ. ಗೋಪಾಲಯ್ಯ ಪರವಾಗಿ ಇಂದು ಅನುಕಂಪ ತೋರಿಸುತ್ತಿದ್ದೀರಾ?, ಚುನಾವಣೆ ಪೂರ್ವ ಪತ್ರಿಕಾಗೋಷ್ಠಿ ನಡೆಸಿ ಶೂಟ್ ಮಾಡೋಕೆ ರೆಡಿ ಇದ್ದೀನಿ ಅಂತಾ ಹೇಳಿದವನಿಗೆ ಬಿಜೆಪಿ ಟಿಕೆಟ್ ನೀಡಿದೆ. ಈಗಿನ ಕಾಳಜಿ ಆಗ ಯಾಕೆ ಬಂದಿಲ್ಲ. ಗೋಪಾಲಯ್ಯ ಒಂದು ನ್ಯಾಯ, ನನ್ನಗೊಂದು ನ್ಯಾಯನಾ?. ಅನುಕಂಪ ನನ್ನ ಮೇಲೆ ಯಾಕೆ ತೋರಿಸಿಲ್ಲ" ಎಂದು ಪ್ರಶ್ನಿಸಿದರು.
ಈ ವೇಳೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, "ಗೋಪಾಲಯ್ಯ ಅವರಿಗೆ ಕೊಲೆ ಬೆದರಿಕೆ ಬಂದಿರುವ ಸಂಬಂಧ ಪದ್ಮರಾಜ್‌ನನ್ನ ಬಂಧಿಸಲಾಗಿದೆ. ಈ ಹಿಂದೆ ಶಾಸಕ ಸುರೇಶ್ ಕುಮಾರ್ಗೆ ಬೆದರಿಕೆ ಹಾಕಿರುವ ಬಗ್ಗೆ ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಗೋಪಾಲಯ್ಯಗೆ ಕೊಲೆ ಬೆದರಿಕೆ ಹಾಕಿದ ಮಾಜಿ ಕಾರ್ಪೊರೇಟರ್ ಪದ್ಮರಾಜ್ ಬಂಧನ: ಜಿ.ಪರಮೇಶ್ವರ್