ಬೆಂಗಳೂರು : ಬರ ಪರಿಹಾರದ ವಿಚಾರದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ಮಾಡುವ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ಕೇವಲ ರಾಜಕೀಯ ಸ್ಟಂಟ್ ಆಗಿದೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಟೀಕಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಪರಿಹಾರದ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಗೆ ಹೋಗಿ ಪ್ರತಿಭಟನೆ ಮಾಡುವುದಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಬರ ಪರಿಹಾರದ ವಿಚಾರದಲ್ಲಿ ಹಿಂದೆ ಯಾವಾಗ ಎಷ್ಟು ಬಿಡುಗಡೆ ಆಗಿತ್ತು ಎಂದು ಅವರು ಹೇಳಬೇಕು ಎಂದಿದ್ದಾರೆ.
ಈಗ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಹಾಗಾಗಿ ಇದು ಕೇವಲ ರಾಜಕೀಯ ಸ್ಟಂಟ್ ಅಷ್ಟೇ. ರಾಜ್ಯದ ರೈತರಿಗೆ ಒಂದು ನಯಾಪೈಸೆ ಬಿಡುಗಡೆ ಮಾಡಿಲ್ಲ. ಸದನದಲ್ಲೇ ಎರಡು ಸಾವಿರ ಪರಿಹಾರ ಕೊಡುವುದಾಗಿ ಹೇಳಿದ್ದರೂ ಹಣ ಬಿಡುಗಡೆ ಮಾಡಿಲ್ಲ. ಇದಕ್ಕೆ ಅವರು ಮೊದಲು ಉತ್ತರ ಕೊಡಲಿ. ರೈತರೇ ಸರ್ಕಾರಕ್ಕೆ ಎರಡು ಸಾವಿರ ರೂ. ಚೆಕ್ ಕೊಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸರ್ಕಾರ. ಭ್ರಷ್ಟಾಚಾರ ಬಿಟ್ಟು ಬೇರೇನೂ ಮಾಡುತ್ತಿಲ್ಲ ಎಂದು ಟೀಕಿಸಿದ್ದಾರೆ.
ಯಡಿಯೂರಪ್ಪ ಸಿಎಂ ಆಗಿದ್ದಾಗ, ನಾನು ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರವನ್ನು ಕಾಯದೇ ನಾವೇ ಹಿಂದೆ ಪರಿಹಾರ ಕೊಟ್ಟಿದ್ದೇವೆ. ಈ ರೀತಿಯ ಬೇಕಾದಷ್ಟು ಉದಾಹರಣೆ ಇದೆ. ಅತಿ ಹೆಚ್ಚು ಬಜೆಟ್ ಮಂಡಿಸಿರುವ ಸಿಎಂ ಎರಡು ಮೂರು ಸಾವಿರ ಕೋಟಿ ರೈತರಿಗೆ ಮೀಸಲಿಡ ಬಹುದಿತ್ತು ಎಂದರು.
ನಮ್ಮ ಮೇಲೆ 40 ಪರ್ಸೆಂಟ್ ಕಮೀಷನ್ ಆರೋಪ ಮಾಡಿದ್ದರು. ಆದರೆ, ಈಗ ಅವರ ಮೇಲೆಯೇ ಆರೋಪ ಬಂದಿದೆ.
ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ, ಕಾಂಗ್ರೆಸ್, ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಇಡೀ ದೇಶಕ್ಕೆ ಎಟಿಎಂ ಆಗಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ದುರ್ಬಳಕೆ ಮಾಡಲಾಗುತ್ತಿದೆ. ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಟೀಕಿಸಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿಗೆ ಸೋಲಾದ ಹಿನ್ನೆಲೆ ನಾನು ಮಾತನಾಡುವ ನೈತಿಕತೆ ಇಲ್ಲ ಎಂದು ಎಂ ಬಿ ಪಾಟೀಲ್ ಹೇಳಿದ್ದಾರೆ. ಆದರೆ ನನ್ನ ನೈತಿಕತೆ ತೆಗೆದುಕೊಂಡು ಅವರೇನು ಮಾಡುತ್ತಾರೆ. ಕಾಂಗ್ರೆಸ್ ಶಾಸಕರೇ ನೈತಿಕವಾದ ಬೆಂಬಲವನ್ನು ವಾಪಸ್ ಪಡೆಯುವ ಕಾಲ ಬರಲಿದೆ ಎಂದರು.
ಡಿ.ಕೆ ಸುರೇಶ್, ವೀರಪ್ಪ ಮೊಯಿಲಿಯವರು ದೇಶದ ಕ್ಷಮೆ ಕೇಳಬೇಕು- ಪಿ.ರಾಜೀವ್ : ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಅವರ ದೇಶವಿರೋಧಿ ಹೇಳಿಕೆ ಖಂಡನೀಯವಾಗಿದೆ. ಅವರು ತಮ್ಮ ಹೇಳಿಕೆ ಸಂಬಂಧ ದೇಶದ ಮುಂದೆ ಕ್ಷಮೆ ಕೇಳಬೇಕು. ವೀರಪ್ಪ ಮೊಯಿಲಿ ಅವರು ಪ್ರಧಾನಿಯವರನ್ನು ಜಾತಿಗೆ ಜೋಡಿಸಿ (ಟ್ಯಾಗ್ ಮಾಡಿ) ಮಾತನಾಡಿದ್ದಕ್ಕೆ ಈ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಒತ್ತಾಯಿಸಿದ್ದಾರೆ.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಕುಣಿಯಲಾಗದವನಿಗೆ ನೆಲ ಡೊಂಕು ಎಂಬಂತೆ ಇದ್ದಾರೆ. 65 ವರ್ಷ ಇವರಿಗೆ ಕುಣಿಯಲು ಆಗಲೇ ಇಲ್ಲ ಎಂದು ಟೀಕಿಸಿದರು.
ಕಾಂಗೆಸ್ಸಿನ ವೀರಪ್ಪ ಮೊಯಿಲಿ ಅವರು, ನರೇಂದ್ರ ಮೋದಿಯವರು ಬ್ರಾಹ್ಮಣರಲ್ಲ; ಅವರನ್ನು ಅಯೋಧ್ಯೆಯ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಹೇಗೆ ಒಳಗೆ ಬಿಟ್ಟಿದ್ದೀರಿ? ಎಂದು ಕೇಳಿದ್ದಾರೆ. ಇದು ಸಂವಿಧಾನ ವಿರೋಧಿ ಅಲ್ಲವೇ? ಎಂದು ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಪ್ರತಿಫಲ ಅವರು ಬೇಗನೇ ಎದುರಿಸುತ್ತಾರೆ : ಕಾಂಗ್ರೆಸ್ ಮುಖಂಡರ ಮನಸ್ಸಿನಲ್ಲಿ ಏನಿತ್ತೋ ಅದು ಸಂಸದ ಡಿ. ಕೆ ಸುರೇಶ್ ಅವರ ಬಾಯಲ್ಲಿ ಬಂದಿದೆ. ಅವರು ಮತ್ತೆ ದೇಶ ವಿಭಜನೆ ಮಾಡೋದರಲ್ಲಿ ಎರಡು ಮಾತಿಲ್ಲ. ಇದರ ಪ್ರತಿಫಲ ಅವರು ಬೇಗನೇ ಎದುರಿಸುತ್ತಾರೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅವರು ಹೇಳಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜನಪರ ಯೋಜನೆ ಮಂಡಿಸಿದೆ. ಪೂರ್ಣವಾಗಿ ಅರ್ಥ ಮಾಡಿಕೊಳ್ಳದೇ ಸಂಸದ ಡಿ ಕೆ ಸುರೇಶ್ ನಮಗೆ ಸರಿಯಾದ ರೀತಿಯಲ್ಲಿ ಅನುದಾನ ಕೊಟ್ಟಿಲ್ಲ. ಹೀಗಾಗಿ ಪ್ರತ್ಯೇಕ ರಾಷ್ಟ್ರವನ್ನೇ ಮಾಡಿ ಎಂಬ ಮಾತು ಹೇಳಿದ್ದಾರೆ.
ಅದು ಏನು ಹೊಸತೇನಲ್ಲ. ದೇಶದ ವಿಭಜನೆಯಲ್ಲಿ ಕಾಂಗ್ರೆಸ್ ಅವರು ಬೆಳೆದುಕೊಂಡು ಬಂದಿದ್ದಾರೆ. ಪಾಕಿಸ್ತಾನ ಮಾಡಿದ್ದು ಅವರೇ ಬಾಂಗ್ಲಾದೇಶ ಮಾಡಿದ್ದು ಅವರೇ. 1962ರಲ್ಲಿ ನೆಹರು ಅವರು ಪ್ರಧಾನಿ ಆಗಿದ್ದಾಗ ಚೀನಾಗೆ ದೊಡ್ಡ ಪ್ರಮಾಣದ ಭೂಮಿ ಬಿಟ್ಟುಕೊಟ್ಟಿದ್ದರು. ಅವರಿಗೆ ರಾಷ್ಟ್ರ ಭಕ್ತಿಗಿಂತ ವೋಟಿನ ರಾಜಕಾರಣನೇ ಮುಖ್ಯ ಆಗಿದೆ. ಕಾಂಗ್ರೆಸ್ ಮುಖಂಡರ ಮನಸ್ಸಿನಲ್ಲಿ ಏನಿತ್ತೋ ಅದು ಸಂಸದ ಡಿ. ಕೆ ಸುರೇಶ್ ಅವರ ಬಾಯಲ್ಲಿ ಬಂದಿದೆ. ಅವರು ಮತ್ತೆ ದೇಶ ವಿಭಜನೆ ಮಾಡೋದರಲ್ಲಿ ಎರಡು ಮಾತಿಲ್ಲ. ಇದರ ಪ್ರತಿಫಲ ಅವರು ಬೇಗನೇ ಎದುರಿಸುತ್ತಾರೆ ಎಂದಿದ್ದಾರೆ.
ಹಿಂದೂ ಕಾರ್ಯಕರ್ತರನ್ನು ಬೆದರಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ: ಕೆರೆಗೋಡು ಕೇಸರಿ ಧ್ವಜ ಅಪಮಾನ ಪ್ರಕರಣದ ಪರಿಣಾಮ ಮಂಡ್ಯ ಜಿಲ್ಲೆಯಲ್ಲಿ ಸ್ಫೋಟಗೊಂಡ ಜನರ ರಾಮಭಕ್ತಿ ಹನುಮಶಕ್ತಿ ಕಂಡು ಬೆಚ್ಚಿಬಿದ್ದಿರುವ ಕಾಂಗ್ರೆಸ್ ಸರ್ಕಾರ, ಅಧಿಕಾರಿಗಳನ್ನು ಛೂ ಬಿಟ್ಟು ಸಾಮಾಜಿಕ ಜಾಲತಾಣದ ಹಿಂದೂ ಕಾರ್ಯಕರ್ತರನ್ನು ಬೆದರಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಟೀಕಿಸಿದ್ದಾರೆ.
ಇದನ್ನೂ ಓದಿ : ದೇಶ ವಿಭಜನೆಯ ಬಗ್ಗೆ ಡಿಕೆಶಿ ಹೇಳಿಕೆ: ಮತದ ಆಸೆಗೆ ದೇಶ ಬೇರ್ಪಡಿಸುವ ಹೇಳಿಕೆ ನೀಡಿದ್ದಾರೆ: ಬೆಲ್ಲದ ಆರೋಪ