ವಿಜಯಪುರ: ಇಲ್ಲಿನ ಮನಗೂಳಿ ಸಂಸ್ಥಾನ ಮಠದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿಮಾನಿಯೊಬ್ಬರು ಸುಗಂಧರಾಜ ಪುಷ್ಪದ ಹಾರ ಹಾಕಲು ಮುಂದಾಗಿದ್ದು, ಹಾರ ಹಾಕಿಸಿಕೊಳ್ಳಲು ಡಿಸಿಎಂ ನಯವಾಗಿ ತಿರಸ್ಕರಿಸಿದರು.
ಡಿ.ಕೆ.ಶಿವಕುಮಾರ್ ಶನಿವಾರ ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಪ್ರವಾಸ ಪಟ್ಟಿಯಲ್ಲಿ ಯಾರೂ ಕೂಡಾ ಅವರಿಗೆ ಸುಗಂಧರಾಜ ಪುಷ್ಪದ ಹಾರ ಹಾಕಬಾರದು ಎಂದು ನಮೂದಿಸಲಾಗಿತ್ತು. ಈ ಸೂಚನೆಯ ಅರಿವಿಲ್ಲದ ಅಭಿಮಾನಿಯೊಬ್ಬರು ಮಠದ ಕಾರ್ಯಕ್ರಮದಲ್ಲಿ ಸುಗಂಧರಾಜ ಪುಷ್ಪದ ಹಾರ ಹಾಕಲು ಬಂದಿದ್ದರು.
ಇದನ್ನು ಕಂಡ ಡಿಸಿಎಂ, ಹಾರವನ್ನು ಇಲ್ಲಿಂದ ಕೊಂಡೊಯ್ಯಿರಿ ಎಂದು ಸೂಚಿಸಿದರು. ತಕ್ಷಣ ಅಭಿಮಾನಿ ಸ್ಥಳದಿಂದ ತೆರಳಿದರು. ವೇದಿಕೆ ಮೇಲೆ ಕುಳಿತಿದ್ದ ಕುರ್ಚಿಯ ಎದುರಿನ ಟಿಪಾಯಿ ಮೇಲೂ ಇಡಲಾಗಿದ್ದ ಸುಗಂಧರಾಜ ಹಾರವನ್ನೂ ಡಿಸಿಎಂ ತೆಗೆಸಿದರು.
ಹಿರೇಮಠದ ಸಂಗನಬಸವ ಕಲ್ಯಾಣ ಮಂಟಪ ಲೋಕಾರ್ಪಣೆ, ಶ್ರೀಗಳ ಧ್ವನಿ ಸುರುಳಿ ಬಿಡುಗಡೆ, ಸಂಗನಬಸವ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಿಕೆಶಿ ಭಾಗಿಯಾದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, "ಎಲ್ಲ ಧರ್ಮಗಳೂ ಶಾಂತಿ, ಸಹೋದರತೆಯನ್ನೇ ಸಾರುತ್ತವೆ. ಧರ್ಮ ಯಾವುದಾದರೂ ದೇವರೊಬ್ಬನೇ. ಧರ್ಮದಲ್ಲಿ ರಾಜಕಾರಣ ಇರಬೇಕು, ರಾಜಕಾರಣದಲ್ಲಿ ಧರ್ಮ ಇರಬಾರದು. ಆದರೆ ಈಚೆಗೆ ಇದು ಆಗುತ್ತಿಲ್ಲ" ಎಂದು ವಿಷಾದಿಸಿದರು.
ಸಚಿವ ಹಾಗೂ ಸ್ಥಳಿಯ ಶಾಸಕ ಶಿವಾನಂದ ಪಾಟೀಲ್ ಮಾತನಾಡಿ, "ಇದೊಂದು ಸ್ಮರಣೀಯ ಕಾರ್ಯಕ್ರಮ. ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಸಂಗನಬಸವ ಸ್ವಾಮೀಜಿ ಚಿಕ್ಕ ವಯಸ್ಸಲ್ಲೇ ಪೀಠ ವಹಿಸಿಕೊಂಡು ಧಾರ್ಮಿಕ ಹಾಗೂ ಜನಪರ ಕೆಲಸ ಮಾಡುತ್ತಿದ್ದಾರೆ" ಎಂದರು.
ಇದನ್ನೂ ಓದಿ: 'ಆರ್ ಆಶೋಕ್ ಹಿಂದು ಇರಬಹುದು, ಆದ್ರೆ ಅವನಗಿಂತ ಒಳ್ಳೆಯ ಹಿಂದು ನಾನು' : ಸಿಎಂ ಸಿದ್ದರಾಮಯ್ಯ