ಬೆಂಗಳೂರು: ಈವರೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹತ್ತು ಬಜೆಟ್ ಮಂಡಿಸಿದೆ. ಆದ್ರೆ ಇಷ್ಟು ಕಳಪೆ ಕೇಂದ್ರ ಬಜೆಟ್ಅನ್ನು ನಾನೂ ಯಾವತ್ತೂ ನೋಡಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಂದ್ರ ಬಜೆಟ್ನಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ. ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾದಾಗ ನೀವು ಕರ್ನಾಟಕದ ಪ್ರತಿನಿಧಿಯಾಗಿದ್ದೀರಿ. ನಮಗೆ ಹೆಚ್ಚಿನ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದೆ. ರಾಜ್ಯದ ನೀರಾವರಿ ಯೋಜನೆಗಳಿಗೆ ಅನುದಾನ ಕೊಡುವ ಬಗ್ಗೆ ಅವರು ಭರವಸೆ ನೀಡಿದ್ದರು. ಆದ್ರೆ ಯಾವ ಸಹಾಯವೂ ಇಲ್ಲ. ಕರ್ನಾಟಕಕ್ಕೂ ಇಲ್ಲ, ದಕ್ಷಿಣ ಭಾರತಕ್ಕೂ ಇಲ್ಲ ಎಂದು ಕಿಡಿಕಾರಿದರು.
ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ. ಇದರ ಬಗ್ಗೆ ಹೋರಾಟ ಮಾಡಬೇಕಾ ಎಂಬ ಮುಂದೆ ನಿರ್ಧಾರ ಮಾಡುತ್ತೇವೆ. ಲೋಕಸಭೆ ಚುನಾವಣೆ ಹಿನ್ನೆಲೆ ಜನರಿಗೆ ಏನು ಕೊಡುತ್ತೇವೆ ಎಂಬ ದಿಕ್ಸೂಚಿಯನ್ನಾದರೂ ಹೇಳಬೇಕಿತ್ತು. ಈ ಬಜೆಟ್ ನಿಂದ ನಮಗೆ ಬೇಸರವಾಗಿದೆ. ಬಿಜೆಪಿಯ 26 ಸಂಸದರು ಇದ್ದಾರೆ. ಅವರು ಏನಾದರು ಗಿಫ್ಟ್ ತರಬೇಕಿತ್ತಲ್ಲ. ಏನು ತಂದಿದ್ದಾರೆ. ಅವರು ಒಟ್ಟಾಗಿ ಈಗಲಾದರೂ ಹೋರಾಟ ಮಾಡಲಿ ಎಂದು ಡಿಕೆಶಿ ಹೇಳಿದರು.
ಸಂಸದ ಡಿ ಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ವಿಚಾರ: ಈ ಕುರಿತು ಪ್ರತಿಕ್ರಿಯಿಸಿದ ಅವರು ನಾನು ಅಖಂಡ ಭಾರತದವನು. ಡಿ.ಕೆ. ಸುರೇಶ್ ಜನರ ಅಭಿಪ್ರಾಯ, ತಮ್ಮ ಭಾವನೆಯನ್ನು ಹೇಳಿದ್ದಾರೆ ಅಷ್ಟೇ. ನಾನು ಅಖಂಡ ಭಾರತದವನಾಗಿದ್ದೇನೆ. ಭಾರತ ಒಗ್ಗಟ್ಟಿನಿಂದ ಇರಬೇಕು, ನಾವೆಲ್ಲರೂ ಭೂತಾಯಿ ಮಕ್ಕಳು. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಎಲ್ಲರೂ ಒಂದೇ. ಎಲ್ಲರನ್ನೂ ಕೇಂದ್ರ ಸರ್ಕಾರ ಒಂದೇ ರೀತಿ ಕಾಣಬೇಕು ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಮತಕ್ಕಾಗಿ ಗ್ಯಾರಂಟಿ ಪ್ರಕಟಿಸದೇ ಅಭಿವೃದ್ಧಿ ದೃಷ್ಟಿಯಿಂದ ಬಜೆಟ್ ಮಂಡಿಸಲಾಗಿದೆ: ಆರ್.ಅಶೋಕ್
ಕೇಂದ್ರ ಬಜೆಟ್ ಬಗ್ಗೆ ರಾಜ್ಯ ಸಚಿವರ ಪ್ರತಿಕ್ರಿಯೆ: ಕೇಂದ್ರ ಬಜೆಟ್ ಬಗ್ಗೆ ರಾಜ್ಯ ಸಚಿವರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಸಚಿವ ಈಶ್ವರ ಖಂಡ್ರೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಬಡವರ ರಕ್ತ ಬಸಿದು, ಬಲಿಷ್ಠರ ಬದುಕು ಬಂಗಾರ ಮಾಡುವ ಬಜೆಟ್ ಇದಾಗಿದೆ. ಇದು ಮಧ್ಯಂತರ ಬಜೆಟ್, ಲೇಖಾನುದಾನ ಮಾತ್ರ. ಹೀಗಾಗಿ ಬಜೆಟ್ ಮೇಲೆ ನಮಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಇದು ಅತ್ಯಂತ ಸಾಧಾರಣದಲ್ಲೇ ಸಾಧಾರಣ ಬಜೆಟ್. ಜನರಿಗಿದ್ದ ಎಲ್ಲ ನಿರೀಕ್ಷೆಯನ್ನೂ ಈ ಬಜೆಟ್ ಹುಸಿ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ತೆರಿಗೆದಾರರಿಗೆ ಮತ್ತೆ ನಿರಾಶೆಯಾಗಿದೆ. ಕಾರ್ಪೊರೇಟ್, ಸಾಂಸ್ಥಿಕ ತೆರಿಗೆಯನ್ನು ಶೇ.30ರಿಂದ ಶೇ.22ಕ್ಕೆ ಇಳಿಕೆ ಮಾಡಿರುವುದರಿಂದ ಉದ್ದಿಮೆದಾರರು ಖುಷಿಯಾಗಿರುತ್ತಾರೆ. ಬಡವರ ರಕ್ತ ಬಸಿದು, ಬಲಿಷ್ಠರ ಬದುಕು ಬಂಗಾರ ಮಾಡುವ ಕಾರ್ಯದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ತೊಡಗಿದೆ. ಇದು ಖಂಡನೀಯ. 18 ಲಕ್ಷ ಕೋಟಿ ರೂ. ವಿತ್ತೀಯ ಕೊರತೆಯ ಬಜೆಟ್ ಇದಾಗಿದ್ದು, ಈಗಾಗಲೇ ದೇಶವನ್ನು ಸಾಲದ ಸುಳಿಗೆ ಸಿಲುಕಿಸಿರುವ ಕೇಂದ್ರ ಬಿಜೆಪಿ ಸರ್ಕಾರ ದೇಶದ ಜನರ ಮೇಲೆ ಮತ್ತಷ್ಟು ಹೊರೆ ಹೊರಿಸುವುದರಲ್ಲಿ ಸಂದೇಹವಿಲ್ಲ ಎಂದು ಕಿಡಿ ಕಾರಿದರು.
ನಮ್ಮ ಯೋಜನೆ ನೋಡಿ ಕಲಿಯಬಹುದಿತ್ತು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಮಂಡಿಸಿರುವ ಬಜೆಟ್ ಅತ್ಯಂತ ನಿರಾಸೆ ಮೂಡಿಸಿದೆ. ರಾಜ್ಯಕ್ಕೆ, ಅದರಲ್ಲೂ ಮಹಿಳೆಯರಿಗೆ ಹಲವು ಕೊಡುಗೆಗಳನ್ನು ನಿರೀಕ್ಷೆ ಮಾಡಲಾಗಿತ್ತು. ಎಲ್ಲವೂ ಹುಸಿಯಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ತಂದಿರುವ ಜನಪರ ಯೋಜನೆಗಳನ್ನು ನೋಡಿಯಾದರೂ ಕೇಂದ್ರ ಸರಕಾರ ಬಜೆಟ್ ಮಂಡಿಸಬಹುದಿತ್ತು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರತಿಕ್ರಿಯಿಸಿದ್ದಾರೆ.
ಕಾರ್ಪೋರೇಟ್ ವಲಯದ ತೆರಿಗೆ ಪ್ರಮಾಣ ಇಳಿಸಿರುವುದು, ಹೊಸ ವಿಮಾನಗಳ ಖರೀದಿ, ವಿಮಾನ ನಿಲ್ದಾಣಗಳ ನಿರ್ಮಾಣ, ಬಡವರ ಆರೋಗ್ಯ ವಿಮೆಯ ಮೇಲೆ ತೆರಿಗೆ ವಿಧಿಸಿರುವುದು ಇವೆಲ್ಲ ನೋಡಿದರೆ ಇದೊಂದು ಶ್ರೀಮಂತರಿಗಾಗಿಯೇ ಮಂಡಿಸಿದ ಬಜೆಟ್ ಎನಿಸುತ್ತದೆ. ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವ ಬಜೆಟ್ ಇದಾಗಿದೆ. ಬಡವರಿಗಾಗಿ ಬಜೆಟ್ ನಲ್ಲಿ ಏನನ್ನೂ ಕೊಟ್ಟಿಲ್ಲ. ನಾವು ರಾಜ್ಯದಲ್ಲಿ ಹಲವಾು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಅವುಗಳನ್ನು ಮಾದರಿಯಾಗಿಟ್ಟುಕೊಂಡು ಬಜೆಟ್ ಜಾರಿಗೊಳಿಸಿದ್ದರೆ ಜನರು ಮೆಚ್ಚುತ್ತಿದ್ದರು ಎಂದಿದ್ದಾರೆ.
ಜನರಿಗೆ ಯಾವುದೇ ಪ್ರಯೋಜನ ಇಲ್ಲ: ನುಡಿದಂತೆ ನಡೆಯದ ಬಜೆಟ್ನ ಘೋಷಣೆಗಳಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ ಎಂದ ಸಚಿವ ಡಾ.ಹೆಚ್. ಸಿ.ಮಹದೇವಪ್ಪ, ಚುನಾವಣೆ ವರ್ಷದಲ್ಲಿ 2024ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶಕ್ಕೆ ಹೊಸ ದಿಕ್ಕು ಮತ್ತು ಭರವಸೆ ಸಿಕ್ಕಿದೆ, ಎಲ್ಲರಿಗೂ ಮನೆ, ಎಲ್ಲರಿಗೂ ನೀರು, ಪ್ರತಿ ಮನೆಗೆ ವಿದ್ಯುತ್‌ಗೆ ಒತ್ತು ಕೊಡಲಾಗುತ್ತಿದೆ. ಆರ್ಥಿಕತೆಯಲ್ಲಿ ದೊಡ್ಡ ಬದಲಾವಣೆಗಳು ಕಂಡುಬರುತ್ತಿವೆ. ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪುತ್ತಿವೆ ಎಂದು ಹೇಳಿದ್ದು ಮೊದಲ ಬಾರಿಗೆ ಬಡವರು, ಮಹಿಳೆಯರು, ಯುವಕರು ಮತ್ತು ಅನ್ನದಾತರು ಎಂಬ ಪದವನ್ನು ಬಳಸಿದ್ದಾರೆ. ತಮ್ಮ ಆಡಳಿತ ಅವಧಿಯ ಉದ್ದಕ್ಕೂ ಕೇವಲ ಕಾರ್ಪೋರೇಟ್ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರವು ಇದೀಗ ಚುನಾವಣೆಯ ಉದ್ದೇಶದಿಂದ ಹಲವು ಯೋಜನೆಗಳನ್ನು ಈ ಹಿಂದಿನ ಬಜೆಟ್ ನಂತೆಯೇ ಘೋಷಿಸಿದ್ದು ಇವುಗಳೂ ಕೂಡಾ ಹಿಂದೆ ಪ್ರಧಾನಿಗಳು ಘೋಷಿಸಿದ 20 ಲಕ್ಷ ಕೋಟಿ ಕರೋನಾ ಪ್ಯಾಕೇಜ್ ರೀತಿಯ ಸುಳ್ಳುಗಳ ಸರಮಾಲೆಯೇ ಆಗಿದೆ ಎಂದು ಕಿಡಿಕಾರಿದ್ದಾರೆ.