ಬೆಂಗಳೂರು: "ಕರ್ನಾಟಕದಲ್ಲಿ ಕನ್ನಡ ಬೋರ್ಡ್ ಕಡ್ಡಾಯ ಕಾಯ್ದೆಯ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ಯಾವ ಕಾರಣಕ್ಕೆ ವಾಪಸ್ ಕಳಿಸಿದ್ದಾರೆ ಅನ್ನೋದು ಗೊತ್ತಿಲ್ಲ. ಆದರೆ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಗುತ್ತದೆ" ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ವಿಧಾನಸಭೆ ಅಧಿವೇಶನಕ್ಕೂ ಮುಂಚೆ ಸುಗ್ರೀವಾಜ್ಞೆ ಹೊರಡಿಸಿದ್ದೆವು, ಕನ್ನಡ ಭಾಷೆ, ಸಂಸ್ಕೃತಿ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದರು. ನಾಗರಿಕರಿಗೆ, ವ್ಯಾಪಾರಿಗಳಿಗೆ ತೊಂದರೆಯಾಗಬಾರದು ಎನ್ನುವುದನ್ನೂ ಗಮನದಲ್ಲಿಟ್ಟುಕೊಂಡು ಕಾಯ್ದೆ ಮಾಡಿದ್ದೇವೆ. ಆದರೂ ರಾಜ್ಯಪಾಲರು ಯಾಕೆ ಸುಗ್ರೀವಾಜ್ಞೆ ವಾಪಸ್ ಕಳುಹಿಸಿದ್ದಾರೆ ಅಂತ ಗೊತ್ತಿಲ್ಲ, ಈಗ ಅದರ ಬಗ್ಗೆ ಪರಿಶೀಲನೆ ಮಾಡುತ್ತೇನೆ. ವಿಧಾನಸಭೆ ಅಧಿವೇಶನದಲ್ಲಿ ವಿಧೇಯಕ ಮಂಡಿಸಿ ಪಾಸ್ ಮಾಡುತ್ತೇವೆ. ರಾಜ್ಯದ ಪರವಾಗಿ ಈ ಬಿಲ್ ತಂದಿದ್ದೇವೆ. ಯಾರೂ ಕೂಡ ವಿರೋಧ ವ್ಯಕ್ತಪಡಿಸಿಲ್ಲ. ಈ ಬಿಲ್ ಪಾಸ್ ಬಗ್ಗೆ ರಾಜ್ಯಪಾಲರು ಮರು ಪರಿಶೀಲನೆ ಮಾಡಬೇಕು'' ಎಂದು ಮನವಿ ಮಾಡುವುದಾಗಿ ತಿಳಿಸಿದರು.
ಕಾಂಗ್ರೆಸ್ ಶಾಸಕ ಮಾಗಡಿ ಬಾಲಕೃಷ್ಣ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿ, "ಮಾಗಡಿ ಬಾಲಕೃಷ್ಣ ಹೇಳಿದ್ದು ಬಿಜೆಪಿಯವರು ಆ ರೀತಿ ಹೇಳುತ್ತಿದ್ದಾರೆ, ಎಚ್ಚರಿಕೆಯಿಂದ ಇರಿ ಎಂದಷ್ಟೇ, ಗ್ಯಾರಂಟಿ ಯೋಜನೆ ಐದು ವರ್ಷಗಳ ಕಾಲ ಮುಂದುವರೆಯಲಿದೆ" ಎಂದು ಸ್ಪಷ್ಟನೆ ನೀಡಿದರು.
ಇನ್ನು ಮುಂದೂಡಿಕೆಯಾಗಿದ್ದ ಕಾಂಗ್ರೆಸ್ ಸಮಾವೇಶ ಫೆಬ್ರವರಿ 17ಕ್ಕೆ ನಿಗದಿಯಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಮಾವೇಶ ನಡೆಯುತ್ತದೆ. ಮಂಗಳೂರಿನಲ್ಲಿ ಸಮಾವೇಶ ನಡೆಯಲಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಇದನ್ನೂ ಓದಿ: ಕಾಂಗ್ರೆಸ್ ಬೆಂಬಲಿಸದಿದ್ದರೆ ಗ್ಯಾರಂಟಿ ರದ್ದು ಹೇಳಿಕೆ; ಕ್ಷಮೆಯಾಚಿಸುವಂತೆ ಶಾಸಕ ಬಾಲಕೃಷ್ಣಗೆ ವಿಜಯೇಂದ್ರ ಆಗ್ರಹ