ಬೆಂಗಳೂರು: ರಾಜ್ಯದ ಎಂಜಿನಿಯರ್ಗಳನ್ನು ಮನೆಹಾಳರು ಎಂದು ವಿರೋಧ ಪಕ್ಷದ ನಾಯಕ, ಬಿಜೆಪಿ ಮುಖಂಡ ಆರ್ ಅಶೋಕ್ ಅವರು ವಿಧಾನಸಭೆಯಲ್ಲಿ ಜರಿದಿರುವುದನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಖಂಡಿಸಿದ್ದಾರೆ. ಅಶೋಕ್ ಅವರು ಈ ಹೇಳಿಕೆ ಹಿಂಪಡೆದುಕೊಂಡು, ಎಂಜಿನಿಯರ್ಗಳ ಕ್ಷಮೆ ಕೇಳಬೇಕೆಂದು ಡಿಸಿಎಂ ಮನವಿ ಮಾಡಿದ್ದಾರೆ.
ಸರ್ ಎಂ ವಿಶ್ವೇಶ್ವರಯ್ಯ ಅವರಿಂದ ಹಿಡಿದು ಈಗಿನವರವರೆಗೂ ರಾಜ್ಯದ ಪ್ರಗತಿಯಲ್ಲಿ ಇಂಜಿನಿಯರ್ಗಳ ಕೊಡುಗೆ ಗಣನೀಯವಾದದ್ದು. ಅಣೆಕಟ್ಟೆಗಳು, ವಿದ್ಯುತ್ ಯೋಜನೆಗಳು, ಬೃಹತ್ ಕಟ್ಟಡಗಳು, ಐಟಿಬಿಟಿ ಸೇರಿದಂತೆ ನಾಡಿನ ಅಭಿವೃದ್ಧಿಗೆ ಅನೇಕ ಕ್ಷೇತ್ರಗಳಲ್ಲಿ ಇಂಜಿನಿಯರ್ಗಳು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಇಲ್ಲದೆ ರಾಜ್ಯ ಮತ್ತು ದೇಶದ ಪ್ರಗತಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹ ಪ್ರಗತಿಯ ರೂವಾರಿಗಳನ್ನು ಮನೆಹಾಳರು ಎಂದು ಅಶೋಕ್ ಅವರು ಕರೆದಿರುವುದು ಸರಿಯಲ್ಲ ಎಂದು ಶಿವಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಂಜಿನಿಯರ್ಗಳ ಕುರಿತು ಹೇಳಿಕೆಗೆ ಅಶೋಕ್ ಅವರು ತಕ್ಷಣವೇ ಇಂಜಿನಿಯರ್ಗಳ ಕ್ಷಮಾಪಣೆ ಕೇಳಬೇಕು. ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಶಿವಕುಮಾರ್ ಅವರು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.
ದೂರವಾಣಿ ಕರೆ: ಡಿಸಿಎಂ ಡಿ ಕೆ ಶಿವಕುಮಾರ್ ಅವರು ಅಶೋಕ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಇಂಜಿನಿಯರ್ಗಳನ್ನು ಅವಹೇಳನ ಮಾಡಿರುವ ಹೇಳಿಕೆಯನ್ನು ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದರು. ಇದಕ್ಕೂ ಮೊದಲು ಅಧ್ಯಕ್ಷ ದೇವರಾಜ್ ನೇತೃತ್ವದಲ್ಲಿ ಕರ್ನಾಟಕ ಇಂಜಿನಿಯರ್ಗಳ ಸಂಘದ ಪ್ರತಿನಿಧಿಗಳು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಗುರುವಾರ ಭೇಟಿ ಮಾಡಿ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳಲು ಅಶೋಕ್ ಅವರ ಮೇಲೆ ಒತ್ತಡ ತರಬೇಕೆಂದು ಕೋರಿದ್ದರು.
ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದ ಸಮಗ್ರ ಚರ್ಚೆಗೆ ಸದನ ಸಮಿತಿ ರಚನೆ: ಡಿಸಿಎಂ ಡಿ.ಕೆ.ಶಿವಕುಮಾರ್ - DCM D K Shivakumar