ಬೆಂಗಳೂರು : ಬೆಂಗಳೂರಿನ ರಸ್ತೆಗಳು ಪದೇ ಪದೆ ಕಿತ್ತು ಬರುತ್ತಿರುವ ಹಿನ್ನೆಲೆ ಶಾಶ್ವತ ರಸ್ತೆಗಳನ್ನು ನಿರ್ಮಿಸಲು 1800 ಕೋಟಿ ವೆಚ್ಚದಲ್ಲಿ 157 ಕಿ.ಮೀ ವೈಟ್ ಟಾಪಿಂಗ್ ರಸ್ತೆ ನಿರ್ಮಿಸಲಿದ್ದೇವೆ ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ತಿಳಿಸಿದ್ದಾರೆ.
ಬ್ರ್ಯಾಂಡ್ ಬೆಂಗಳೂರು, ಸುಗಮ ಸಂಚಾರ ಬೆಂಗಳೂರು ಪರಿಕಲ್ಪನೆಯಡಿ ಚಾಮರಾಜಪೇಟೆ, ಗಾಂಧಿನಗರ, ಮಲ್ಲೇಶ್ವರ, ಮಹಾಲಕ್ಷ್ಮೀಪುರಗಳಲ್ಲಿ 200 ಕೋಟಿ ವೆಚ್ಚದಲ್ಲಿ 19.67 ಕಿ.ಮೀ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬೀಳಬಾರದು ಎಂಬ ಉದ್ದೇಶದಿಂದ ವೈಟ್ ಟಾಪಿಂಗ್ ರಸ್ತೆ ಮಾಡಲಾಗುತ್ತಿದೆ. ಈ ರಸ್ತೆಗಳು ಸುಮಾರು 25 ವರ್ಷಗಳ ಕಾಲ ಬಾಳಿಕೆ ಬರುತ್ತವೆ ಎಂದರು.
ನಿತ್ಯ ಮೂರ್ನಾಲ್ಕು ವಾರ್ಡ್ಗಳಲ್ಲಿ ಈ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಕಾಲಮಿತಿಯಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲಾಗುವುದು. ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು 200 ಕಿ.ಮೀ ನಷ್ಟು ಹೊಸ ರಸ್ತೆ ನಿರ್ಮಾಣ ಮಾಡಲು ತೀರ್ಮಾನ ಮಾಡಿದ್ದು, ಉನ್ನತ ಗುಣಮಟ್ಟಕ್ಕಾಗಿ ವೈಟ್ ಟಾಪಿಂಗ್ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಸಚಿವ ಬಿ.ಝಡ್ ಜಮೀರ್ ಅಹ್ಮದ್ ಖಾನ್, ದಿನೇಶ್ ಗುಂಡೂರಾವ್, ಸ್ಥಳೀಯ ಶಾಸಕರಾದ ಡಾ. ಸಿ. ಎನ್ ಅಶ್ವತ್ಥ್ ನಾರಾಯಣ್, ಕೆ. ಗೋಪಾಲಯ್ಯ, ಪಾಲಿಕೆ ಆಡಳಿತಗಾರ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಲಯ ಜಂಟಿ ಆಯುಕ್ತೆ ಪಲ್ಲವಿ, ಪ್ರಧಾನ ಅಭಿಯಂತರ ಪ್ರಹ್ಲಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಡಿಕೆಶಿ ಶೂ ಕಳ್ಳತನ : ವೈಟ್ ಟಾಪಿಂಗ್ ರಸ್ತೆ ಕಾಮಗಾರಿ ಪೂಜೆಗಾಗಿ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರು ಸದಾಶಿವನಗರದ ಭಾಷ್ಯಂ ವೃತ್ತದ ಬಳಿ ಆಗಮಿಸಿದ್ದಾಗ ಪೂಜೆಗಾಗಿ ಅವರು ಶೂಗಳನ್ನು ಬಿಟ್ಟು ತೆರಳಿದ್ದರು. ಆದರೆ, ಪೂಜೆ ಮುಗಿಸಿ ವಾಪಸ್ ಆಗುವಷ್ಟರಲ್ಲೇ ಅವರ ಶೂ ನಾಪತ್ತೆಯಾಗಿದೆ.
ಕೆಲ ನಿಮಿಷಗಳ ಕಾಲ ಶೂಗಾಗಿ ಶಿವಕುಮಾರ್ ಮತ್ತು ಅವರ ಸಂಗಡಿಗರು ಹುಡುಕಾಟ ನಡೆಸಿದ್ದಾರೆ. ಆಗ ಎಲ್ಲೋಯ್ತಪ್ಪ ನನ್ನ ಶೂ ಎಂದು ಜನರಿಗೂ ಕೇಳಿದ್ದಾರೆ. ಶೂ ಕೊನೆಗೂ ಸಿಗದ ಹಿನ್ನೆಲೆ ಬೇರೆ ಕಾರ್ಯಕ್ರಮಗಳಿಗೆ ತಡವಾಗಿದ್ದರಿಂದ ಕಾರಿನಲಿದ್ದ ಬೇರೆ ಶೂ ಧರಿಸಿ ತೆರಳಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ದಕ್ಷಿಣ ವಲಯ ರಸ್ತೆಗಳು ಗುಂಡಿ ಮುಕ್ತ: ಬಿಬಿಎಂಪಿ ಘೋಷಣೆ