ಬೆಂಗಳೂರು: "ನಮಗೆ ಇದು ಎಚ್ಚರಿಕೆ ಗಂಟೆ, ನಾವು ಸರಿಮಾಡಿಕೊಳ್ಳಬೇಕಿದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಎಐಸಿಸಿಯಿಂದ ಚುನಾವಣೆ ಹಿನ್ನಡೆ ಪರಿಶೀಲನಾ ಸಮಿತಿ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿಂದು ಸರ್ಕಾರಿ ನಿವಾಸದ ಸಮೀಪ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಹೇಳಿದ್ದರು, ಹೀಗಾಗಿ, ಇವತ್ತು ಬೆಂಗಳೂರು ಶಾಸಕರ ಮೀಟಿಂಗ್ ಕರೆದಿದ್ದೇವೆ. ಎಲ್ಲಿ ತಪ್ಪಾಗಿದೆ ಎಂದು ಪರಿಶೀಲನೆ ಮಾಡುತ್ತೇವೆ ಎಂದರು.
ಈ ಕುರಿತಾಗಿ ಯಾರೂ ಕೂಡ ಮಾಧ್ಯಮಗಳೊಂದಿಗೆ ಮಾತನಾಡದಂತೆ ಸೂಚನೆ ನೀಡಿದ್ದೇನೆ. ನಮಗೆ 14-18 ಸೀಟ್ ಬರ್ತವೆ ಅಂತಿತ್ತು. ಅಷ್ಟು ಬಂದಿಲ್ಲ, ವಿಫಲರಾಗಿದ್ದೇವೆ. ಇದನ್ನು ನಾವು ಒಪ್ಪಿಕೊಳ್ಳಲೇಬೇಕು. ನನ್ನ ಕ್ಷೇತ್ರದಲ್ಲೂ ಕೂಡ ಹಿನ್ನಡೆಯಾಗಿದೆ. ಕೆಲವೊಂದಿಷ್ಟು ಸಚಿವರ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ. ಇದರ ಬಗ್ಗೆ ಚರ್ಚಿಸುತ್ತೇವೆ. ಯಾವುದೇ ಸಚಿವರು ಸೋಲಿನ ಬಗ್ಗೆ ದೂರು ಕೊಟ್ಟಿಲ್ಲ ಎಂದು ಹೇಳಿದರು.
'ಬಾಯಿ ಮುಚ್ಚಿಟ್ಟುಕೊಂಡಿದ್ರೆ ಒಳ್ಳೆಯದು': ಸಚಿವರ ರಾಜೀನಾಮೆಗೆ ಶಾಸಕ ಬಸವರಾಜ್ ಶಿವಗಂಗಾ ಒತ್ತಾಯಿಸಿರುವ ವಿಚಾರವಾಗಿ, ಶಾಸಕರು ಬಾಯಿ ಮುಚ್ಚಿಟ್ಟುಕೊಂಡಿದ್ರೆ ಒಳ್ಳೆಯದು ಎಂದು ಎಚ್ಚರಿಕೆ ಕೊಟ್ಟರು.
ಇದನ್ನೂ ಓದಿ: ಸೋಲಿಗೆ ಸಚಿವರನ್ನು ಹೊಣೆ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ: ಡಿ.ಕೆ.ಶಿವಕುಮಾರ್ - D K Shivakumar