ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ನೂರು ದಿನಗಳ ಕಾರ್ಯಕ್ರಮ ರಾಜಕೀಯ ತಂತ್ರದ ಭಾಗವಷ್ಟೇ. ಜನರ ಮನಸ್ಥಿತಿಯನ್ನು ಸಜ್ಜು ಮಾಡುವ ವ್ಯಾಖ್ಯಾನ ಬಿಟ್ಟರೆ ಇದರಲ್ಲಿ ಬೇರೇನೂ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
'ಎಕ್ಸಿಟ್ ಪೋಲ್ ಸುಳ್ಳಾಗಲಿದೆ': ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ನಾವೂ ಸಹ ರಾಜಕೀಯ ತಂತ್ರ ಹೊಂದಿದ್ದೇವೆ. ಪ್ರತಿಯೊಂದು ಪಕ್ಷವೂ ಒಂದೊಂದು ತಂತ್ರ ಅನುಸರಿಸುತ್ತವೆ ಎಂದರು. ಇದೇ ವೇಳೆ, ಎಕ್ಸಿಟ್ ಪೋಲ್ ಸುಳ್ಳಾಗಲಿದೆ. ಇಂಡಿಯಾ ಒಕ್ಕೂಟ ಬಹುಮತ ಪಡೆಯುತ್ತದೆ ಮತ್ತು ಸರ್ಕಾರ ರಚಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಮಳೆ ವಿಚಾರ: ಬೆಂಗಳೂರಿನಲ್ಲಿ ಮಳೆ ಇನ್ನೂ ಬರಲಿ ಎಂಬ ಆಸೆ ಇದೆ. ಯಾಕೆಂದರೆ ಅಂತರ್ಜಲದ ಮಟ್ಟ ಹೆಚ್ಚಾಗಿ, ಕೆರೆಗಳೆಲ್ಲಾ ತುಂಬಲಿ. ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಬಿದ್ದಿದ್ದ ಮರಗಳನ್ನು ಕಟ್ ಮಾಡಿ, ತೆರವು ಮಾಡಲಾಗಿದೆ. ಇಂದು ಸಂಜೆ 4 ಗಂಟೆ ಮೇಲೆ ಗ್ರೌಂಡ್ಲೆವಲ್ ಅಧಿಕಾರಿಗಳನ್ನು ವಿಧಾನಸೌಧಕ್ಕೆ ಕರೆಸಿ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ನಮ್ಮ ಕುಟುಂಬದಲ್ಲಿ ಕುರಿ, ಮೇಕೆ ಕಡಿಯುವ ಸಂಸ್ಕೃತಿಯಿಲ್ಲ. ಬೇಕಾದರೆ ಎಸ್ಐಟಿ ತನಿಖೆ ಮಾಡಿಸಲಿ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಹೌದಾ ಬಹಳ ಸಂತೋಷ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಅವಾಂತರಕ್ಕೆ 100ಕ್ಕೂ ಹೆಚ್ಚು ಮರಗಳು ಧರಾಶಾಹಿ; ಇನ್ನೂ ಐದು ದಿನ ವರುಣನ ಆರ್ಭಟ - Bengaluru Rain