ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ-2024ರ ನಿಮಿತ್ತ ಫೆಬ್ರವರಿ 16ರ ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಅಹಿತರ ಘಟನೆಗಳು ನಡೆಯದಂತೆ ಹಾಗೂ ಸಾರ್ವಜನಿಕ ಆಸ್ತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೆ.ಎ.ದಯಾನಂದ ಬುಧವಾರ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ (ಪೊಲೀಸ್ ಕಮೀಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ) ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಹಾಗೂ ಸಭೆ-ಸಮಾರಂಭ ಜರುಗಿಸುವುದನ್ನು ನಿಷೇಧಿಸಿದೆ. ಚುನಾವಣಾ ಅಭ್ಯರ್ಥಿ ಅಥವಾ ಅವರ ಬೆಂಬಲಿಗರು ಸೇರಿ ಐದು ಜನರಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಶಸ್ತ್ರ, ಬಡಿಗೆ, ಭರ್ಜಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಟಿ, ದೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನುಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರಗಳನ್ನು ಬಳಸುವಂತಿಲ್ಲ. ಮತಗಟ್ಟೆಗಳ 100 ಮೀಟರ್ ಒಳಗೆ ಚುನಾವಣಾ ಪ್ರಚಾರ ನಿಷೇಧಿಸಲಾಗಿದೆ. ಈ ಪ್ರದೇಶದಲ್ಲಿ ಬರುವಂತಹ ಜೆರಾಕ್ಸ್ ಅಂಗಡಿ, ಸೈಬರ್ ಕೆಫೆ, ಬುಕ್ ಸ್ಟಾಲ್ಗಳನ್ನು ನಿರ್ಬಂಧಿಸಲಾಗಿದೆ. ಕಲ್ಲುಗಳು, ಸ್ಫೋಟಕ ವಸ್ತುಗಳು ಸೇರಿದಂತೆ ಅಪಾಯಕಾರಿ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ.
ಕೋವಿಡ್ -19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮತಗಟ್ಟೆಗಳ ಸುತ್ತ 100 ಮೀಟರ್ ಅಂತರದಲ್ಲಿ ಮೊಬೈಲ್ ಫೋನ್, ಕಾರ್ಡ್ಲೆಸ್ ಫೋನ್ ಅಥವಾ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗವುದನ್ನು ನಿಷೇಧಿಸಲಾಗಿದೆ. (ಚುನಾವಣಾ ಕಾರ್ಯದಲ್ಲಿ ಜಿಲ್ಲಾ ಚುನಾವಣಾಧಿಕಾರಿಯವರಿಂದ ಅನುಮತಿ ಪಡೆದ ಅಧಿಕಾರಿಗಳು/ಸಿಬ್ಬಂದಿ ಹೊರತುಪಡಿಸಿ), ಮತಗಟ್ಟೆಗಳ ಸುತ್ತ 100 ಮೀಟರ್ ಪರಿಮಿತಿಯಲ್ಲಿ ಪ್ರಚಾರಕ್ಕೆ ಸಂಬಂಧಿಸಿದ ಪೋಸ್ಟರ್/ಬ್ಯಾನರ್ ಅಥವಾ ಯಾವುದೇ ವಸ್ತುಗಳನ್ನು ಹಾಗೂ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ 188ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಪರಿಷತ್ ಉಪ ಸಮರ: ಬಿಜೆಪಿ ಬಂಡಾಯ ಅಭ್ಯರ್ಥಿ ಮನವೊಲಿಕೆ ಸಫಲ, ಮೈತ್ರಿ ಅಭ್ಯರ್ಥಿಗೆ ಬೆಂಬಲ