ದಾವಣಗೆರೆ: ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಆರೋಪಿಗೆ ಇಲ್ಲಿನ ನ್ಯಾಯಾಲಯ 10 ವರ್ಷ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ. ದಾವಣಗೆರೆ ನಿವಾಸಿ ಸೈಯ್ಯದ್ ಮೋಸಿನ್ (19) ಶಿಕ್ಷೆಗೊಳಗಾದ ವ್ಯಕ್ತಿ.
ಬಾಲಕಿಯನ್ನು ಆರೋಪಿ ಸೈಯ್ಯದ್ ಮೋಸಿನ್ 2020ರ ಡಿ.21ರಂದು ಅಪಹರಿಸಿಕೊಂಡು ಹೋಗಿದ್ದಾನೆ ಎಂದು ಬಾಲಕಿ ಕಡೆಯವರು ನೀಡಿದ ದೂರಿನ ಮೇರೆಗೆ ಹರಿಹರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು. 187 /2020 ಕಲಂ: 363, 448 ರೆ/ವಿ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ಕೈಗೊಂಡ ಪೊಲೀಸರು 2021ರ ಜನವರಿ 18ರಂದು ಬಾಲಕಿಯನ್ನು ಪತ್ತೆ ಮಾಡಿದ್ದರು.
ಸೈಯ್ಯದ್ ಮೋಸಿನ್ ಎಂಬಾತ ಬಾಲಕಿಯನ್ನು ಅಪಹರಿಸಿಕೊಂಡು ಗೋವಾ, ಮುಂಬೈಗೆ ಕರೆದುಕೊಂಡು ಹೋಗಿದ್ದ. ನಂತರ ಪುಣೆಗೆ ಕರೆದೊಯ್ದು ಅಲ್ಲಿ ರಮಾಬಾಯಿ ಅಂಬೇಡ್ಕರ್ ನಗರದಲ್ಲಿ ಒಂದು ಬಾಡಿಗೆ ಮನೆ ಮಾಡಿಕೊಂಡು ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿರುವುದು ತನಿಖೆಯಿಂದ ತಿಳಿದುಬಂದಿತ್ತು.
ಇದನ್ನೂ ಓದಿ: ನಕಲಿ ಶೇರು ಟ್ರೇಡಿಂಗ್: ಮಂಗಳೂರಿನ ವ್ಯಕ್ತಿಗೆ 74 ಲಕ್ಷ ರೂ. ವಂಚನೆ - Fake Stock Trading
ಪ್ರಕರಣದಲ್ಲಿ ಹೆಚ್ಚುವರಿಯಾಗಿ ಕಲಂ: 376 ಐಪಿಸಿ ಮತ್ತು 4 & 6 ಪೋಕ್ಸೋ ಕಾಯ್ದೆ-2012ಅನ್ನು ಅಳವಡಿಸಿಕೊಂಡು, ತನಿಖೆ ಕೈಗೊಂಡ ತನಿಖಾಧಿಕಾರಿಗಳಾದ ಸತೀಶ್ ಕುಮಾರ್ ಅವರು ಆರೋಪಿ ಸೈಯದ್ ಮೋಸಿನ್ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಝಿಕಾ ವೈರಸ್ಗೆ ಮೊದಲ ಬಲಿ: ಡಿಹೆಚ್ಓ ಸ್ಪಷ್ಟನೆ ಹೀಗಿದೆ - Man Died by Zika virus
ಸೈಯದ್ ಮೋಸಿನ್ (19) ಮೇಲಿನ ಆರೋಪ ಸಾಬೀತಾದ ಹಿನ್ನೆಲೆ, ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀರಾಮ್ ನಾರಾಯಣ ಹೆಗಡೆ ಅವರು 10 ವರ್ಷ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಆರೋಪಿಯು ದಂಡದ ಮೊತ್ತದ ಒಂದು ಲಕ್ಷ ರೂಪಾಯಿ ಹಣವನ್ನು ಪ್ರಕರಣದ ಸಂತ್ರಸ್ತೆಗೆ ನೀಡುವಂತೆ ಸೂಚಿಸಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆ ಪರವಾಗಿ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ಅವರು ನ್ಯಾಯ ಮಂಡನೆ ಮಾಡಿರುತ್ತಾರೆ.