ದಾವಣಗೆರೆ: ಕಳ್ಳತನದ ಪ್ರಕರಣದಲ್ಲಿ ಭಾಗಿಯಾಗಿ ಬೇಲ್ ಮೇಲೆ ಹೊರಬಂದು ನ್ಯಾಯಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ಧ ಆರೋಪಿಯನ್ನು 23 ವರ್ಷಗಳ ಬಳಿಕ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಸ್ಟ್ 14, 2001 ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ನಿವಾಸಿ ಎಂ. ಸಿದ್ದಪ್ಪ ಎಂಬುವವರ ಜಮೀನಿನಲ್ಲಿ ಹಾದು ಹೋಗಿದ್ದ ಕೆ.ಇ.ಬಿ ವಿದ್ಯುತ್ ಕಂಬದಲ್ಲಿದ್ದ 45,000 ರೂ. ಬೆಲೆ ಬಾಳುವ 60 ಕೆಜಿ ಅಲ್ಯೂಮಿನಿಯಂ ವೈಯರ್ ಕಳ್ಳತನವಾಗಿತ್ತು. ಆರೋಪಿಗಳನ್ನು ಪತ್ತೆ ಮಾಡಿ ಎಂದು ಸಿದ್ಧಪ್ಪ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಗುನ್ನೆ 109/2001 ಕಲಂ 379 ಐಪಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಎ-1 ಆರೋಪಿಯಾದ ಎಸ್ಬಿ ಪ್ರದೀಪ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಆರೋಪಿ ಪ್ರದೀಪ್ ಬೇಲ್ ಮೇಲೆ ಹೊರಬಂದು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು.
ಸೆಪ್ಟೆಂಬರ್ 27, 2004 ರಂದು ನ್ಯಾಯಾಲಯ ಈ ಪ್ರಕರಣವನ್ನು ಎಲ್ಪಿಆರ್.ನಂ-60/2004 ನೇ ಪ್ರಕರಣವೆಂದು ಮಾನ್ಯ ಮಾಡಿತ್ತು. ಅದರಂತೆ ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯ ಹುಡುಕಾಟ ನಡೆಸಿದ್ದರು. ಕೊನೆಗೂ ಜೂನ್ 20 2024 ರಂದು 23 ವರ್ಷಗಳವರೆಗೆ ತಲೆಮರೆಸಿಕೊಂಡಿದ್ದ ಆರೋಪಿ ಪ್ರದೀಪ್ನನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪಲು ಗ್ರಾಮದಲ್ಲಿ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜೂನ್ 21ಕ್ಕೆ ಠಾಣೆಗೆ ಹಾಜರುಪಡಿಸಿದ್ದು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ಪ್ರಕರಣವನ್ನು ಮುಕ್ತಾಯ ಮಾಡಲಾಗಿದೆ.
38 ವರ್ಷಗಳ ಹಿಂದೆ ನಡೆದಿದ್ದ ರೇಡಿಯೋ ಕಳವು ಪ್ರಕರಣ: ಕಳ್ಳನ ಪತ್ತೆಯೇ ರೋಚಕ: 38 ವರ್ಷಗಳ ಹಿಂದೆ 250 ರೂ. ಬೆಲೆಬಾಳುವ ರೇಡಿಯೋ ಕಳವು ಮಾಡಿ ತಲೆ ಮರೆಸಿಕೊಂಡ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ, ಆ ಆರೋಪಿಗೆ ಶಿಕ್ಷೆ ನೀಡಲು ಅಸಾಧ್ಯ. ಕಾರಣ ಇಲ್ಲಿದೆ.
ಆಗಸ್ಟ್ 13, 1986ರಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಶಂಷೀಪುರ ಗ್ರಾಮದ ನಿವಾಸಿ ಗುರುಸಿದ್ದಪ್ಪ ಎಂಬುವರ ಮನೆಯಲ್ಲಿ 250 ರೂಪಾಯಿ ಬೆಲೆ ಬಾಳುವ ವಿನೋ ಕಾರ್ಟಿಕ್ ಹೆಸರಿನ ರೆಡಿಯೋ ಕಳ್ಳತನವಾಗಿತ್ತು. ಅದೇ ವರ್ಷದ ಆಗಸ್ಟ್ 29ರಂದು ರೆಡಿಯೋ ಮಾಲೀಕ ಅವರು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಇಳಿದಿದ್ದರು. ನ್ಯಾಯಾಲಯ ಜೂನ್ 23, 1997 ರಂದು ಈ ಪ್ರಕರಣವನ್ನು ಎಲ್ಪಿಆರ್ ಪ್ರಕರಣವೆಂದು ಮಾನ್ಯ ಮಾಡಿತ್ತು.
ಕಳ್ಳತನದಲ್ಲಿ ಹರಪನಹಳ್ಳಿ ತಾಲೂಕಿನ ಮ್ಯಾಂಡ್ರಿಗುತ್ತಿ ಲಕ್ಕಪ್ಪ, ಬಾಬಯ್ಯ ಇಬ್ಬರು ಭಾಗಿಯಾಗಿದ್ದರು ಎಂಬುದು ತನಿಖೆಯಲ್ಲಿ ತಿಳಿದು ಬಂದು, ಎ-2 ಆರೋಪಿ ಬಾಬಯ್ಯ ಅವರ ಬಂಧನ ಆಗಿ ಪ್ರಕರಣ ಮುಕ್ತಾಯವಾಗಿರುತ್ತದೆ. ಆದರೆ ಎ-1 ಆರೋಪಿ ಲಕ್ಕಪ್ಪ ತಲೆಮರೆಸಿಕೊಂಡಿರುತ್ತಾನೆ. ಪೊಲೀಸರು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಕೊನೆಗೆ ಲಕ್ಕಪ್ಪನನ್ನು ಪತ್ತೆಮಾಡಲು ಸಿಬ್ಬಂದಿಗಳಾದ ಎ.ಎಸ್.ಐ ನಾಗರಾಜ, ಅನಿಲ್ ಕುಮಾರ, ಪ್ರಸನ್ನ ಕಾಂತ ಇವರನ್ನು ನೇಮಕ ಮಾಡಲಾಗಿತ್ತು.
ಸಿಬ್ಬಂದಿಯವರು ಜೂನ್ 18, 2024 ರಂದು ಆರೋಪಿ ಇರುವ ವಿಳಾಸಕ್ಕೆ ತೆರಳಿ ವಿಚಾರಿಸಿದ್ದಾರೆ. ಆದರೆ ಆರೋಪಿ ಲಕ್ಕಪ್ಪ 2008ರಲ್ಲಿಯೇ ಮರಣ ಹೊಂದಿರುವ ಬಗ್ಗೆ ತಿಳಿದುಬಂದಿದೆ. ಅದರಂತೆ ಹರಪನಹಳ್ಳಿ ತಾಲೂಕು ಕಚೇರಿಗೆ ಭೇಟಿ ನೀಡಿ ಎ-1 ಆರೋಪಿ ಲಕ್ಕಪ್ಪ ಇವರ ಮರಣ ಪ್ರಮಾಣಪತ್ರ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿದೆ. ಸದ್ಯ 38 ವರ್ಷಗಳ ಹಿಂದಿನ ಪ್ರಕರಣವನ್ನು ನ್ಯಾಯಾಲಯ ಮುಕ್ತಾಯ ಮಾಡಿದೆ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಪ್ರಜ್ವಲ್ ರೇವಣ್ಣಗೆ 14 ದಿನಗಳ ನ್ಯಾಯಾಂಗ ಬಂಧನ - Prajwal Revanna