ದಾವಣಗೆರೆ: ಒಣಭೂಮಿಯಲ್ಲಿ ಪಂದ್ರಾ ಪಪ್ಪಾಯಿ ಬೆಳೆದು ಜಿಲ್ಲೆಯ ರೈತರೊಬ್ಬರು ಯಶಸ್ಸು ಕಂಡಿದ್ದಾರೆ. ಪಪ್ಪಾಯಿ ಬೆಳೆಗಾಗಿ ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿದ್ದ ರೈತ ಸ್ವಾಮಿ ಎಂಬವರು ಇದೀಗ ಹತ್ತು ಲಕ್ಷ ರೂಪಾಯಿ ಲಾಭ ಸಂಪಾದಿಸಿದ್ದಾರೆ.
ಜಿಲ್ಲೆಯ ಕೊಂಡಕುರಿ ನಾಡು ಜಗಳೂರಿನ ರಸ್ತೆಮಾಕುಂಟೆ ಗ್ರಾಮದಲ್ಲಿ ಸ್ವಾಮಿ, ಮಹಾರಾಷ್ಟ್ರದ ಪಂದ್ರಾ ಎಂಬ 8-9 ತಿಂಗಳಲ್ಲಿ ಫಸಲು ಬರುವ ಪಪ್ಪಾಯಿ ಕೃಷಿ ಮಾಡಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿ ಸ್ವಾಮಿ, "ಪಪ್ಪಾಯಿ ಗಿಡದಲ್ಲಿ ಎಂಟರಿಂದ ಒಂಬತ್ತು ತಿಂಗಳಿಗೆ ಒಂದು ಬೆಳೆ ಬರುತ್ತದೆ. ಪಂದ್ರಾ ತಳಿಯ ಮೂಲ ಮಹಾರಾಷ್ಟ್ರ. ಇದಕ್ಕೆ ಹೆಚ್ಚು ನೀರು ಬೇಕು. 70ರಿಂದ 80 ಕೆ.ಜಿಯಷ್ಟು ಫಸಲನ್ನು ಒಂದು ಗಿಡದಲ್ಲಿ ಪಡೆಯಬಹುದು. ನಾಲ್ಕು ಎಕರೆಯಲ್ಲಿ 2,200 ಪಪ್ಪಾಯ ಗಿಡ ಹಾಕಿದ್ದು, ಮಳೆ ಅವಾಂತರದಿಂದ 600 ಗಿಡಗಳು ಉರುಳಿವೆ. ಒಂದೂವರೆ ಲಕ್ಷ ರೂ ಖರ್ಚು ಮಾಡಿದ್ದೇವೆ, ಹತ್ತು ಲಕ್ಷ ಲಾಭ ಬಂದಿದೆ. 30ರಿಂದ 40 ಟನ್ ಪಪ್ಪಾಯಿ ಕಾಯಿಗಳು ಸದ್ಯ ಗಿಡದಲ್ಲಿವೆ. ಫಸಲನ್ನು ಬೆಂಗಳೂರು, ಮಹಾರಾಷ್ಟ್ರ, ದೆಹಲಿ, ದಾವಣಗೆರೆಗೆ ಕಳುಹಿಸುತ್ತೇವೆ" ಎಂದು ತಿಳಿಸಿದರು.
ರೈತ ಗೋವಿಂದರಾಜು ಪ್ರತಿಕ್ರಿಯಿಸಿ, "ಮುಂದಿನ ದಿನಗಳಲ್ಲಿ ನಮ್ಮ ಜಮೀನಿನಲ್ಲೂ ಈ ಪಪ್ಪಾಯಿ ಬೆಳೆಯುತ್ತೇವೆ. ಸ್ವಾಮಿ ಅವರಿಂದ ಮಾಹಿತಿ ಪಡೆದುಕೊಂಡಿದ್ದೇವೆ. ಒಳ್ಳೆಯ ಇಳುವರಿ ಇದೆ. ಬೆಳೆ ನೋಡಿದರೆ ಖುಷಿಯಾಗುತ್ತಿದೆ" ಎಂದರು.
ಇದನ್ನೂ ಓದಿ: ಕೇವಲ 30 ಗುಂಟೆಯಲ್ಲಿ 6 ಟನ್ ಸುಗಂಧರಾಜ, ಬರೋಬ್ಬರಿ 6 ಲಕ್ಷ ಆದಾಯ: ಇದು ನಿವೃತ್ತ ನೌಕರನ ಕೃಷಿ ಸಾಧನೆ