ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸಲು ಜನ ಹಿಂದೇಟು ಹಾಕುತ್ತಿದ್ದರು. ಆದರೆ ತೆರಿಗೆ ಸಂಗ್ರಹಕ್ಕೆ ಪಾಲಿಕೆ ವಿನೂತನ ಯೋಜನೆ ಹಾಕಿಕೊಂಡಿದೆ. ತೆರಿಗೆ ಪಾವತಿಸುವವರಿಗೆ ಶೇ.5ರಷ್ಟು ವಿನಾಯಿತಿ ನೀಡಿದೆ. ಅಷ್ಟೇ ಅಲ್ಲದೇ ಪಾಲಿಕೆಯ ಮೂರು ವಲಯ ಕಚೇರಿಗಳಲ್ಲಿ ತೆರಿಗೆ ಪಾವತಿಸಲು ವ್ಯವಸ್ಥೆ ಕಲ್ಪಿಸಿದೆ. ಇದರ ಪರಿಣಾಮ ಜನ ಮುಗಿಬಿದ್ದು ತೆರಿಗೆ ಪಾವತಿಸುತ್ತಿದ್ದಾರೆ.
ಏಪ್ರಿಲ್ ತಿಂಗಳಿನಿಂದ ಆಸ್ತಿ ತೆರಿಗೆ ಪಾವತಿಸದೇ ಇರುವ ಮಾಲೀಕರಿಗೆ ರಾಜ್ಯ ಸರ್ಕಾರ ಶೇ.5ರಷ್ಟು ರಿಯಾಯಿತಿ ನೀಡಿ ಆದೇಶ ಹೊರಡಿಸಿತ್ತು. ಇದೇ ಅಸ್ತ್ರವನ್ನು ದಾವಣಗೆರೆ ಪಾಲಿಕೆ ಹಲವು ಬಾರಿ ಪ್ರಯೋಗಿಸುತ್ತಾ ಬಂದಿದ್ದು, ಪ್ರಯೋಗ ಫಲ ನೀಡಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೆ ತೆರಿಗೆ ಹರಿದು ಬಂದಿದೆ. ಈ ತೆರಿಗೆ ವಿನಾಯಿತಿಯನ್ನು ಜುಲೈ 31ರ ತನಕ ವಿಸ್ತರಿಸಲಾಗಿದೆ.
''ಪಾಲಿಕೆ ವ್ಯಾಪ್ತಿಯ ಕಚೇರಿಗಳಲ್ಲಿ ಇಲ್ಲಿಯತನಕ ಶೇ.55ರಷ್ಟು ತೆರಿಗೆ ಸಂಗ್ರಹವಾಗಿದೆ. ತೆರಿಗೆ ವಿನಾಯಿತಿ ನೀಡಿದ್ದಕ್ಕಾಗಿ ಇಷ್ಟೊಂದು ಪ್ರಗತಿ ಸಾಧ್ಯವಾಗಿದೆ. ಮೂರು ವಲಯಗಳಲ್ಲಿ ಒಟ್ಟು 66,868 ಆಸ್ತಿಗಳಿದ್ದು, 22 ಕೋಟಿ ರೂಪಾಯಿ ತೆರಿಗೆ ವಸೂಲಿಯಾಗಿದೆ. ಇನ್ನುಳಿದ 18 ಕೋಟಿ ತೆರಿಗೆ ವಸೂಲಿ ಮಾಡಲು ಪ್ರಯತ್ನ ನಡೆದಿದೆ'' ಎಂದು ಪಾಲಿಗೆ ಆಯುಕ್ತೆ ರೇಣುಕಾ ಮಾಹಿತಿ ನೀಡಿದರು.