ದಾವಣಗೆರೆ: ಮುಂದೊಂದು ದಿನ ಪಕ್ಷಕ್ಕೆ ಮುಳ್ಳಾಗಬಹುದೆಂದು ಉಚ್ಚಾಟನೆ ತೀರ್ಮಾನ ಮಾಡಲಾಗಿದೆ ಎಂದು ಜಿ.ಬಿ.ವಿನಯ್ ಕುಮಾರ್ ವಿರುದ್ಧ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ ವಾಗ್ದಾಳಿ ನಡೆಸಿದ್ದಾರೆ.
ವಾಲ್ಮೀಕಿ ಹಗರಣದ ವಿಚಾರದಲ್ಲಿ ವಿರೋಧ ಪಕ್ಷಗಳು ಮುಗಿಬಿದ್ದಿವೆ. ಶಾಮನೂರು ಶಿವಶಂಕರಪ್ಪ, ಸಚಿವ ಮಲ್ಲಿಕಾರ್ಜುನ ಅವರು ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಕಾಳಜಿ ಇಲ್ಲ ಅನ್ನೋ ರೀತಿ ವರ್ತಿಸುತ್ತಿದ್ದಾರೆ ಎಂದು ಜಿ.ಬಿ.ವಿನಯ್ ಕುಮಾರ್ ಇತ್ತೀಚಿಗೆ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್.ಬಿ.ಮಂಜಪ್ಪ, ಅಹಿಂದಾ ಹಾಗೂ ಮೇಲ್ವರ್ಗದವರು ಅನ್ನೋ ಜಾತಿ ತಾರತಮ್ಯದ ಹೇಳಿಕೆ ಕೊಟ್ಟಿದ್ದಾರೆ. ವಿನಯ್ ಕುಮಾರ್ ಕಾಂಗ್ರೆಸ್ ಪಕ್ಷದ ಸದಸ್ಯರಲ್ಲ. ಪಕ್ಷದ ಕೆಲಸ ಮಾಡದೇ ಟಿಕೆಟ್ ಕೇಳಿ ಕ್ಷೇತ್ರದಲ್ಲಿ ಗೊಂದಲ ಮೂಡಿಸಿದ ವ್ಯಕ್ತಿ ಎಂದರು.
ಸಿದ್ದರಾಮಯ್ಯ ಅವರ ಮೇಲೆ ಕಾಳಜಿ ಇಟ್ಟುಕೊಂಡು ಜಿಲ್ಲಾ ನಾಯಕರ ಮೇಲೆ ಟೀಕೆ ಮಾಡಲು ಹೊರಟಿದ್ದಾರೆ. ಇವರಿಗೆ ಟೀಕೆ ಮಾಡುವ ಯಾವುದೇ ನೈತಿಕತೆ ಇಲ್ಲ. ಲೋಕಸಭಾ ಟಿಕೆಟ್ ಘೋಷಣೆಯಾದ ಸಂದರ್ಭದಲ್ಲಿ ಸಿದ್ದರಾಮಯ್ಯರನ್ನು ಧಿಕ್ಕರಿಸಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಸಿದ್ದರಾಮಯ್ಯರನ್ನೇ ಧಿಕ್ಕರಿಸಿದ್ದ ವ್ಯಕ್ತಿ ಇವತ್ತು ಕಾಳಜಿ ತೋರಿಸುತ್ತಿದ್ದಾರೆ. ಎಲ್ಲಾ ವರ್ಗದವರಿಗೂ ಸಿದ್ದರಾಮಯ್ಯ ಪರಮೋಚ್ಛ ನಾಯಕ. ಅವರ ಬಗ್ಗೆ ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಳಜಿ, ಗೌರವ ಇದೆ. ಸಿದ್ದರಾಮೋತ್ಸವ ಕಾರ್ಯಕ್ರಮ ದಾವಣಗೆರೆಯಲ್ಲಿ ಜವಾಬ್ದಾರಿಯಿಂದ ನಡೆದಿದೆ ಎಂದು ಹೇಳಿದರು.
ಈ ಕುರಿತ ನಿಮ್ಮ ಹೇಳಿಕೆಗಳನ್ನು ಇಲ್ಲಿಗೇ ನಿಲ್ಲಿಸಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಂಜಪ್ಪ ಇದೇ ವೇಳೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಚಾಮರಾಜನಗರ: ಸಿದ್ದರಾಮಯ್ಯ ಪೂರ್ಣಾವಧಿಗೆ ಸಿಎಂ ಆಗಿರಲೆಂದು ವಿಶೇಷ ಪೂಜೆ - Siddaramaiah Fans Offer Pooja