ಮಂಗಳೂರು: ರಸ್ತೆ ದಾಟುತ್ತಿದ್ದ ಮಹಿಳೆಗೆ ರಿಕ್ಷಾ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಕಿನ್ನಿಗೋಳಿಯ ರಾಮನಗರದಲ್ಲಿ ಸಂಭವಿಸಿದೆ.
ಪಿಗ್ಮಿ ಕಲೆಕ್ಷನ್ ಮಾಡುತ್ತಿದ್ದ ರಾಜರತ್ನಪುರದ ನಿವಾಸಿ ಚೇತನಾ (35) ಗಾಯಗೊಂಡಿದ್ದಾರೆ. ಇವರ ಪುತ್ರಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವೈಭವಿ, ಸಮೀಪದ ಟ್ಯೂಷನ್ ಸೆಂಟರ್‌ಗೆ ಹೋಗಿದ್ದರು. ಅಲ್ಲಿಂದ ಆಕೆಯನ್ನು ಕರೆತರಲು ಬರುತ್ತಿದ್ದ ಮಹಿಳೆ ರಸ್ತೆ ದಾಟುತ್ತಿದ್ದರು. ಈ ವೇಳೆ ಕಟೀಲಿನಿಂದ ಕಿನ್ನಿಗೋಳಿ ಕಡೆಗೆ ವೇಗವಾಗಿ ರಿಕ್ಷಾ ಬರುತ್ತಿತ್ತು. ಮಹಿಳೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಚಾಲಕ, ರಿಕ್ಷಾವನ್ನು ರಸ್ತೆ ಬದಿಗೆ ತಿರುಗಿಸಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಮಹಿಳೆಯ ಮೇಲೆ ಉರುಳಿತು.
ಮಹಿಳೆಯ ಪುತ್ರಿಯ ಕಣ್ಮುಂದೆಯೇ ಅಪಘಾತ ಸಂಭವಿಸಿತು. ತಕ್ಷಣವೇ ಓಡಿಬಂದ ಪುತ್ರಿ ಹಾಗೂ ರಿಕ್ಷಾದಲ್ಲಿ ಕುಳಿತಿದ್ದ ಓರ್ವ ಪ್ರಯಾಣಿಕ ಮತ್ತು ರಿಕ್ಷಾ ಚಾಲಕ ರಿಕ್ಷಾವನ್ನು ಮೇಲಕ್ಕೆತ್ತಿ ಮಹಿಳೆಯನ್ನು ರಕ್ಷಿಸಿದರು.
ಸದ್ಯ ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಸುರತ್ಕಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ಚಾಲಕ, ಪ್ರಯಾಣಿಕ ಸಹಿತ ಸ್ಥಳದಲ್ಲಿದ್ದ ಕೆಲವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿ: ಬೆಂಗಳೂರು: ಮಾತ್ರೆ ಕೊಡಲು ಬಂದ ಬಾಮೈದನ ಇರಿದು ಕೊಂದ ಬಾವ - Bengaluru Murder Case