ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿರುವ ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಶನಿವಾರ ಆದೇಶ ನೀಡಿದೆ. ವಿಚಾರಣೆ ಮುಕ್ತಾಯವಾಗಿದ್ದರಿಂದ ದರ್ಶನ್ ಮತ್ತು ಇತರೆ ಮೂವರು ಆರೋಪಿಗಳನ್ನು ಇದೀಗ ಪರಪ್ಪನ ಅಗ್ರಹಾರ ಜೈಲಿಗೆ ಕರೆತರಲಾಗಿದೆ. ಜೈಲಿನ ಬಳಿ ಬ್ಯಾರಿಕೇಡ್ ಹಾಕಿ ಪೊಲೀಸರು ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು.
ಜೈಲಿಗೆ ಸಂಪರ್ಕ ಕಲ್ಪಿಸುವ ಡಬಲ್ ರಸ್ತೆಯ ಬಳಿ ಬ್ಯಾರಿಕೇಡ್ ಸಹ ಹಾಕಲಾಗಿತ್ತು. ಜೈಲಿನ ತಪಾಸಣಾ ಘಟಕ ಸೇರಿದಂತೆ ಸ್ಥಳದಲ್ಲಿ ಮೂರು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಆರೋಪಿಗಳನ್ನು ಜೈಲಿಗೆ ಕರೆತರುವ ಮುನ್ನ ಕೇಂದ್ರ ಕಾರಾಗೃಹದಲ್ಲಿ ಡಿಸಿಪಿ ಒಳಗೊಂಡಂತೆ ಒಬ್ಬರು ಎಸಿಪಿ, 7 ಜನ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಕಾರಾಗೃಹದ ಹೊರಗೂ ಅಧಿಕ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದ್ದು, ಜೈಲು ಗೇಟ್ ಬಳಿ ಆಗಮಿಸುತ್ತಿರುವ ಸಾರ್ವಜನಿಕರನ್ನು ವಾಪಸ್ ಕಳಿಸಲಾಗುತ್ತಿತ್ತು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ದರ್ಶನ್ ಅಭಿಮಾನಿಗಳು ಸೇರಿದಂತೆ ಸದ್ಯಕ್ಕೆ ಜೈಲು ಬಳಿ ಯಾರಿಗೂ ಅವಕಾಶ ನೀಡುತ್ತಿಲ್ಲ. ಸ್ಥಳಕ್ಕೆ ಡಿಸಿಪಿ ಸಿಕೆ ಬಾಬಾ ಕೂಡ ಆಗಮಿಸಿದ್ದು, ದರ್ಶನ್ ಬರುವವರೆಗೆ ರಸ್ತೆಯಲ್ಲಿ ಯಾರೂ ಸಹ ಹೋಗದಂತೆ ನಾಕಾಬಂದಿ ಹಾಕಲಾಗಿತ್ತು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಜೈಲುಪಾಲು - Renukaswamy Murder Case