ಬೆಂಗಳೂರು: ಬೆಂಗಳೂರಿನಲ್ಲಿ ಕುಡಿಯುವ ನೀರಿನ ಅಭಾವದ ಬಗ್ಗೆ ವಿರೋಧ ಪಕ್ಷಗಳು ರಾಜಕೀಯ ಟೀಕೆ ಬಿಟ್ಟು, ರಚನಾತ್ಮಕ ಸಲಹೆ ಕೊಟ್ಟರೆ ಸ್ವೀಕರಿಸಲು ಸಿದ್ಧ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಸದಾಶಿವನಗರದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದವರಿಗೆ ಟೀಕೆ ಮಾಡುವುದು ಬಿಟ್ಟು ಬೇರೆ ಇನ್ನೇನು ಕೆಲಸವಿಲ್ಲ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಟ್ಯಾಂಕರ್ ಹಾಗೂ ಖಾಸಗಿಯವರನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ಮಾಫಿಯಾ ತಡೆಗಟ್ಟಿದ್ದೇವೆ ಎಂದರು.
ಶೇ.50ರಷ್ಟು ಕೊಳವೆಬಾವಿಗಳು ಬರಿದಾಗಿದೆ. ಸಾವಿರಾರು ಟ್ಯಾಂಕರ್ಗಳನ್ನು ನಾವು ನಿಯಂತ್ರಣಕ್ಕೆ ತೆಗೆದುಕೊಂಡು ನೀರಿನ ಮೂಲಗಳಿರುವ ಕಡೆಗಳಿಂದ ನೀರನ್ನು ಪೂರೈಸಲು ನಿರ್ಧರಿಸಲಾಗಿದೆ. ದೂರದಿಂದ ನೀರು ಪೂರೈಸುವ ಕಾರಣ ಟ್ಯಾಂಕರ್ ನೀರಿನ ದರ ನಿಗದಿಯ ನಿರ್ಧಾರವನ್ನು ಅಧಿಕಾರಿಗಳಿಗೆ ಬಿಟ್ಟಿದ್ದೇವೆ. ಇನ್ನು ರಾಜ್ಯದಲ್ಲಿ ಖಾಲಿ ಇರುವ ದೊಡ್ಡ ಹಾಲಿನ ಟ್ಯಾಂಕರ್ಗಳನ್ನ ನೀರು ಪೂರೈಸಲು ಬಳಸಲಾಗುವುದು ಎಂದು ಹೇಳಿದರು.
ಕಾವೇರಿ ನೀರನ್ನು ಸಮರ್ಪಕವಾಗಿ ಪೂರೈಸಲಾಗುತ್ತಿದೆ. ಇನ್ನು ಬೆಂಗಳೂರಿನ ಹೊರವಲಯದ 110 ಹಳ್ಳಿಗಳಲ್ಲಿ ಕಾವೇರಿ ನೀರು ಪೂರೈಕೆ ಮೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಮಾಧ್ಯಮಗಳಲ್ಲಿ ನೀರಿನ ಹಾಹಾಕಾರದ ಬಗ್ಗೆ ತೋರಿಸುತ್ತಿದ್ದೀರಿ. ಕೊಳವೆ ಬಾವಿಗಳು ಬತ್ತಿದಾಗ ಹಾಹಾಕಾರ ಉದ್ಭವಿಸುತ್ತದೆ. ನಾವು ನೀರು ಪೂರೈಸಲು ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಈ ಪರಿಸ್ಥಿತಿಯಲ್ಲಿ ಕುಡಿಯುವ ನೀರನ್ನು ಕಾರು, ವಾಹನ ತೊಳೆಯಲು ಹಾಗೂ ಇತರ ಬಳಕೆಗೆ ಬಳಸಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದೇವೆ. ನೀರಿನ ಬೆಲೆ ಎಲ್ಲರಿಗೂ ಅರ್ಥವಾಗಬೇಕು. ನಾವು ಮೇಕೆದಾಟು ಯೋಜನೆ ಯಾವ ಕಾರಣಕ್ಕೆ ಹೋರಾಟ ಮಾಡಿದ್ದೆವು?. ಈ ಕಾರಣಕ್ಕೆ ಹೋರಾಟ ಮಾಡುತ್ತಿದ್ದೆವು. ಕಾವೇರಿ ನೀರನ್ನು ನಾವು ಹೆಚ್ಚಾಗಿಯೇ ಬಳಸಿಕೊಳ್ಳುತ್ತಿದ್ದೇವೆ ಎಂದರು.
ನೀರಿನ ಸಮಸ್ಯೆ ಬಗೆಹರಿಸುತ್ತೇವೆ: ಖಾಸಗಿ ಟ್ಯಾಂಕರ್ಗಳಿಗೆ ಸಿಗುವ ನೀರು ಸರ್ಕಾರಕ್ಕೆ ಯಾಕೆ ಸಿಗುತ್ತಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ ಎಂದು ಕೇಳಿದಾಗ, ಖಾಸಗಿ ಟ್ಯಾಂಕರ್ಗಳು ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸುತ್ತಿವೆ. ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ನೀರು ಪೂರೈಸುತ್ತಿದೆ. ದುರಸ್ತಿ ಇದ್ದ ಘಟಕಗಳನ್ನು ರಿಪೇರಿ ಮಾಡುತ್ತಿದ್ದೇವೆ. ಇನ್ನು ಮೂರ್ನಾಲ್ಕು ತಿಂಗಳು ಈ ಸಮಸ್ಯೆ ಇರುತ್ತವೆ. ಎಲ್ಲ ಸಮಸ್ಯೆ ಬಗೆಹರಿಸುತ್ತೇವೆ. ನಮಗೆ ನೀರಿನ ಬೆಲೆ ಗೊತ್ತಿದೆ ಎಂದು ತಿಳಿಸಿದರು.
ನೋಡಲ್ ಅಧಿಕಾರಿ ನೇಮಕ: ಬೆಂಗಳೂರು ಗ್ರಾಮಾಂತರ ಭಾಗದ ವಾರ್ಡ್ಗಳಿಗೆ ನೋಡಲ್ ಅಧಿಕಾರಿ ನೇಮಕ ಮಾಡಿದ್ದು, ಬೇರೆ ಭಾಗಗಳಲ್ಲಿ ಯಾಕೆ ನೇಮಕ ಮಾಡಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಭಾಗ ಸಂಪೂರ್ಣವಾಗಿ ಕೊಳವೆ ಬಾವಿಗಳ ಮೇಲೆ ಅವಲಂಬಿತವಾಗಿವೆ. ಬೆಂಗಳೂರು ನಗರ ಕಾವೇರಿ ನೀರನ್ನು ಅವಲಂಬಿಸಿದೆ. ಬೆಂಗಳೂರು ಗ್ರಾಮಾಂತರದಿಂದಲೇ ಹೆಚ್ಚು ಟ್ಯಾಂಕರ್ ಮೂಲಕ ನೀರು ಬರುತ್ತಿದೆ ಎಂದು ಹೇಳಿದರು.
ಮಾ.11ರ ನಂತರ ಅಭ್ಯರ್ಥಿಗಳ ಎರಡನೇ ಪಟ್ಟಿ: ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿ, ನಾವು ಸ್ಕ್ರೀನಿಂಗ್ ಕಮಿಟಿಯಲ್ಲಿ ಚರ್ಚೆ ಮಾಡಿ ಹೈಕಮಾಂಡ್ಗೆ ಹೆಸರು ರವಾನೆ ಮಾಡುತ್ತೇವೆ. ಮಾ.11ರಂದು ಹೈಕಮಾಂಡ್ ನಾಯಕರು ಚರ್ಚೆ ಮಾಡಿ ಪಟ್ಟಿ ಪ್ರಕಟಿಸುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಬರಗಾಲ ನಿರ್ವಹಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲ: ಬಿ.ವೈ.ವಿಜಯೇಂದ್ರ