ಕೊಣಾಜೆ (ದಕ್ಷಿಣ ಕನ್ನಡ): ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಶಾಲೆಯ ಕಾಂಪೌಂಡ್ ಗೋಡೆ ಕುಸಿದು ಸಾವನ್ನಪ್ಪಿರುವ ಘಟನೆ ಹರೇಕಳ ಗ್ರಾ.ಪಂ ವ್ಯಾಪ್ತಿಯ ನ್ಯೂಪಡ್ಪುವಿನಲ್ಲಿ ಇಂದು ಸಂಜೆ ವೇಳೆ ಸಂಭವಿಸಿದೆ. ಸಂಜೆ ವೇಳೆ ಸುರಿದ ಮಳೆಯಿಂದಾಗಿ ದುರ್ಘಟನೆ ಸಂಭವಿಸಿದೆ. ನ್ಯೂಪಡ್ಪು ನಿವಾಸಿ ಸಿದ್ದೀಖ್ - ಜಮೀಲಾ ದಂಪತಿ ಪುತ್ರಿ ಶಾಝಿಯಾ ಬಾನು (7) ಮೃತ ಬಾಲಕಿ.
ಘಟನೆ ವಿವರ: ಹರೇಕಳ ಹಾಜಬ್ಬರ ಶಾಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಡಿಪು ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಶಿಬಿರ ನಡೆಯುತ್ತಿದೆ. ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳು ಇದ್ದ ಹಿನ್ನೆಲೆಯಲ್ಲಿ ಶಾಲೆಯ ಸಮೀಪದಲ್ಲೇ ಇರುವ ವಿದ್ಯಾರ್ಥಿನಿ ಶಾಝಿಯಾ ಭಾನು ಭಾಗವಹಿಸಿದ್ದಳು. ಸಂಜೆ ವೇಳೆ ಮನೆಗೆ ಹಿಂತಿರುಗುವಾಗ ಶಾಲಾ ಕಾಂಪೌಂಡ್ ಗೇಟಿನಲ್ಲಿ ಆಟವಾಡುತ್ತಿದ್ದ ಬಾಲಕಿ ಮೇಲೆ ಗೋಡೆ ಕುಸಿದು ಬಿದ್ದಿದೆ. ತಕ್ಷಣವೇ ಸ್ಥಳೀಯರು ರಕ್ಷಣೆಗೆ ಧಾವಿಸಿದರೂ, ಬಾಲಕಿಯನ್ನು ರಕ್ಷಿಸಲು ಸಾಧ್ಯವಾಗಿಲ್ಲ.
ಬೆಳಗ್ಗೆಯಿಂದ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಆಗಾಗ ಮಳೆಯಾಗುತ್ತಿದ್ದು, ಇದರಿಂದಾಗಿ ಕಾಂಪೌಂಡ್ ಶಿಥಿಲಗೊಂಡು ಬಿದ್ದಿದೆ. ಘಟನಾ ಸ್ಥಳಕ್ಕೆ ಹರೇಕಳ ಗ್ರಾ.ಪಂ ಅಧಿಕಾರಿಗಳು, ಕೊಣಾಜೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಭಯಾನಕ ರಸ್ತೆ ಅಪಘಾತ; 17 ಮಹಿಳೆಯರು ಸೇರಿ 18ಕ್ಕೂ ಹೆಚ್ಚು ಆದಿವಾಸಿಗಳು ಸಾವು, ಹಲವರಿಗೆ ಗಂಭೀರ ಗಾಯ - Accident In Kawardha