ಮಂಗಳೂರು(ದಕ್ಷಿಣ ಕನ್ನಡ): ಕರಾವಳಿಯ ಪ್ರಸಿದ್ಧ ದೈವ ನರ್ತಕ ಅಶೋಕ್ ಬಂಗೇರ ಗಂಧಕಾಡು(47) ಅವರು ದೈವದ ನೇಮ ನಡೆಯುತ್ತಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡು ಮೃತಪಟ್ಟರು. ಶನಿವಾರ ರಾತ್ರಿ ಅವರಿಗೆ ಮಂಗಳೂರು ನಗರದ ಹಳೆಯಂಗಡಿ ಸಮೀಪ ಲೆಕ್ಕೇಸಿರಿ ದೈವದ ನೇಮದ ಸೇವೆಯಿತ್ತು. ಅಲ್ಲಿ ಅವರ ದೈವ ನರ್ತನದಲ್ಲಿದ್ದ ಕೊನೆಯ ವಿಡಿಯೋ ಇದೀಗ ಲಭ್ಯವಾಗಿದೆ.
ಅಶೋಕ್ ಬಂಗೇರ ಗಂಧಕಾಡು ಅವರಿಗೆ ಗಗ್ಗರ ಸೇವೆಯಲ್ಲಿದ್ದಾಗಲೇ ತೀವ್ರ ಬಳಲಿಕೆ ಕಂಡು ಬಂದಿತ್ತು. ಆದ್ದರಿಂದ ಮುಂದಿನ ಸಂಧಿ ಹೇಳುವ ಕ್ರಮ, ಅಣಿಯನ್ನು ಏರಿಸಿ ದೈವ ನರ್ತನ ಸೇವೆಯನ್ನು ಪೂರೈಸದೆ ಅದಕ್ಕಿಂತ ಮೊದಲೇ ಅವರು ದೈವದ ಬಣ್ಣ ಕಳಚಿದ್ದಾರೆ. ಆ ಬಳಿಕ ನೇಮವನ್ನು ಅವರ ತಮ್ಮ ಮುಂದುವರಿಸಿದರು.
ಆ ಬಳಿಕ ತೀವ್ರ ಎದೆನೋವು ಕಾಣಿಸಿಕೊಂಡ ಅಶೋಕ್ ಬಂಗೇರ ಗಂಧಕಾಡು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆಯೇ ಅವರು ಮೃತಪಟ್ಟಿದ್ದಾರೆ. ಪದವಿನಂಗಡಿ ಗಂಧಕಾಡುವಿನಲ್ಲಿ ಕೊರಗಜ್ಜ ದೈವದ ಸಾನಿಧ್ಯ ರಚಿಸಿ ಅವರು ಸೇವೆಯಲ್ಲಿ ತೊಡಗಿದ್ದರು.
ತೀವ್ರವಾದ ಸಕ್ಕರೆ ರೋಗದಿಂದ ಬಳಲುತ್ತಿದ್ದ ಅಶೋಕ್ ಬಂಗೇರ ಗಂಧಕಾಡು ಈ ಬಾರಿಯಿಂದ ನೇಮಕಟ್ಟುವುದನ್ನು ತ್ಯಜಿಸಲು ನಿರ್ಧರಿಸಿದ್ದರು. ಆದರೆ ಇದೇ ಕೊನೆಯ ಬಾರಿ ಎಂದು ಅವರು ನಿನ್ನೆ ಹಳೆಯಂಗಡಿಯಲ್ಲಿ ನಡೆದ ಲೆಕ್ಕೇಸಿರಿ ದೈವದ ನೇಮ ಕಟ್ಟಿದ್ದರು. ಆದರೆ ವಿಧಿಯಾಟ ಬೇರೆಯೇ ಇದ್ದು, ಇದೇ ಅವರ ಕೊನೆಯದಾದ ದೈವನರ್ತನವಾಗಿತ್ತು.
ಇದನ್ನೂ ಓದಿ: 'ಕಾಂತಾರ'ದಂಥ ಸನ್ನಿವೇಷ! ದೈವಾರಾಧನೆಯಲ್ಲಿ ದೈವ ನರ್ತಕನಿಗೆ ದೀಕ್ಷೆ ಬೂಳ್ಯ: ಭಾವುಕನಾದ ಯುವಕ