ಬೆಂಗಳೂರು: ಇಂದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳ ಮುಖಂಡರು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಈ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು. ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, "ಶ್ರೀಗಳ ಬಳಿ ನಮ್ಮ ಅಭ್ಯರ್ಥಿಗಳೂ ಹೋಗಿದ್ದರು. ಇವತ್ತು ಮೈತ್ರಿ ಪಕ್ಷದವರು ಹೋಗಿದ್ದಾರೆ. ಸ್ವಾಮೀಜಿಯವರು ಯಾರಿಗೂ ಬೆಂಬಲ ನೀಡುವುದಿಲ್ಲ. ಅವರು ಆಶೀರ್ವಾದ ಮಾಡುತ್ತಾರೆ, ವಿಭೂತಿ ಇಡುತ್ತಾರೆ. ನಮ್ಮ ಪರವೂ ಇಲ್ಲ, ಅವರ ಪರವೂ ಇಲ್ಲ. ನಮ್ಮ ಒಕ್ಕಲಿಗ ಸಿಎಂ ಅನ್ನು ಕೆಳಗಿಳಿಸಿರಲ್ಲ?. ಅದನ್ನು ಕೇಳುವ ಶಕ್ತಿ ಸ್ವಾಮೀಜಿಗೆ ಇದೆಯಾ ಗೊತ್ತಿಲ್ಲ. ಆದರೆ ಯಾವುದನ್ನೂ ಮುಚ್ಚಿಡಲು ಆಗಲ್ವಲ್ಲಾ? ಎಂದರು.
ಬಳಿಕ, ಕುಮಾರಸ್ವಾಮಿ ಟೀಕಿಸಿರುವ ವಿಚಾರವಾಗಿ ಮಾತನಾಡುತ್ತಾ, ಕುಮಾರಸ್ವಾಮಿ ಯಾರಿಗೆ ಟೀಕೆ ಮಾಡಿಲ್ಲ ಹೇಳಿ?. ಮೇಕೆದಾಟು ಬಗ್ಗೆಯೂ ಟೀಕೆ ಮಾಡಿದ್ದರು. ಈಗ ಮೇಕೆದಾಟುಗೆ ಬೆಂಬಲ ಅನ್ನುತ್ತಿದ್ದಾರೆ. ಅವರ ಮಾತಿನಲ್ಲಿ ಸ್ಟ್ಯಾಂಡ್ ಇಲ್ಲ ಎಂದು ಹೇಳಿದರು.
ಮುಂದುವರೆದು, ಧಾರವಾಡದಲ್ಲಿ ದಿಂಗಾಲೇಶ್ವರ ಶ್ರೀಗಳು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಪ್ರತಿಕ್ರಿಯಿಸಿ, ಅಲ್ಲಿ ನಮ್ಮ ಕ್ಯಾಂಡಿಡೇಟ್ ಫೈನಲ್ ಮಾಡಿದ್ದೇವೆ. ವಿನೋದ್ ಅಸೂಟಿಗೆ ಟಿಕೆಟ್ ಕೊಟ್ಟಿದ್ದೇವೆ. ಟಿಕೆಟ್ ಕೊಟ್ಟ ಮೇಲೆ ಹಿಂದೆ ಮುಂದೆ ನೋಡಲ್ಲ. ಶ್ರೀಗಳ ಬಗ್ಗೆ ಗೌರವವಿದೆ. ನಮ್ಮ ಕ್ಯಾಂಡಿಡೇಟ್ ಸೂಟೆಬಲ್ ಇದ್ದಾರೆ. ಆದರೂ ಅಲ್ಲಿಂದ ಒತ್ತಡ ಬರುತ್ತಿದೆ. ಇವತ್ತು ನಾಳೆ ನಾನು ಮತ್ತು ಸಿಎಂ ಕುಳಿತು ಮಾತನಾಡುತ್ತೇವೆ. ಆ ಬಳಿಕ ಹೈಕಮಾಂಡ್ ಗಮನಕ್ಕೆ ತಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
'ಜೆಡಿಎಸ್ 4 ಸ್ಥಾನಗಳಲ್ಲೂ ಗೆಲ್ಲಲ್ಲ'-ಡಿಕೆಶಿ: ಜೆಡಿಎಸ್ ನಾಲ್ಕು ಸ್ಥಾನಗಳಲ್ಲೂ ಗೆಲ್ಲುವುದಿಲ್ಲ. ಮಂಡ್ಯ, ಹಾಸನ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲ್ಲ ಎಂದು ವ್ಯಂಗವಾಡಿದರು.
ಬಳಿಕ, ಬಾಡೂಟ ಹಾಕಿಸಿದ್ದಾರೆಂಬ ಆರೋಪಕ್ಕೆ, ನಾವು ಊಟ ಕೊಟ್ಟಿದ್ದಕ್ಕೆ ದೂರು ಕೊಡಿಸಿದರು. ಆದರೆ ನಾವು 500 ಜನರಿಗೆ ಊಟ ನೀಡಲು ಅನುಮತಿ ಪಡೆದಿದ್ದೆವು. ಈಗ ಅವರೂ ಕೊಡಲು ಹೊರಟಿದ್ದಾರಂತೆ. ಬಿಡಿ, ಈಗ ಅದೆಲ್ಲಾ ಯಾಕೆ ಮುಂದೆ ಮಾತನಾಡೋಣ. ಒಕ್ಕಲಿಗರು ದಡ್ಡರಲ್ಲ ಎಂದರು.
ಇದನ್ನೂ ಓದಿ: ದಿಂಗಾಲೇಶ್ವರ್ ಶ್ರೀ ಸ್ಪರ್ಧೆ, ಕಾಂಗ್ರೆಸ್ ಬೆಂಬಲ ವಿಚಾರದ ಚರ್ಚೆ: ಸಚಿವ ಸಂತೋಷ್ ಲಾಡ್ ಹೇಳಿದ್ದೇನು? - Santosh lad