ಕಾರವಾರ (ಉತ್ತರ ಕನ್ನಡ) : ಭಾರತೀಯ ಸೇನಾಪಡೆಯ ಅಗ್ನಿವೀರ್‌ಗೆ ಸೇರ್ಪಡೆಯಾಗ ಬಯಸುವ ಜಿಲ್ಲೆಯ ಯುವಕರಿಗೆ ಜಿಲ್ಲಾಡಳಿತದ ವತಿಯಿಂದ ಉಚಿತ ತರಬೇತಿ ಸೇರಿದಂತೆ ಎಲ್ಲಾ ರೀತಿಯ ಅಗತ್ಯ ನೆರವು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಅಗ್ನಿವೀರರಾಗಿ ಸೇನಾಪಡೆ ಸೇರುವ ಮೂಲಕ ಆಕರ್ಷಕ ಸಾಹಸಮಯ ಉದ್ಯೋಗದ ಜೊತೆಗೆ ದೇಶರಕ್ಷಣೆಯ ಮಹಾನ್ ಕರ್ತವ್ಯಕ್ಕೆ ಜಿಲ್ಲೆಯ ಯುವಕರು ಮುಂದಾಗಬೇಕು. ಮಂಗಳೂರು ಸೇನಾ ನೇಮಕಾತಿ ಕಚೇರಿ ವತಿಯಿಂದ ಸೇನಾಪಡೆಯ ಅಗ್ನಿವೀರ್ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ. ಫೆಬ್ರವರಿ 13 ರಿಂದ ಮಾರ್ಚ್ 22ರ ವರೆಗೆ ಆನ್ಲೈನ್ ಮೂಲಕ ಅರ್ಜಿ ಹಾಕಲು ಅವಕಾಶವಿದೆ ಎಂದು ತಿಳಿಸಿದ್ದಾರೆ. https://www.joinindianarmy.nic.in ವೆಬ್ ಸೈಟ್ನಲ್ಲಿ ಅರ್ಜಿ ಹಾಕಬಹುದಾಗಿದೆ. ಅರ್ಜಿ ಹಾಕಿದ ಅರ್ಹರಿಗೆ ಮೊದಲು ಲಿಖಿತ ಪರೀಕ್ಷೆ ನಂತರ ನೇಮಕಾತಿ ರ‍್ಯಾಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅಗ್ನಿವೀರ್ ನೇಮಕಾತಿಗೆ ಅರ್ಜಿ ಸಲ್ಲಿಸುವ ಯುವಕರಿಗೆ ಜಿಲ್ಲೆಯ ಎಲ್ಲಾ 35 ನಾಡ ಕಚೇರಿಗಳಲ್ಲಿ ಅರ್ಜಿ ಹಾಕಲು ಅಗತ್ಯ ನೆರವು ನೀಡಲಾಗುವುದು. ಅಲ್ಲದೇ ಅರ್ಜಿ ಹಾಕುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆಗೆ ಉಚಿತ ತರಬೇತಿ ನೀಡಲು ಜಿಲ್ಲೆಯಲ್ಲಿನ ಮಾಜಿ ಸೈನಿಕರ ಕಲ್ಯಾಣ ಸಂಘವು ಮುಂದೆ ಬಂದಿದ್ದು, ಅವರ ಸಂಪರ್ಕ ಸಂಖ್ಯೆಯನ್ನು ಕೂಡ ನೀಡಲಾಗುವುದು. ಅರ್ಜಿ ಸಲ್ಲಿಸಿದ ಜಿಲ್ಲೆಯ ಯುವಕರಿಗೆ ತರಬೇತಿ ಕೂಡ ನೀಡಲಾಗುವುದು. ಜನತೆ ಈ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕನಿಷ್ಠ ಎಂಟನೇ ತರಗತಿಯಿಂದ ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಡಿಪ್ಲೊಮೋ, ಐ.ಟಿ.ಐ ವಿದ್ಯಾರ್ಹತೆ ಹೊಂದಿರುವ 17.5 ರಿಂದ 21 ವರ್ಷದೊಳಗಿನ ಜಿಲ್ಲೆಯ ಯುವ ಜನತೆ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ವಿದ್ಯಾರ್ಹತೆಗೆ ಅನುಗುಣವಾಗಿ ತಾಂತ್ರಿಕ ಮತ್ತು ಸಾಮಾನ್ಯ ಕರ್ತವ್ಯಗಳಿಗೆ ನೇಮಕಾತಿ ನಡೆಯಲಿದೆ. ಆರಂಭದಲ್ಲಿಯೇ 30 ಸಾವಿರ ಹಾಗೂ ನಂತರ 40 ಸಾವಿರದವರೆಗೆ ವೇತನ ಸಿಗಲಿದೆ. ಮೂರು ವರ್ಷದ ಬಳಿಕ ಸೇವೆ ಉತ್ತಮವಾಗಿದ್ದಲ್ಲಿ ಸೇನೆಯಲ್ಲಿ ಮುಂದುವರಿಯಲು ಅವಕಾಶಗಳಿದೆ ಎಂದು ಹೇಳಿದರು.
ಮಾಜಿ ಸೈನಿಕರಿಂದ ತರಬೇತಿ : ಸೇನಾಪಡೆಯ ನೇಮಕಾತಿಯು ಅತ್ಯಂತ ಪಾರದರ್ಶಕವಾಗಿದೆ. ಲಿಖಿತ ಪರೀಕ್ಷೆ ಮತ್ತು ದೈಹಿಕ ಅರ್ಹತೆ ಮಾತ್ರವೇ ನೇಮಕಾತಿಗೆ ಪರಿಗಣಿಸಲಿದ್ದು, ಅಭ್ಯರ್ಥಿಗಳು ಯಾವುದೇ ಮಧ್ಯವರ್ತಿಗಳ ಮಾತನ್ನು ನಂಬಿ ಮೋಸ ಹೋಗದಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿರುವ ಮಾಜಿ ಸೈನಿಕರು ಜಿಲ್ಲೆಯ ಅಭ್ಯರ್ಥಿಗಳಿಗೆ ತರಬೇತಿ ಮತ್ತು ನೆರವು ನೀಡಲಿದ್ದಾರೆ ಎಂದರು.
ಜಿಲ್ಲೆಯ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ನೇಮಕಾತಿಗೆ ಅರ್ಜಿ ಸಲ್ಲಿಸುವ ಮೂಲಕ ದೇಶಸೇವೆಗೆ ದೊರಕುವ ಈ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಕರೆ ನೀಡಿದರು.
ಇದನ್ನೂ ಓದಿ: ದೇಶ ಸೇವೆಗೆ ಸನ್ನದ್ಧರಾದ ಅಗ್ನಿವೀರರು: ತರಬೇತಿಯಲ್ಲಿ ಕ್ಷಮತೆ ತೋರಿದ ವೀರರಿಗೆ ಸಿಕ್ತು ಏರ್ ಮಾರ್ಷಲ್ ಕಡೆಯಿಂದ ಬಹುಮಾನ