ಹುಬ್ಬಳ್ಳಿ: ಆನ್ಲೈನ್ ಜಾಹೀರಾತುಗಳಿಗೆ ಲೈಕ್, ರೇಟಿಂಗ್ ನೀಡಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ಬಂದ ವಾಟ್ಸ್ಆ್ಯಪ್ ಸಂದೇಶ ನಂಬಿ ವ್ಯಕ್ತಿಯೊಬ್ಬರು 20 ಲಕ್ಷ ರೂ ಕಳೆದುಕೊಂಡಿರುವ ಘಟನೆ ನಡೆದಿದೆ. ಉಣಕಲ್ ನಿವಾಸಿ ನಿಜಾಮುದ್ದೀನ್ ಮೋಸ ಹೋಗಿದ್ದು, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆನ್ಲೈನ್ ಜಾಹೀರಾತುಗಳಿಗೆ ಲೈಕ್, ರೇಟಿಂಗ್ ನೀಡಿ ಹಣ ಗಳಿಸಬಹುದು ಎಂಬ ವಾಟ್ಸ್ಆ್ಯಪ್ ಸಂದೇಶ ನಿಜಾಮುದ್ದೀನ್ಗೆ ಬಂದಿತ್ತು. ಜೊತೆಗೆ ಲಿಂಕ್ವೊಂದನ್ನು ಕಳುಹಿಸಿ ಲೈಕ್ ಮತ್ತು ರೇಟಿಂಗ್ ನೀಡಲು ವಂಚಕರು ತಿಳಿಸಿದ್ದರು. ಇದನ್ನು ನಂಬಿದ ಇವರು, ವಂಚಕರು ಹೇಳಿದಂತೆ ಲೈಕ್ಸ್ ಮತ್ತು ರೇಟಿಂಗ್ಸ್ ನೀಡಿದ್ದರು. ಬಳಿಕ ವಂಚಕರು, ವಿಶ್ವಾಸ ಬರಲೆಂದಿ ಮಾಡಿರುವ ಆ ಕೆಲಸಕ್ಕೆ ಹಣವನ್ನು ವರ್ಗಾಯಿಸಿದ್ದರು.
ನಂತರ ನಮಲ್ಲಿ ಹೆಚ್ಚು ಹಣ ಹೂಡಿದರೆ ಇನ್ನಷ್ಟು ದುಡ್ಡು ಸಂಪಾದಿಸಬಹುದು ಎಂದು ವಂಚಕರು ನಂಬಿಸಿದ್ದರು. ಇದನ್ನು ನಂಬಿದ ದೂರುದಾರರು, 20 ಲಕ್ಷ ಹಣ ವರ್ಗಾಯಿಸಿದ್ದಾರೆ. ಬಳಿಕ ಸಂಪರ್ಕಕ್ಕೆ ಸಿಗದೇ ಮೋಸ ಮಾಡಿದ್ದಾರೆ. ಈ ಕುರಿತು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಾಟ್ಸಾಪ್ ಸೇರಿ ಸಾಮಾಜಿಕ ಜಾಲ ತಾಣಗಳಲ್ಲಿ ಬರುವ ಲಿಂಕ್ಗಳನ್ನು ಕ್ಲಿಕ್ ಮಾಡುವ ಮುನ್ನ ಜನರು ಹುಷಾರಾಗಿರಬೇಕು. ಜೊತೆಗೆ ಸೈಬರ್ ವಂಚಕರ ಜಾಲಕ್ಕೆ ಬೀಳದಂತೆ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಲೇ ಇರುತ್ತದೆ. ಆದರೂ ವಂಚಕರ ಮಾತು ನಂಬಿ ಹಣ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.
ಇಸ್ಪೀಟ್ ಅಡ್ಡೆ ಮೇಲೆ ದಾಳಿ: ಮತ್ತೊಂದೆಡೆ, ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿ 27 ಜನರನ್ನು ಬಂಧಿಸಿದ್ದಾರೆ. ತಾಲೂಕಿನ ಹೆಬಸೂರು, ಕಿರೇಸೂರು ಮತ್ತು ಮಾವಳ್ಳಿ ಗ್ರಾಮದಲ್ಲಿ ಇಸ್ಪೀಟ್ ಆಡುತ್ತಿದ್ದ ತಂಡಗಳ ಮೇಲೆ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ, 40 ಸಾವಿರ ನಗದು ವಶಪಡಿಸಿಕೊಂಡು 27 ಜನರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ನಕಲಿ ಪ್ರೊಫೈಲ್; 250ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ್ದ ಆರೋಪಿ ಸೆರೆ