ಬೆಂಗಳೂರು: ರಾಜ್ಯದಲ್ಲಿ ಜಿಲ್ಲೆಗೊಂದು ಸಿಇಎನ್ (ಸೈಬರ್, ಎಕನಾಮಿಕ್ಸ್ ಮತ್ತು ನಾರ್ಕೋಟಿಕ್) ಠಾಣೆಗಳನ್ನು ಸ್ಥಾಪಿಸಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಈ ಹಿಂದೆ ರಾಜ್ಯಾದ್ಯಂತ ಸಿಇಎನ್ (ಸೈಬರ್, ಎಕನಾಮಿಕ್ ಮತ್ತು ನಾರ್ಕೋಟಿಕ್ ಅಫೆನ್ಸ್) ಠಾಣೆಗಳು ಇರಲಿಲ್ಲ. ಬಳಿಕ ಜಿಲ್ಲೆಗೊಂದು ಸಿಇಎನ್ ಠಾಣೆ ಸ್ಥಾಪಿಸಲಾಗಿದೆ. ಒಟ್ಟು 43 ಸಿಇಎನ್ ಠಾಣೆಗಳಿದ್ದು, ಎಲ್ಲೆಡೆ ಸೈಬರ್ ಅಪರಾಧದ ಕುರಿತು ಪ್ರಕರಣ ದಾಖಲಿಸಿ, ಸಿಇಎನ್ ಠಾಣೆಗೆ ವರ್ಗಾಯಿಸಲಾಗುತ್ತಿದೆ. ಪ್ರಕರಣ ದಾಖಲಿಸಿಕೊಳ್ಳಲು ಅವಕಾಶ ಇರುವ ಕಾರಣಕ್ಕಾಗಿ ಇಷ್ಟೊಂದು ಸಂಖ್ಯೆಯಲ್ಲಿ ಸೈಬರ್ ಕೇಸ್ ವರದಿಯಾಗುತ್ತಿವೆ ಎಂದು ತಿಳಿಸಿದರು.
ಸಿಇಎನ್ ವಿಭಾಗಕ್ಕೆ ಎಡಿಜಿಪಿ ಹುದ್ದೆ: ಯಾವುದೇ ವ್ಯಕ್ತಿಗೆ ಸೈಬರ್ ವಂಚನೆಯಾದರೆ ಕಾನೂನು ಸುವ್ಯವಸ್ಥೆಯ ಠಾಣೆಯಲ್ಲಿಯೂ ದೂರು ದಾಖಲಿಸಬಹುದು. ಸೈಬರ್ ಪ್ರಕರಣಗಳನ್ನು ವಿಶೇಷವಾಗಿ ಮೇಲ್ವಿಚಾರಣೆ ಮಾಡಲು ಸಿಐಡಿ ಘಟಕದಲ್ಲಿ ಸಿಇಎನ್ ವಿಭಾಗಕ್ಕೆ ಎಡಿಜಿಪಿ ಹುದ್ದೆ ಸೃಷ್ಟಿಸಲಾಗಿದೆ. ಈಗಾಗಲೇ ನೇಮಕಾತಿ ಆರಂಭಿಸಲಾಗಿದ್ದು, ಎಷ್ಟು ಸಿಬ್ಬಂದಿಯ ಅವಶ್ಯಕತೆ ಇದೆಯೋ, ತರಬೇತಿ ನೀಡಿ ನಿಯೋಜಿಸಲಾಗುವುದು. ಯಾವುದೇ ಕಾರಣಕ್ಕೂ ಸೈಬರ್ ಅಪರಾಧ ಪ್ರಕರಣಗಳನ್ನು ಹೆಚ್ಚಾಗಲು ಬಿಡುವುದಿಲ್ಲ. ಈ ಬಗ್ಗೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಆನ್‌ಲೈನ್ ಉದ್ಯೋಗ, ನಕಲಿ ಲೋನ್ ಆ್ಯಪ್ ವಂಚನೆ: ಕಳೆದ ಐದು ವರ್ಷಗಳಲ್ಲಿ 1,820 ಆನ್‌ಲೈನ್ ವಂಚನೆ ಪ್ರಕರಣ ದಾಖಲಾಗಿದ್ದು, 178,17 ಕೋಟಿ ರೂಪಾಯಿ ವಂಚನೆಯಾಗಿದೆ. ಈ ಪೈಕಿ 157.13 ಕೋಟಿ ರೂ. ಹಣವನ್ನು ರಿಕವರಿ ಮಾಡಿಕೊಂಡು, 13 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 68 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ನಕಲಿ ಲೋನ್ ಆ್ಯಪ್ ಕೇಸ್ಗಳ ಸಂಖ್ಯೆಯೂ ಕಳೆದ ಐದು ವರ್ಷಗಳಲ್ಲಿ ಹೆಚ್ಚಾಗಿದ್ದು, 134 ಪ್ರಕರಣ ದಾಖಲಾಗಿದೆ. 4.61 ಕೋಟಿ ರೂ. ಹಣ ವಂಚಿಸಲಾಗಿದ್ದು, 3.25 ಕೋಟಿ ಹಣ ರಿಕವರಿ ಮಾಡಲಾಗಿದೆ. ಒಬ್ಬನನ್ನು ಬಂಧಿಸಲಾಗಿದ್ದು, 11 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು.