ಚಿಕ್ಕಮಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ತೆರಿಗೆ ಹಣ ನೀಡಿಲ್ಲ ಎಂದು ಮುಖ್ಯಮಂತ್ರಿ ಆರೋಪಿಸಿದ್ದಾರೆ. ಈ ಬಗ್ಗೆ ದಾಖಲೆಸಮೇತ ಶ್ವೇತಪತ್ರ ಹೊರಡಿಸಲಿ ಎಂದು ಸಿಎಂ ಸಿದ್ದರಾಮಯ್ಯಗೆ ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ ಸವಾಲು ಹಾಕಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮನಮೋಹನ್ ಸಿಂಗ್ ಕಾಲದಲ್ಲಿ ರಾಜ್ಯಕ್ಕೆ ಎಷ್ಟು ತೆರಿಗೆ ಹಣ ಬಂದಿದೆ, 2004-2014ರವರೆಗೆ ಎಷ್ಟು ತೆರಿಗೆ ಹಣ ಬಂದಿದೆ ಹಾಗೂ 2014-2024 ಫೆಬ್ರವರಿವರೆಗೆ ನರೇಂದ್ರ ಮೋದಿ ಸರ್ಕಾರ ನೀಡಿರುವ ತೆರಿಗೆ ಹಣದ ಕುರಿತು ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ ಎಂದು ಆಗ್ರಹಿಸಿದ ಅವರು, ಯಾವ ಸರ್ಕಾರಗಳು ರಾಜ್ಯಕ್ಕೆ ಎಷ್ಟು ಹೆಚ್ಚು ತೆರಿಗೆ ಹಣ ವಾಪಸ್ ನೀಡಿವೆ ಅನ್ನುವುದು ಗೊತ್ತಾಗುತ್ತದೆ ಎಂದರು.
2004-2014ರವರೆಗೆ ಕೇಂದ್ರದಿಂದ ಬಂದ ತೆರಿಗೆ ಹಣ 81,795 ಕೋಟಿ, 2014-2023 ಡಿಸೆಂಬರ್ ವರೆಗೆ ಮೋದಿ ಕೊಟ್ಟಿದ್ದು 2,82,791 ಕೋಟಿ, 2004-2014ರವರೆಗೆ ಮನಮೋಹನ್ ಸಿಂಗ್ ಅವರು ಕೊಟ್ಟಿರುವ ಅನುದಾನ-ಸಹಾಯಧನ ಬರೀ 60,779 ಕೋಟಿ, 2014-2023ರವರೆಗೆ ಮೋದಿ ಸರ್ಕಾರ ಕರ್ನಾಟಕಕ್ಕೆ ಹೆಚ್ಚೂ ಕಡಿಮೆ ಮೂರುವರೆ ಲಕ್ಷ ಕೋಟಿ ಈವರೆಗೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಎಸ್‍ಟಿ ಕೌನ್ಸಿಲ್ ಮೀಟಿಂಗ್‌ಗೆ ಹೋಗದ ಸಿಎಂ: ಸಿಎಂ ಸಿದ್ದರಾಮಯ್ಯ ಒಂದು ದಿನವೂ ಜಿಎಸ್‍ಟಿ ಕೌನ್ಸಿಲ್ ಮೀಟಿಂಗ್‌ಗೆ ಹೋಗಲಿಲ್ಲ. ಅನ್ಯಾಯವಾಗಿದ್ರೆ ಜಿಎಸ್‍ಟಿ ಮೀಟಿಂಗ್‍ನಲ್ಲಿ ಪ್ರಶ್ನಿಸಿ ನ್ಯಾಯ ಕೇಳಬಹುದಿತ್ತು. ಕೃಷ್ಣ ಬೈರೇಗೌಡರನ್ನು ಮೀಟಿಂಗ್‌ಗೆ ಕಳುಹಿಸುತ್ತಿದ್ದರು. ಬೈರೇಗೌಡರು ಅಲ್ಲಿನ ಸಭೆಯಲ್ಲಿ ಕೇಂದ್ರದ ಜಿಎಸ್‍ಟಿ ನೀತಿ ಸಮಾಧನಕರವಾಗಿದೆ ಎಂದು ಹೇಳಿ ಬರುತ್ತಿದ್ದರು. ಆದರೆ ಹೊರಗಡೆ ಬಂದು ಕೇಂದ್ರಕ್ಕೆ ಬೈಯುತ್ತಾ ಸುಳ್ಳು ಹೇಳಿ ರಾಜಕಾರಣ ಮಾಡುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.
ಇದನ್ನೂಓದಿ: ಸರ್ಕಾರ ಹೊರಡಿಸಿರುವ ಪರೀಕ್ಷಾ ವೇಳಾಪಟ್ಟಿ ಒಂದು ಸಮುದಾಯಕ್ಕೆ ಸೀಮಿತವಾಗಿದೆ: ಬಿ.ಸಿ.ನಾಗೇಶ್