ಮಂಡ್ಯ: ರಾಜ್ಯಸಭಾ ಚುನಾವಣೆಯ ವಿಚಾರವಾಗಿ ಕಾಂಗ್ರೆಸ್ ಶಾಸಕರಿಗೆ ಜೆಡಿಎಸ್ ನಾಯಕರಿಂದ ಬೆದರಿಕೆಗಳು ಬರುತ್ತಿವೆ ಎಂದು ಆರೋಪಿಸಿರುವ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ವಿರುದ್ದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ವಾಗ್ದಾಳಿ ನಡೆಸಿದರು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆತನಿಗೆ ಮಂಡ್ಯ ಶಾಸಕ ಸ್ಥಾನ ಸಿಕ್ಕಿರುವುದು ಪೂರ್ವ ಜನ್ಮದ ಪುಣ್ಯ. ಅದನ್ನು ಹೇಗೆ ಉಳಿಸಿಕೊಂಡು ಕೆಲಸ ಮಾಡಬೇಕು ಎನ್ನುವುದನ್ನು ಕಲಿಯಲಿ. ಈ ತರಹ ಲಘು ಮಾತುಗಳು, ಆರೋಪಗಳನ್ನು ಮಾಡುವುದನ್ನು ಬಿಡಬೇಕು. ಇಂತಹ ವೈಜ್ಞಾನಿಕ ಜಗತ್ತಿನಲ್ಲಿ ಎಲ್ಲದಕ್ಕೂ ಸಾಕ್ಷಿ ಇರಬೇಕಲ್ಲ?. ಈ ಆರೋಪಕ್ಕೆ ಆತ ಎಷ್ಟು ಕೋಟಿ ಮಾನನಷ್ಟ ಎದುರಿಸಬೇಕಾಗುತ್ತದೆ ಅನ್ನೋದನ್ನು ತೋರಿಸುತ್ತೇನೆ. ಇನ್ನೆರಡು ದಿನಗಳಲ್ಲಿ ಆತನ ವಿರುದ್ದ ಡೆಫಮೇಶನ್ ಕೇಸ್ ದಾಖಲಿಸುತ್ತೇನೆ ಎಂದು ಹೇಳಿದರು.
ರವಿಕುಮಾರ್ ಗಣಿಗ ತಿರುಗೇಟು: ರವಿಕುಮಾರ್ ಗಣಿಗ ಪ್ರತಿಕ್ರಿಯಿಸಿ, ಪುಟ್ಟರಾಜು ಅವರು ಚಿನಕುರುಳಿ ಸಂಸ್ಥಾನದ ಮಹಾರಾಜರ ಮೊಮ್ಮಗ. ನಾವು ಬಡ ಕುಟುಂಬದವರು. ಗೆಲ್ಲೋದೇ ಪುಣ್ಯ. ಅವರು ಮಹಾರಾಜರ ಮೊಮ್ಮಗ. ಗೆಲುವು ಅವರ ಜೇಬಲ್ಲಿರುತ್ತದೆ. ಮಹಾರಾಜರ ಮೊಮ್ಮಕ್ಕಳಿಗೂ ಬಡವರ ಮಕ್ಕಳಿಗೂ ವ್ಯತ್ಯಾಸವಿದೆ. ಅವರಿಗೆ ಎಲ್ಲರಿಗೂ ಏಕವಚನದಲ್ಲಿ ಮಾತಾಡಿ ರೂಢಿಯಾಗಿದೆ. ಅವರ ಮಟ್ಟಕ್ಕೆ ಹೋಗಿ ನಾವು ಮಾತನಾಡಲ್ಲ ಎಂದರು.
ಪುಟ್ಟರಾಜು ಎಂಪಿ ಆಗುವಾಗ ಯಾರು ಟಿಕೆಟ್ ಕೊಟ್ಟರು?. ಸಚಿವ ಚಲುವರಾಯಸ್ವಾಮಿ ಹೇಗೆ ಸಹಾಯ ಮಾಡಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು. ಬಾಯಿ ಇದೆ ಎಂದು ಎಲ್ಲರ ಮೇಲೂ ಎಗರಬಾರದು. ಅವರು ಹತಾಶೆಯಲ್ಲಿದ್ದಾರೆ. ಏನೂ ಮಾಡೋಕೂ ಆಗಲ್ಲ. ಮಾತನಾಡಲು, ಮಾನನಷ್ಟ ಮೊಕದ್ದಮೆ ಕೇಸ್ ಹಾಕಲು ಎಲ್ಲರೂ ಸರ್ವ ಸ್ವತಂತ್ರರು ಎಂದು ಹೇಳಿದರು.
ಇದನ್ನೂ ಓದಿ: ಮೈತ್ರಿ ಅಭ್ಯರ್ಥಿಯಿಂದ ಕಾಂಗ್ರೆಸ್ ಶಾಸಕರಿಗೆ 10 ಕೋಟಿ ಆಮಿಷ, ಬೆದರಿಕೆ: ಶಾಸಕ ಗಣಿಗ ರವಿಕುಮಾರ್ ಆರೋಪ