ದಾವಣಗೆರೆ: ಜಿಲ್ಲೆಯಲ್ಲಿ ಬರಗಾಲದಿಂದ ನೂರಾರು ಎಕರೆ ಕಬ್ಬು ನೆಲಕಚ್ಚಿದ್ದು, ಅಡಿಕೆ ತೆಂಗು ಒಣಗಿದೆ. ಕೃಷಿಯಲ್ಲಿ ಲಕ್ಷಾಂತರ ಬಂಡವಾಳ ಹಾಕಿದ್ದ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.
ದಾವಣಗೆರೆ ಎಂದರೇ ಅಡಿಕೆ, ಕಬ್ಬು, ಭತ್ತ ಅತೀ ಹೆಚ್ಚು ಬೆಳೆಯುವ ಜಿಲ್ಲೆ. ಇಲ್ಲಿಯ ರೈತರು ಭದ್ರಾ ಜಲಾಶಯದ ನೀರನ್ನು ನಂಬಿ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಈ ಬಾರಿ ರೈತರಿಗೆ ಮಳೆರಾಯ ಕೈ ಕೊಟ್ಟಿದ್ದಾನೆ. ಪರಿಣಾಮ ಭೀಕರ ಬರಗಾಲದಿಂದ ರೈತರು ಹೈರಾಣಾಗಿದ್ದಾರೆ. ಇತ್ತ ಭದ್ರಾ ನೀರು ಕೊನೆ ಭಾಗದ ರೈತರಿಗೆ ತಲುಪದೆ ಇರುವುದು ಸಾಕಷ್ಟು ಅವಾಂತರಕ್ಕೆ ಸೃಷ್ಟಿಯಾಗಿದೆ.
ದಾವಣಗೆರೆ ತಾಲೂಕಿನ ಕೊಳೇನಹಳ್ಳಿ, ಕನಗೊಂಡನಹಳ್ಳಿ, ಮುಕ್ತೇನಹಳ್ಳಿ, ನಾಗರಸನಹಳ್ಳಿ ಹಾಗೂ ಹದಡಿ ಗ್ರಾಮಗಳಲ್ಲಿ ಸಾಲ ಮಾಡಿ ಬೆಳೆದಿದ್ದ ಕಬ್ಬು, ಅಡಿಕೆ, ತೆಂಗು ಬೆಳೆ ಸಂಪೂರ್ಣವಾಗಿ ನೆಲಕಚ್ಚಿದೆ. ನೀರಿಲ್ಲದೆ ಸುಡು ಬಿಸಿಲಿಗೆ ಇಡೀ ಕಬ್ಬು ಒಣಗಿದೆ. ಕನಗೊಂಡನಹಳ್ಳಿಯಲ್ಲಿ ರೈತ ಜಗದೀಶ್ ಮೂರು ಎಕರೆ ಜಮೀನಿನಲ್ಲಿ ಒಂಬತ್ತು ಲಕ್ಷ ವ್ಯಯ ಮಾಡಿ ಹಾಕಿದ್ದ ಅಡಿಕೆ ತೆಂಗು ನೀರಿಲ್ಲದೆ ಸಂಪೂರ್ಣವಾಗಿ ಸೊರಗಿ ಹೋಗಿದೆ. ನೀರಿಲ್ಲದೆ ನೆಲಕಚ್ಚಿರುವ ಅಡಿಕೆ ಮತ್ತು ತೆಂಗು ಬೆಳೆ ಹಾಕಿ ಸಾಲ ಮಾಡಿರುವ ರೈತರು ಬ್ಯಾಂಕ್ ಬಡ್ಡಿ ಕಟ್ಟಿ ಸುಸ್ತಾಗಿದ್ದಾರೆ.
ಅಲ್ಲದೆ ದಾವಣಗೆರೆ ತಾಲೂಕಿನ ಕೋಳೆನಹಳ್ಳಿ ಗ್ರಾಮದ, ಕುಕ್ಕುವಾಡ ಶುಗರ್ ಫ್ಯಾಕ್ಟರಿ ಸುತ್ತಮುತ್ತ ಹಾಕಿರುವ ಐದಾರು ನೂರು ಎಕರೆ ಕಬ್ಬು ಸಂಪೂರ್ಣವಾಗಿ ಒಣಗಿದೆ. ಕೋಳೆನಹಳ್ಳಿಯ ರೈತ ಮಹಾಲಿಂಗಪ್ಪ ಏಳು ಎಕರೆ ಹಾಕಿದ್ದ ಕಬ್ಬು ಸಂಪೂರ್ಣವಾಗಿ ನೀರಿಲ್ಲದೆ ಸೊರಗಿದೆ. ಭದ್ರಾ ಜಲಾಶಯದ ನೀರನ್ನು ನಂಬಿ ಒಂದು ಎಕರೆಗೆ ಐವತ್ತು ಸಾವಿರ ವ್ಯಯ ಮಾಡಿ ಒಟ್ಟು ಏಳು ಎಕರೆಯಲ್ಲಿ ರೈತ ಮಹಾಲಿಂಗಪ್ಪ ಬೆಳೆದಿದ್ದರು. ಭದ್ರಾ ನೀರು ಕಾಲುವೆಗಳಿಗೆ ಹರಿಸಿದರೂ ಈ ಭಾಗದಲ್ಲಿ ನೀರು ಬಾರದ ಬೆನ್ನಲ್ಲೇ ಬೋರ್ವೆಲ್ಗಳಲ್ಲಿ ನೀರಿನ ಮಟ್ಟ ಪಾತಳಾಕ್ಕೆ ತಲುಪಿದ್ದರಿಂದ ಇಷ್ಟು ಸಮಸ್ಯೆಗೆ ಕಾರಣವಾಗಿದೆ ಎನ್ನುತ್ತಾರೆ ರೈತ ಮುಖಂಡ ಕೊಳೇನಹಳ್ಳಿ ಸತೀಶ್ ಕುಮಾರ್.
ಕೊಳೇನಹಳ್ಳಿ ಸತೀಶ್ ಕುಮಾರ್ ಮನವಿ: "ಕುಕ್ಕವಾಡ ಶುಗರ್ ಫ್ಯಾಕ್ಟರಿ ಕೋಳೆನಹಳ್ಳಿಯ ವ್ಯಾಪ್ತಿಯಲ್ಲಿ 500-600 ಎಕರೆಯಲ್ಲಿ ಕಬ್ಬು ಬೆಳೆಯಲಾಗಿದೆ. ಭದ್ರಾ ನೀರು ತಲುಪದ ಬೆನ್ನಲ್ಲೇ ಕಬ್ಬು ಅಡಿಕೆ ತೆಂಗು ಒಣಗಿ ನಾಶವಾಗುತ್ತಿದೆ. ರೈತರು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ತಕ್ಷಣ ಸರ್ಕಾರ ಬೆಳೆ ಸಮೀಕ್ಷೆ ನಡೆಸಿ ಪರಿಹಾರ ಕೊಡಬೇಕೆಂದು ರೈತ ಮುಖಂಡ ಕೋಳೆನಹಳ್ಳಿ ಸತೀಶ್ ಮನವಿ ಮಾಡಿದರು.
ನೂರಾರು ಎಕರೆಯಲ್ಲಿ ಒಣಗಿದ ಅಡಿಕೆ: ಅಡಿಕೆ ಗಿಡಗಳು ನೆಲಕಚ್ಚಿದೆ, ಹಣ ಹಾಕಿ ಕೈ ಸುಟ್ಟುಕೊಂಡಿದ್ದೇವೆ. ಭದ್ರಾ ನೀರು ನಮಗೆ ತಲುಪಿಲ್ಲ. ಹಳ್ಳದಲ್ಲಿ ಬೋರ್ವೆಲ್ ಹಾಕಿದರು ಏನೂ ಪ್ರಯೋಜನವಾಗಿಲ್ಲ. ಅದನ್ನು ನಾವೇ ನಾಶ ಮಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಭದ್ರಾ ನೀರು ನಿರ್ವಹಣೆ ಸರಿಯಾಗಿ ಮಾಡಿಲ್ಲ. ಒಂಬತ್ತು ಲಕ್ಷ ಖರ್ಚಾಗಿದೆ. ಸರ್ಕಾರ ಸೂಕ್ತ ಪರಿಹಾರ ಕಲ್ಪಿಸಬೇಕು. ಸಾಲ ಮಾಡಿ ಬಡ್ಡಿ ಕಟ್ಟಿ ಸಾಕಾಗಿದೆ. ವಿಷ ಕುಡಿಯುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ರೈತ ಮಲ್ಲಿಕಾರ್ಜುನ್ ತಮ್ಮ ಅಳಲನ್ನು ತೋಡಿಕೊಂಡರು.