ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿನ ಸಂತ್ರಸ್ತ ಮಹಿಳೆಯ ಅಪಹರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿರುವ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಲಯ, ಆದೇಶವನ್ನು ಕಾಯ್ದಿರಿಸಿದೆ.
ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಮೇ 31 ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ. ವಿಚಾರಣೆ ವೇಳೆ ಎಸ್ಐಟಿ ಪರ ವಕೀಲರು, ಮಹಿಳೆ ಅಪಹರಣ ಪ್ರಕರಣದಲ್ಲಿ ಅರ್ಜಿದಾರರಾದ ಭವಾನಿ ವಿರುದ್ಧ ಗಂಭೀರ ಆರೋಪ ಇದೆ. ಅವರನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಕೋರಿದರು.
ಅರ್ಜಿದಾರರ ಪರ ವಕೀಲರು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಿಂಬಿಸಿರುವಂತೆ ಎಸ್‌ಐಟಿ ಜಾರಿ ಮಾಡಿರುವ ನೋಟಿಸ್‌ನಲ್ಲಿ ಯಾವುದೇ ಕಾನೂನಿನ ನಿಬಂಧನೆ ಉಲ್ಲೇಖಿಸಲಾಗಿಲ್ಲ. ಹೀಗಾಗಿ, ಅರ್ಜಿದಾರರಿಗೆ ಬಂಧನ ಭೀತಿ ಇದೆ ಎಂದು ಹೇಳಿದರು. ಪ್ರಜ್ವಲ್ ಮತ್ತು ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮಾಧ್ಯಮಗಳು ಬಿಂಬಿಸಿವೆ. ಎಸ್‌ಐಟಿಯು ಮಾಧ್ಯಮಗಳು ಬಿಂಬಿಸಿದಂತೆ ಯಾವುದೇ ರೀತಿಯ ನೋಟಿಸ್ ಜಾರಿ ಮಾಡಿಲ್ಲ. ಮಾಧ್ಯಮಗಳ ವರದಿಯಿಂದ ತನಿಖಾ ಸಂಸ್ಥೆಯು ಬಂಧಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಸಂತ್ರಸ್ತ ಮಹಿಳೆಯನ್ನು ಅಪಹರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆ ಆರ್ ನಗರ ಠಾಣೆಯಲ್ಲಿ ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿ ಎಫ್‌ಐಆರ್ ದಾಖಲಿಸಲಾಗಿದೆ. ಇದರಲ್ಲಿ ಭವಾನಿ ಪತಿ ಹೆಚ್ ಡಿ ರೇವಣ್ಣ ಮೊದಲು, ಸತೀಶ್ ಬಾಬಣ್ಣ ಎರಡನೇ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಭವಾನಿ ಅವರು ಜಾಮೀನು ಕೋರಿದ್ದಾರೆ.