ಬೆಂಗಳೂರು: ಇಂಡಿಯನ್ ರೋಡ್ ಕಾಂಗ್ರೆಸ್ ಕಳೆದ 90 ವರ್ಷದಿಂದ ರಸ್ತೆಗಳ ಅಭಿವೃದ್ಧಿಗೆ ತಾಂತ್ರಿಕ ಸಲಹೆಗಳನ್ನು ನೀಡುತ್ತಾ ಬಂದಿದೆ. ಒಳ್ಳೆಯ ಗುಣಮಟ್ಟದ ಜೊತೆಗೆ ವೆಚ್ಚವನ್ನು ಕಡಿಮೆ ಮಾಡುವುದು ಈಗಿನ ಅವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ರೋಡ್ ಕಾಂಗ್ರೆಸ್ನ ಕೆಲಸ ಶ್ಲಾಘನೀಯವಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆಯುತ್ತಿರುವ ಇಂಡಿಯನ್ ರೋಡ್ ಕಾಂಗ್ರೆಸ್ಸ್ ಆಯೋಜಿಸಿರುವ 'ಅಡ್ವಾನ್ಸ್ ಇನ್ ಬ್ರಿಡ್ಜ್ ಮ್ಯಾನೇಜ್ಮೆಂಟ್' ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂಡಿಯನ್ ರೋಡ್ ಕಾಂಗ್ರೆಸ್ ಒಳ್ಳೆಯ ತಂತ್ರಜ್ಞರನ್ನು ಹೊಂದಿದ್ದರೂ ಸದ್ಯ ರಾಜಕೀಯ ಪಕ್ಷಗಳಂತೆ ಸರಿಯಾದ ಸಂಘಟನೆಯನ್ನು ಹೊಂದಿಲ್ಲ. ಸಂಸ್ಥೆ ಕೇಂದ್ರಕ್ಕೆ ಮನವಿಯನ್ನು ಸಲ್ಲಿಸಿದರೆ ಉತ್ತಮ ಕಾರ್ಯನಿರ್ವಹಣೆಗೆ ಜಾಗವನ್ನು ಒದಗಿಸಿ ಬಜೆಟ್ನಲ್ಲಿ ಹಣವನ್ನು ಅದರ ಅಭಿವೃಧ್ದಿ ಮತ್ತು ತಂತ್ರಜ್ಞಾನ ಸಂಶೋಧನೆಗೆ ಮೀಸಲಿಡುವ ಕೆಲಸವನ್ನು ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಗುಣಮಟ್ಟಕ್ಕೆ ಬೇಕಿದೆ ಹೊಸ ತಂತ್ರಜ್ಞಾನದ ಬಳಕೆ: ಗುಣಮಟ್ಟ ಕಾಯ್ದುಕೊಳ್ಳಲು ಹೊಸ ತಂತ್ರಜ್ಞಾನದ ಬಳಕೆ ಅವಶ್ಯಕವಾಗಿದೆ. ಸಮಯದ ಸದ್ಬಳಕೆಯೂ ಸಹ ರಸ್ತೆ ಹಾಗೂ ಸೇತುವೆಗಳ ನಿರ್ಮಾಣದಲ್ಲಿ ಬಹುಮುಖ್ಯ ಅಂಶವಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗುಣಮಟ್ಟ ಮತ್ತು ಸಮಯದ ವಿಚಾರದಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬೇಜವಾಬ್ದಾರಿ ವಹಿಸುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ದ ಅಮಾನತಿನ ಕ್ರಮವನ್ನು ತಕ್ಷಣ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕೆಲವೇ ವರ್ಷಗಳಲ್ಲಿ ಅಮೆರಿಕ ಮಾದರಿ ಗುಣಮಟ್ಟ: ಈಗಿನ ವೇಗವನ್ನು ನೋಡಿದರೆ ಅಮೆರಿಕದ ಮಾದರಿಯಲ್ಲಿ ಹೆದ್ದಾರಿ ರಸ್ತೆಗಳ ಅಭಿವೃದ್ಧಿ ಮತ್ತು ಗುಣಮಟ್ಟವನ್ನು ಭಾರತ ಕೆಲವೇ ವರ್ಷದಲ್ಲಿ ಮುಟ್ಟಲಿದೆ. ನಮ್ಮ ದೇಶದ ಇಂಜಿನಿಯರ್ಗಳ ಪಾತ್ರ ನಮ್ಮ ರಸ್ತೆಗಳು, ಹೆದ್ದಾರಿಗಳು, ಸೇತುವೆಗಳ ಬಹಳಷ್ಟಿದೆ ಎಂದು ನಿತಿನ್ ಗಡ್ಕರಿ ಶ್ಲಾಘಿಸಿದರು.
ಫಲಪ್ರದ ವಿಚಾರ ಸಂಕಿರಣ: ಸಚಿವ ಸತೀಶ್ ಜಾರಕಿಹೊಳಿ ಕಾರ್ಯಕ್ರಮದಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಈ ಸೇತುವೆಗಳ ಬಗೆಗಿನ ಈ ವಿಚಾರ ಸಂಕಿರಣ ತುಂಬಾ ಸಂಜಸವಾಗಿದೆ. ಇತ್ತೀಚೆಗೆ ರಾಜ್ಯದಲ್ಲಿ ಘಟಿಸಿದ ಅನಾವೃಷ್ಟಿ ಸಾಕಷ್ಟು ಸೇತುವೆಗಳಿಗೆ ಹಾನಿಯನ್ನು ಉಂಟುಮಾಡಿದೆ. ಮುಖ್ಯವಾಗಿ ಪಶ್ಚಿಮ ಘಟ್ಟ ಮತ್ತು ಮಲೆನಾಡು ಭಾಗದಲ್ಲಿ ಸೇತುವೆಗಳು ನೆಲಕ್ಕುರುಳಿದ ಘಟನೆಗಳಿಗೆ ಸಾಕಷ್ಟು ಇದು ತಂತ್ರಜ್ಞಾನದ ಸದ್ಬಳಕೆ ಮತ್ತು ದೂರದೃಷ್ಟಿತ್ವವನ್ನು ಶೀಘ್ರದಲ್ಲಿಯೇ ಅನುಷ್ಠಾನಗೊಳಿಸುವ ಅನಿವಾರ್ಯತೆ ಸೃಷ್ಟಿಮಾಡಿದೆ. ಈ ಹಿನ್ನೆಲೆಯಲ್ಲಿ ವಿಚಾರ ಸಂಕಿರಣ ಸಾಕಷ್ಟು ಬೆಳಕನ್ನು ಚೆಲ್ಲಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಹೊಸ ತಂತ್ರಜ್ಞಾನದ ಬಳಕೆಯನ್ನು ಹೆಚ್ಚುಸುವ ನಿಯಮಗಳನ್ನು ಜಾರಿಗೆ ತರಬೇಕಿದೆ. ಈ ನಿಟ್ಟಿನಲ್ಲಿ ಹೊಸ ಆಯಾಮಗಳನ್ನು ಗುರುತಿಸಲು ಇಂಡಿಯನ್ ರೋಡ್ ಕಾಂಗ್ರೆಸ್ಸ್ನ ಕೆಲಸ ಮಹತ್ತರವಾಗಿದೆ. ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿಗೆ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಲು ಹೊರಟಿರುವ ರಾಜ್ಯ ಸರ್ಕಾರದ ಜೊತೆಗೆ ಕೂಡ ರೋಡ್ ಕಾಂಗ್ರೆಸ್ಸ್ ಕೈಜೋಡಿಸಿ ನೆಡೆಯಬೇಕು. ಈ ನಿಟ್ಟಿನಲ್ಲಿ ವಿಚಾರ ಸಂಕೀರಣ ಯಶಸ್ವಿಯಾಗಲಿ ಎಂದು ಹಾರೈಸಿದರು.