ಹಾವೇರಿ: "ನಾನು ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರ ಮಾಡಿರಲಿಲ್ಲ. ವರಿಷ್ಠರ ಸೂಚನೆ ಮೇರೆಗೆ ಸ್ಪರ್ಧಿಸಬೇಕಾಯಿತು. ನನ್ನ ಹೆಸರು ಪಾರ್ಲಿಮೆಂಟರಿ ಬೋರ್ಡ್ ನಲ್ಲಿ ಕೂಡಾ ಫೈನಲ್ ಆಗಿರಲಿಲ್ಲ" ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, "ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಬೇರೆಯವರಿಗೆ ಅವಕಾಶ ಕೊಡಿ ಎಂದಿದ್ದೆ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ ಬಳಿಕ ಸ್ಪರ್ಧಿಸುವ ನಿರ್ಧಾರ ಮಾಡಬೇಕಾಯಿತು. ಅನಿವಾರ್ಯ ಇದೆ ನೀನು ಸ್ಪರ್ಧಿಸು ಎಂದು ಪ್ರಧಾನಮಂತ್ರಿ, ವರಿಷ್ಠರು ಹೇಳಿದರು. ಹೀಗಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ" ಎಂದು ಹೇಳಿದರು.
"ಮಾಜಿ ಡಿಸಿಎಂ ಈಶ್ವರಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ಶಿವಮೊಗ್ಗದಿಂದ ಸ್ಪರ್ಧಿಸುವ ವಿಚಾರದ ಬಗ್ಗೆ ಮಾಹಿತಿ ಇಲ್ಲ. ಅವರ ಬಳಿ ನಾನು ಮಾತನಾಡುವೆ. ಈಶ್ವರಪ್ಪ ಸಭೆ ಬಗ್ಗೆ ಮಾಹಿತಿ ಇಲ್ಲ. ಈಶ್ವರಪ್ಪ ಅವರಿಗೆ ಎಲ್ಲಾ ಗೊತ್ತಿದೆ. ನಾನು ಏನು ಹೇಳಿದ್ದೆ? ಪಾರ್ಲಿಮೆಂಟರಿ ಬೋರ್ಡ್ನಲ್ಲಿ ಏನ್ ಹೇಳಿದ್ದೆನೋ ಎಲ್ಲವೂ ಅವರಿಗೆ ಗೊತ್ತಿದೆ. ತಾವು ಸ್ಪರ್ಧಿಸುವ ಶಿಗ್ಗಾಂವ್ ಸವಣೂರು ಕ್ಷೇತ್ರಕ್ಕೆ ಪುತ್ರನ ಸ್ಪರ್ಧೆ ಊಹೆ ಮಾಡಿ ನಾನು ಹೇಳಲು ಆಗಲ್ಲ. ಆ ಸಂದರ್ಭದಲ್ಲಿ ಜನರ ಅಭಿಪ್ರಾಯ, ಪಕ್ಷದ ಅಭಿಪ್ರಾಯ ಕೇಳಬೇಕು" ಎಂದ ಬೊಮ್ಮಾಯಿ ತಿಳಿಸಿದರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕಾರ್ಯಕರ್ತರು ಹಾವೇರಿ ಗ್ರಾಮೀಣ ಅಧ್ಯಕ್ಷರ ನೇಮಕದಲ್ಲಿ ಆಕ್ಷೇಪಣೆ ಇದೆ. ಅಸಮಾಧಾನ ವ್ಯಕ್ತಪಡಿಸಿದ್ದು ನಿಜ. ಅವುಗಳೆಲ್ಲವನ್ನೂ ಸರಿ ಮಾಡಿಸುತ್ತೇವೆ. ನಾನು ಸರಿ ಮಾಡ್ತೀನಿ. ಸಚಿವ ದಿನೇಶ್ ಗುಂಡೂರಾವ್ಗೆ ಇವೆಲ್ಲದರ ಬಗ್ಗೆ ಮಾತನಾಡಲು ಏನ್ ನೈತಿಕತೆ ಇದೆ?" ಎಂದು ಬೊಮ್ಮಾಯಿ ಪ್ರಶ್ನಿಸಿದರು.
"ಈ ಪಕ್ಷವನ್ನು ಕಟ್ಟಿ ಬೆಳೆಸಿದವರು ಈಶ್ವರಪ್ಪನವರು. ಶಿಸ್ತಿನ ಸಿಪಾಯಿ ಅವರು. ಈ ಬಗ್ಗೆ ವರಿಷ್ಠರ ಜೊತೆಗೆ ಮಾತನಾಡಿ ಮನವೊಲಿಸುತ್ತೇನೆ. ನಾನು ಸಹ ಈಗ ಈಶ್ವರಪ್ಪ ಅವರ ಜೊತೆಗೆ ಮಾತನಾಡುತ್ತೇನೆ. ಅದು ವರಿಷ್ಠರ ತೀರ್ಮಾನ. ಮೋಸ ಮಾಡಿಲ್ಲ" ಎಂದು ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: ರಾಜ್ಯ ಬಿಜೆಪಿಯ ಅಂಕುಡೊಂಕು ಸರಿ ಪಡಿಸಲು ನನ್ನ ಸ್ಪರ್ಧೆ: ಕೆ.ಎಸ್. ಈಶ್ವರಪ್ಪ