ಬೆಂಗಳೂರು : ನಿರ್ಮಾಣ ಹಂತದ ಕಟ್ಟಡ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅದರ ಮಾಲೀಕ, ಗುತ್ತಿಗೆದಾರ ಮತ್ತಿತರರ ವಿರುದ್ಧ ಹೆಣ್ಣೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಾಲೀಕ ಮುನಿರಾಜು ರೆಡ್ಡಿ, ಗುತ್ತಿಗೆದಾರ ಮತ್ತಿತರರ ವಿರುದ್ಧ ನಿರ್ಲಕ್ಷ್ಯತನದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಲ್ಲೇಶ್ವರಂನಲ್ಲಿ ವಾಸವಿದ್ದ ಆಂಧ್ರ ಪ್ರದೇಶ ಮೂಲದ ಮುನಿರಾಜು ರೆಡ್ಡಿ ಎಂಬಾತನಿಗೆ ಸೇರಿದ ಕಟ್ಟಡವಾಗಿದ್ದು, 6 ಅಂತಸ್ತಿನ ಅಪಾರ್ಟ್‌ಮೆಂಟ್ ನಿರ್ಮಾಣ ಕಾರ್ಯ ಕಳೆದ 7-8 ತಿಂಗಳುಗಳಿದ ನಡೆಯುತ್ತಿತ್ತು. ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಮಾತ್ರ ಅನುಮತಿ ಪಡೆಯಲಾಗಿತ್ತು, ಆದರೆ, ನೆಲಮಹಡಿ ಪಾರ್ಕಿಂಗ್ ಬಿಟ್ಟು 7 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗುತ್ತಿತ್ತು ಎಂಬ ಆರೋಪ ಸಹ ಕೇಳಿ ಬಂದಿದೆ. ಕಟ್ಟಡ ಕುಸಿತ ಸಂಭವಿಸುತ್ತಿದ್ದಂತೆ ಮಾಲೀಕ ಮುನಿರಾಜು ರೆಡ್ಡಿ, ಕಟ್ಟಡದ ಮೇಸ್ತ್ರಿ, ಹಾಗೂ ಮುನಿರಾಜು ರೆಡ್ಡಿ ಪುತ್ರ ಮೋಹನ್ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದು, ಪೊಲೀಸರಿಂದ ಹುಡುಕಾಟ ಮುಂದುವರೆದಿದೆ.
ಇದನ್ನೂ ಓದಿ: ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣ: ಮೃತರ ಸಂಖ್ಯೆ ಐದಕ್ಕೇರಿಕೆ, ಬೆಳಗ್ಗೆ ಒಬ್ಬನ ರಕ್ಷಣೆ
ಮೃತರ ಸಂಖ್ಯೆ 6ಕ್ಕೆ: ನಿರ್ಮಾಣ ಹಂತದ ಕಟ್ಟಡ ಕುಸಿದು ಅವಷೇಷಗಳಡಿ ಸಿಲುಕಿದ್ದವರ ಪೈಕಿ ಮೃತರ ಸಂಖ್ಯೆ 6ಕ್ಕೇರಿದೆ. ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದ ಅಮಾನ್, ಕೃಪಾಲ್, ಮೊಹಮ್ಮದ್ ಸಾಹಿಲ್, ಸತ್ಯರಾಜ್ ಮತ್ತು ಶಂಕರ್ ಸೇರಿದಂತೆ ಐವರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ. ಮತ್ತೊಂದೆಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಅಯಾಜ್ ಎಂಬಾತನನ್ನ ರಕ್ಷಣಾ ಸಿಬ್ಬಂದಿ ಜೀವಂತವಾಗಿ ರಕ್ಷಿಸಿದ್ದಾರೆ. ಗ್ರಿಲ್‌ಗಳಡಿ ಸಿಲುಕಿಕೊಂಡಿದ್ದ ಅಯಾಜ್ ನನ್ನ ಪತ್ತೆಹಚ್ಚಿದ ರಕ್ಷಣಾ ಸಿಬ್ಬಂದಿ ಗ್ಯಾಸ್ ಕಟ್ಟರ್ ಬಳಸಿ ಗ್ರಿಲ್ ಕತ್ತರಿಸಿ ಹೊರಗೆ ಕರೆತಂದಿದ್ದಾರೆ. ತಕ್ಷಣ ಆತನನ್ನ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಕಠಿಣ ಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್
ಕಟ್ಟಡ ಕುಸಿದಿರುವ ಸ್ಥಳಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಚಿವರಾದ ಸಂತೋಷ್ ಲಾಡ್, ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರ ಜೊತೆ ಮಂಗಳವಾರ ರಾತ್ರಿಯೇ ಭೇಟಿ ನೀಡಿ ರಕ್ಷಣಾ ಕಾರ್ಯವನ್ನು ವೀಕ್ಷಣೆ ಮಾಡಿದ್ದರು. ಈ ವೇಳೆ ಮಾತನಾಡಿದ್ದ ಡಿಸಿಎಂ "ನಗರದಲ್ಲಿ ಕಟ್ಟಡಗಳ ಫಿಟ್ನೆಸ್ ಪ್ರಮಾಣ ಪತ್ರ, ವಿನ್ಯಾಸ ಸೇರಿದಂತೆ ಪಾಲಿಕೆಯಿಂದ ಅನುಮತಿ ತೆಗೆದುಕೊಳ್ಳದೇ ಕಟ್ಟಡ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಆದಷ್ಟು ಬೇಗ ಇದರ ಬಗ್ಗೆ ಸಮೀಕ್ಷೆ ಕಾರ್ಯ ನಡೆಸಲಾಗುವುದು" ಎಂದಿದ್ದರು.