ಬೆಂಗಳೂರು: ಸರ್ಕಾರಿ ವೆಚ್ಚದಲ್ಲಿ ನಡೆದ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಟೀಕೆಗೆ ಬಳಕೆ ಮಾಡಿಕೊಂಡಿದ್ದು ಖಂಡನೀಯವಾಗಿದೆ. ಸರ್ಕಾರಿ ಕಾರ್ಯಕ್ರಮ ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಆಯೋಜಕರು ಕ್ಷಮೆ ಕೇಳಬೇಕು ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಆಗ್ರಹಿಸಿದರು.
ಮಲ್ಲೇಶ್ವರದಲ್ಲಿರುವ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಿನ್ನೆ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರಿ ಖರ್ಚಿನಲ್ಲಿ ಸಂವಿಧಾನ ಜಾಗೃತಿ ದಿನ ಕಾರ್ಯಕ್ರಮ ಏರ್ಪಡಿಸಿತ್ತು. ಸಂವಿಧಾನ ಜಾಗೃತಿ ಬಗ್ಗೆ ಮಾತಾಡಿದ್ದು ಕಡಿಮೆ. ಆದ್ರೆ ಮೋದಿಯನ್ನ ಟೀಕಿಸಿದ್ದು, ಸುಳ್ಳು ಆರೋಪ ಹೊರಿಸಿದ್ದು, ತಪ್ಪು ಭಾವನೆ ಬರುವಂತೆ ಸುಳ್ಳು ಸುದ್ದಿ ಹಬ್ಬಿಸಿದ್ದೇ ಹೆಚ್ಚು. ಇದು ಸಂವಿಧಾನಕ್ಕೆ ಮಾಡಿದ ಅಪಮಾನ ಆಗುತ್ತದೆ. ಮೋದಿ ಅವರು ಗುಜರಾತ್ ಸಿಎಂ ಆಗಿ ನಂತರ ಎರಡೂ ಬಾರಿ ಬಹುಮತ ಪಡೆದು ಜನರಿಂದ ಆಯ್ಕೆಯಾದ ಪ್ರಧಾನ ಮಂತ್ರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಸರ್ಕಾರಿ ಕಾರ್ಯಕ್ರಮದಲ್ಲಿ ಅಪಮಾನ ಮಾಡಿದ್ದೇ ತಪ್ಪು, ಮೋದಿ ಟೀಕಿಸಲು ನಿಮಗೆ ವೇದಿಕೆ ಬೇರೆ ಇದೆ. ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಸಂವಿಧಾನಕ್ಕೆ ಅಪಮಾನ ಆಗುವ ಕೆಲಸವನ್ನು ಸರ್ಕಾರ ಮಾಡಿದೆ. ಅಲ್ಲಿ ಮಾತನಾಡಿದ ಎಲ್ಲಾ ಮುಖಂಡರು ಟೀಕೆ ಮಾಡಿ ಸರ್ಕಾರಿ ಕಾರ್ಯಕ್ರಮ ದುರ್ಬಳಕೆ ಮಾಡಿಕೊಂಡಿರುವುದು ಖಂಡನೀಯ. ಇದಕ್ಕಾಗಿ ಆಯೋಜಕರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ತುರ್ತುಸ್ಥಿತಿಯನ್ನ ಹೇರಿ ಮಾಧ್ಯಮ ಸ್ವಾತಂತ್ರ್ಯ ಕಿತ್ತುಕೊಂಡಿದ್ದು, ಸರ್ವಾಧಿಕಾರ ಹೇರಿದ್ದು ಕಾಂಗ್ರೆಸ್ ಪಕ್ಷ. ಆಗ ವಿರೋಧ ಪಕ್ಷದಲ್ಲಿ ಇದ್ದವರು ಸಿದ್ದರಾಮಯ್ಯ ಇಂದು ಸಂವಿಧಾನದ ಆಸೆಯನ್ನು ಬುಡಮೇಲು ಮಾಡಿದ್ದಾರೆ. ಅಂದೇ ಇಂದಿರಾ ಗಾಂಧಿ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್ ಕೇಂದ್ರದ ಅಧಿಕಾರದಲ್ಲಿ ಇದ್ದಾಗ 41 ಬಾರಿ ಕಾಂಗ್ರೆಸೇತರ ರಾಜ್ಯ ಸರ್ಕಾರವನ್ನು ವಜಾಗೊಳಿಸಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಸಂವಿಧಾನ ದುರ್ಬಳಕೆ ಮಾಡಿದ್ದಾರೆ. ನಮ್ಮ ಸಂವಿಧಾನಕ್ಕೆ 106 ಬಾರಿ ತಿದ್ದುಪಡಿ ಆಗಿದೆ. 80ಕ್ಕೂ ಹೆಚ್ಚು ತಿದ್ದುಪಡಿ ಆಗಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. 1975 ರಿಂದ 77ರ ಅವಧಿಯಲ್ಲಿ ಹೆಚ್ಚು ಬಾರಿ ಸಂವಿಧಾನ ತಿದ್ದುಪಡಿ ಆಗಿದೆ. ಸಂವಿಧಾನದ ಪೀಠಿಕೆಯನ್ನೇ ಬದಲಾವಣೆ ಮಾಡಿದ್ದಾರೆ. ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿದ್ದು ಕಾಂಗ್ರೆಸ್ ಪಾರ್ಟಿ. ಈಗ ಏಕಾಏಕಿ ಸಂವಿಧಾನದ ಬಗ್ಗೆ ನೆನಪಾಗಿದ್ದು, ಅಂಬೇಡ್ಕರ್ ಮೇಲಿನ ಪ್ರೀತಿಯಿಂದ ಅಲ್ಲ ಎಂದರು.
ಅಂಬೇಡ್ಕರ್ ಸೋಲಿಸಿದ ವ್ಯಕ್ತಿಗೆ ಕಾಂಗ್ರೆಸ್ ಪದ್ಮಭೂಷಣ ಕೊಡುತ್ತಾರೆ. ಅಂಬೇಡ್ಕರ್ ಮೃತಪಟ್ಟಾಗಲು ಶವಸಂಸ್ಕಾರಕ್ಕೆ ಜಾಗ ಕೊಡಲಿಲ್ಲ. ಇವತ್ತು ಅಂಬೇಡ್ಕರ್ ಫೋಟೋ ಬಳಸುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ. ಸಂವಿಧಾನಕ್ಕೆ ಅನಗತ್ಯ ತಿದ್ದುಪಡಿ ತಂದಿದ್ದಾರೆ. ಅಂಬೇಡ್ಕರ್ ಸೋಲಿಸಿದ ವ್ಯಕ್ತಿ ನಾರಾಯಣ ಸದೋಬಾ ಕಜ್ರೋಲ್ಕರ್ಗೆ ಪದ್ಮಭೂಷಣ ಪ್ರಶಸ್ತಿಯನ್ನು ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಕೊಟ್ಟಿದ್ದರು. ಇದನ್ನು ನಾನು ಖಂಡಿಸುತ್ತೇನೆ. ಬಿಜೆಪಿ ಸಂವಿಧಾನ ವಿರೋಧಿ ಅಂತ ಯಾವಾಗಲೂ ಕಾಂಗ್ರೆಸ್ನವರು ಆರೋಪ ಮಾಡುತ್ತಾರೆ. ರಾಜ್ಯದಲ್ಲಿ ಎಸ್.ಸಿ/ಎಸ್.ಟಿ ಮೀಸಲಾತಿ ಹೆಚ್ಚು ಮಾಡಿದ್ದು ನಾವು. ಸಂವಿಧಾನ ಗೌರವ ದಿನ ಅಂತ ಘೋಷಣೆ ಮಾಡಿದ್ದೇ ನಮ್ಮ ಪ್ರಧಾನಿ ಮೋದಿ ಎಂದು ಸಿ ಟಿ ರವಿ ಸಮರ್ಥಿಸಿಕೊಂಡರು.
ಶೋಭಾ ಕರಂದ್ಲಾಜೆ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂಬ ಯಡಿಯೂರಪ್ಪ ಆರೋಪ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸಿ ಟಿ ರವಿ, ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಹೀಗಾಗಿ Boss is always Right. ನಾನು ಟಿಕೆಟ್ ಕೇಳಿಲ್ಲ ಅಂತ ಹತ್ತಾರು ಬಾರಿ ಹೇಳಿದ್ದೇನೆ. ನನಗೆ ಗೊತ್ತಿರೋದು ಪಕ್ಷ ನಿಷ್ಠೆ ಮತ್ತು ಪರಿಶ್ರಮ. ನಮ್ಮ ಗುರಿ ಒಂದೇ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ನನ್ನ 36 ವರ್ಷದ ರಾಜಕೀಯ ಜೀವನದಲ್ಲಿ ಪಕ್ಷ ನಿಷ್ಠೆ ಪ್ರಶ್ನಾರ್ಥಕ ಚಿಹ್ನೆಯಾಗಲು ಅವಕಾಶ ಕೊಟ್ಟಿಲ್ಲ. ಪಂಚಾಯತ್ನಿಂದ ಪಾರ್ಲಿಮೆಂಟ್ವರೆಗೂ ಬಿಜೆಪಿ ಗೆಲ್ಲಿಸಬೇಕು ಅಂತ ಹೋರಾಟ ಮಾಡಿದ್ದೇನೆ. ನಾನು ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಚಿಕ್ಕಮಗಳೂರು ಸೇರಿದಂತೆ 28 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಓದಿ: ಬೆಳಗಾವಿಯಲ್ಲೊಂದು ಕನ್ನಡ ಮದುವೆ; ಇದು ಮದುವೆಯೋ, ಸಾಹಿತ್ಯ ಸಮ್ಮೇಳನವೋ.. ಹೊಸ ಇತಿಹಾಸ ಬರೆದ ಗಡಿ ಕನ್ನಡಿಗ