ಬೆಳಗಾವಿ: ಲೋಕಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗುವ ಮುನ್ನವೇ ಆಕಾಂಕ್ಷಿಗಳ ಓಡಾಟ ಜೋರಾಗಿದೆ. ಇನ್ನು ತಮ್ಮ ನಾಯಕರ ಪರ ಬೆಂಬಲಿಗರು ಭರ್ಜರಿ ಬ್ಯಾಟಿಂಗ್ ಕೂಡಾ ಮಾಡುತ್ತಿದ್ದಾರೆ. ಆದರೆ, ಬೆಳಗಾವಿಯಲ್ಲಿ ಮಾತ್ರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಲೋಕಸಭೆಗೆ ಕಳಿಸದಂತೆ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ.
ಬಿಜೆಪಿ ಹಿಡಿತದಲ್ಲಿರುವ ಬೆಳಗಾವಿ ಲೋಕಸಭೆ ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ರಣತಂತ್ರ ರೂಪಿಸಿದೆ. ಅದರಲ್ಲೂ ಪ್ರಭಾವಿ ನಾಯಕ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನೇ ಕಣಕ್ಕಿಳಿಸಿದರೆ ಗೆಲುವು ಸುಲಭವಾಗುವ ಲೆಕ್ಕಾಚಾರವನ್ನ ಕಾಂಗ್ರೆಸ್ ಹೊಂದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಸತೀಶ್ ಜಾರಕಿಹೊಳಿ ಮಾತ್ರ ಸ್ಪರ್ಧೆಗೆ ಉತ್ಸುಕತೆ ತೋರಿಸುತ್ತಿಲ್ಲ ಎಂಬ ಮಾತಿದೆ.
ಅತ್ತ ಹೈಕಮಾಂಡ್ ಸತೀಶ್ ಕಣಕ್ಕಿಳಿಸಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದರೆ, ಇತ್ತ ಸತೀಶ್ ಮಹಿಳಾ ಅಭಿಮಾನಿಗಳು, ಕಾರ್ಯಕರ್ತೆಯರು ಯಾವುದೇ ಕಾರಣಕ್ಕೂ ಇದಕ್ಕೆ ನಾವು ಅವಕಾಶ ಕೊಡೋದಿಲ್ಲ. ನಮ್ಮ ಸಾಹೇಬರು ರಾಜ್ಯದಲ್ಲೇ ಮಂತ್ರಿಯಾಗಿ ಮುಂದುವರಿಯಬೇಕು. ಅಷ್ಟಕ್ಕೂ ಇದನ್ನು ಮೀರಿ ಟಿಕೆಟ್ ನೀಡಿದರೆ ಬೆಳಗಾವಿಯಿಂದ ದೆಹಲಿ ಚಲೋ ಮಾಡುತ್ತೇವೆ ಎಂದು ಕಾಂಗ್ರೆಸ್ ಹೈಕಮಾಂಡ್ಗೆ ಸಂದೇಶ ರವಾನಿಸಿದ್ದಾರೆ.

ಜಾರಕಿಹೊಳಿ ಪುತ್ರಿಗೆ ಟಿಕೆಟ್ ಕೊಡುವಂತೆ ಆಗ್ರಹ: ಈಟಿವಿ ಭಾರತ ಜೊತೆಗೆ ಮಾತನಾಡಿದ ಸ್ಥಳೀಯ ಮುಖಂಡರಾದ ಆಯಿಷಾ ಸನದಿ, ಸತೀಶ್ ಜಾರಕಿಹೊಳಿ ಅವರು ಉತ್ತರಕರ್ನಾಟಕದ ಪ್ರಭಾವಿ ನಾಯಕರಾಗಿದ್ದು, ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ 11 ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಉ.ಕ. ಅಭಿವೃದ್ಧಿ ಸತೀಶ್ ಅವರಿಂದ ಮಾತ್ರ ಸಾಧ್ಯ. ಹಾಗಾಗಿ, ಅವರು ರಾಜ್ಯದಲ್ಲೇ ಇರಬೇಕು. ಅವರ ಬದಲು ಆಧುನಿಕ ಚೆನ್ನಮ್ಮ ಎಂದು ಖ್ಯಾತಿ ಪಡೆದಿರುವ ಲಕ್ಷ್ಮೀ ಹೆಬ್ಬಾಳ್ಕರ್ಗೆ ಟಿಕೆಟ್ ಕೊಡಿ. ವಿನಯ ನಾವಲಗಟ್ಟಿ ಸೇರಿ ನಾನು ಕೂಡ ಅರ್ಜಿ ಸಲ್ಲಿಸಿದ್ದೇನೆ. ಇಲ್ಲವೇ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಟಿಕೆಟ್ ಕೊಡಿ, ರಾತ್ರಿ ಹಗಲು ದುಡಿದು ಗೆಲ್ಲಿಸಿಕೊಂಡು ಬರುತ್ತೇವೆ ಎಂದಿದ್ದಾರೆ.
ಟಿಕೆಟ್ ಕೊಟ್ಟರೆ ಸತೀಶ್ ಪುತ್ರಿ ಪ್ರಿಯಾಂಕಾಗೆ ಟಿಕೆಟ್ ಕೊಡಿ. ಇಲ್ಲದಿದ್ದರೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನೆ ಕಣಕ್ಕಿಳಿಸುವಂತೆ ಸತೀಶ್ ಬೆಂಬಲಿಗರು ಒತ್ತಾಯಿಸಿದ್ದಾರೆ. ಒಂದು ವೇಳೆ, ಸತೀಶ್ ಜಾರಕಿಹೊಳಿ ಅವರು ಹೈಕಮಾಂಡ್ ಒತ್ತಡಕ್ಕೆ ಮಣಿದು ಸ್ಪರ್ಧಿಸಲು ಮುಂದಾದರೆ, ಸತೀಶ್ ಅವರ ಕೈಕಾಲು ಬಿದ್ದಾದರೂ ಅವರನ್ನು ರಾಜ್ಯದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.

ಪುತ್ರನ ಪರ ಸಚಿವೆ ಬ್ಯಾಟಿಂಗ್: ಮೃಣಾಲ್ ಲೋಕಸಭೆಗೆ ಸ್ಪರ್ಧಿಸುವಂತೆ ಜನ ಅಪೇಕ್ಷೆ ಪಡುತ್ತಿದ್ದಾರೆ ಎಂದು ಹೇಳುವ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಪರ ಬ್ಯಾಟಿಂಗ್ ಬೀಸಿದ್ದಾರೆ. ಇನ್ನು ಸತೀಶ್ ಜಾರಕಿಹೊಳಿ ಮಾತ್ರ ಬಹಿರಂಗವಾಗಿ ಪುತ್ರಿ ಪ್ರಿಯಾಂಕಾ ಕೂಡ ಟಿಕೆಟ್ ಆಕಾಂಕ್ಷಿ ಎಂದು ಎಲ್ಲಿಯೂ ಹೇಳಿಲ್ಲ. ಆದರೆ, ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಪ್ರಿಯಾಂಕಾಗೆ ಟಿಕೆಟ್ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಒಟ್ಟಾರೆ ಬೆಳಗಾವಿ ಲೋಕ ಸಮರದಲ್ಲಿ ಅಂತಿಮವಾಗಿ ಕೈ ಪಡೆ ಯಾರನ್ನು ಕಣಕ್ಕಿಳಿಸುತ್ತೆ ಎಂಬುದು ಮಾತ್ರ ತೀವ್ರ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: '2024ಕ್ಕೆ ಮತ್ತೊಮ್ಮೆ ಮೋದಿ' ಗೋಡೆ ಬರಹಕ್ಕೆ ಯಡಿಯೂರಪ್ಪ ಚಾಲನೆ