ಬೆಳಗಾವಿ: ಮಹಾತ್ಮಾ ಗಾಂಧೀಜಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಒಂದೇ ಬಾರಿ. ಅದು ನಡೆದಿದ್ದು ಗಡಿನಾಡು ಬೆಳಗಾವಿಯಲ್ಲಿ. ಈ ಅಧಿವೇಶನಕ್ಕೀಗ ಶತಮಾನದ ಸಂಭ್ರಮ. ಅಧಿವೇಶನ ಹಿನ್ನೆಲೆಯಲ್ಲಿ ನಿರ್ಮಿಸಿದ್ದ ಬಾವಿ ಈಗಲೂ ಅಧಿವೇಶನಕ್ಕೆ ಸಾಕ್ಷಿಯಾಗಿ ನಿಂತಿದೆ. ಆ ಬಾವಿಯನ್ನು ಕಾಂಗ್ರೆಸ್ ಬಾವಿ ಅಂತಾನೇ ಕರೆಯುತ್ತಾರೆ.
ಕ್ರಾಂತಿಯ ನೆಲ ಬೆಳಗಾವಿ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಬ್ರಿಟಿಷರನ್ನು ಮೊಟ್ಟ ಮೊದಲ ಬಾರಿಗೆ ಸೋಲಿಸಿದ ಖ್ಯಾತಿ ಕೂಡ ಇದೇ ನಾಡಿನ ವೀರರಾಣಿ ಕಿತ್ತೂರು ಚೆನ್ನಮ್ಮನಿಗೆ ಸಲ್ಲುತ್ತದೆ. ಇಂಥ ನಾಡಿನಲ್ಲಿ ಡಿ.26, 27, 1924ರಂದು ಎರಡು ದಿನಗಳ ಕಾಲ ಐತಿಹಾಸಿಕ 39ನೇ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಆ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಎಂಬುದು ಮತ್ತೊಂದು ವಿಶೇಷ. ಆ ಬಳಿಕ ಮತ್ತೆ ಗಾಂಧೀಜಿ ಯಾವುದೇ ಅಧಿವೇಶನದಲ್ಲಿ ಅಧ್ಯಕ್ಷತೆ ವಹಿಸದೇ ಇರುವುದು ಗಮನಾರ್ಹ ಸಂಗತಿ.
1923ರಲ್ಲಿ ಆಂಧ್ರ ಪ್ರದೇಶದ ಕಾಕಿನಾಡದಲ್ಲಿ 38ನೇ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಆ ವೇಳೆ ಮುಂದಿನ ಅಧಿವೇಶನ ಕರ್ನಾಟಕದಲ್ಲಿ ಆಗಬೇಕೆಂದು ನಿರ್ಣಯ ಕೈಗೊಳ್ಳಲಾಗಿತ್ತು. ಆ ಪ್ರಕಾರ ಕರ್ನಾಟಕದ ಬೆಳಗಾವಿಯಲ್ಲಿ ಆಯೋಜಿಸುವ ಬಗ್ಗೆ ರಾಷ್ಟ್ರೀಯ ನಾಯಕರು ಅಂತಿಮ ತೀರ್ಮಾನ ಹೊರಡಿಸಿದರು. ಇನ್ನು ಅಧಿವೇಶನ ಯಶಸ್ವಿಗೊಳಿಸಲು ಕರ್ನಾಟಕದ ಕೇಸರಿ ಗಂಗಾಧರರಾವ್ ದೇಶಪಾಂಡೆ, ಗೋವಿಂದರಾವ್ ಯಾಳಗಿ, ಅಣ್ಣು ಗುರೂಜಿ ಸೇರಿ ಮೊದಲಾದವರು ಜವಾಬ್ದಾರಿ ತೆಗೆದುಕೊಂಡಿದ್ದರು.
ಅಧಿವೇಶನದ ವೇದಿಕೆ, ಗಣ್ಯರಿಗೆ ವಸತಿ, ತಾತ್ಕಾಲಿಕ ರೈಲು ನಿಲ್ದಾಣ ಸೇರಿ ಎಲ್ಲ ಸಿದ್ಧತೆ ಕೈಗೊಳ್ಳಲಾಗಿತ್ತು. ಅಧಿವೇಶನ ನಡೆದ ಟಿಳಕವಾಡಿಯಲ್ಲಿ ಒಂದು ಸ್ಥಳ ಗುರುತಿಸಿ ಅದಕ್ಕೆ "ವಿಜಯನಗರ" ಎಂದು ನಾಮಕರಣ ಮಾಡಿದ್ದರು. ಅಂದಾಜು 30 ಸಾವಿರ ಜನರು ಅಧಿವೇಶನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಹಿನ್ನೆಲೆಯಲ್ಲಿ ಅವರಿಗೆಲ್ಲಾ ನೀರಿನ ಸೌಕರ್ಯಕ್ಕಾಗಿ ಒಂದು ಬಾವಿಯನ್ನೆ ತೋಡಿದ್ದರು. ಆ ಬಾವಿ ಈಗಲೂ ಇದೆ. ಆ ಬಾವಿಯನ್ನು ಕಾಂಗ್ರೆಸ್ ಬಾವಿ ಎಂದು ಕರೆಯಲಾಗುತ್ತದೆ.
ಬಾವಿಯ ಇತಿಹಾಸ: ಅರ್ಧ ಬಾವಿ ಅಗೆದಾಗ ನಾರಾಯಣ ಹರಪನಹಳ್ಳಿ ಎಂಬ 9 ವರ್ಷದ ಬಾಲಕ ಆಟ ಆಡುತ್ತಾ ಬಿದ್ದು ಸಾವನ್ನಪ್ಪಿದ್ದ. ಆ ಸಂದರ್ಭದಲ್ಲಿ ಸ್ಥಳೀಯರು ಬಾವಿಯನ್ನು ಅರ್ಧಕ್ಕೆ ಕೈ ಬಿಡುವುದು ಒಳಿತು, ಇದು ಅಪಶಕುನ ಅಂತೆಲ್ಲಾ ಮಾತಾಡಿದ್ದರು. ಆದರೆ, ಈಗ ಅರ್ಧ ಆಗಿದ್ದು, ಮತ್ತೆ ಹೊಸ ಬಾವಿ ತೋಡಲು ಖರ್ಚಾಗುತ್ತದೆ ಎಂದು ಜನರ ಮನವಲಿಸಿದ ಗಂಗಾಧರರಾವ್ ದೇಶಪಾಂಡೆ ಕೆಲಸ ಶುರು ಮಾಡಿಸಿದ್ದರು. ಸಮಸ್ಯೆ ಬಗೆಹರಿಯಿತು ಎನ್ನುತ್ತಿದ್ದಂತೆ ತಮ್ಮ ಈಜುಕೊಳಕ್ಕೆ ನೀರು ಕಡಿಮೆ ಆಗುತ್ತದೆಂದು ಬ್ರಿಟಿಷ್ ರೆಜಿಮೆಂಟ್ ಬಾವಿ ತೋಡಲು ತಗಾದೆ ತೆಗೆಯಿತು. ಆಗ ಗಂಗಾಧರರಾವ್ ದೇಶಪಾಂಡೆ ಅವರು ಅಧಿವೇಶನ ಮುಗಿದ ಬಳಿಕ ಬಾವಿ ಮುಚ್ಚುತ್ತೇವೆ ಎಂದು ಮುಚ್ಚಳಿಕೆ ಬರೆದು ಕೊಟ್ಟಿದ್ದರಿಂದ ಬ್ರಿಟಿಷ್ ಅಧಿಕಾರಿಗಳು ಬಾವಿ ತೋಡಲು ಅನುಮತಿ ನೀಡಿದ್ದರು ಎಂದು ಹಿರಿಯ ಪತ್ರಕರ್ತ ಸುಭಾಷ ಕುಲಕರ್ಣಿ ತಿಳಿಸಿದ್ದಾರೆ.
ಪಂಪಾ ಸರೋವರ-ಕಾಂಗ್ರೆಸ್ ಬಾವಿ: ಎಲ್ಲಾ ಅಡೆತಡೆಗಳನ್ನು ದಾಟಿ ಬಾವಿ ಕಾಮಗಾರಿ ಪೂರ್ಣಗೊಂಡು ನೀರು ಕೂಡ ಬಂತು. ಬಾವಿಯ ಪ್ರವೇಶ ದ್ವಾರದ ಮೇಲಿನ ಗೋಪುರದ ಮೇಲೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ "ಪಂಪಾ ಸರೋವರ" ಎಂದು ಬರೆಯಲಾಗಿತ್ತು. ವಿಜಯನಗರ ಸಾಮ್ರಾಜ್ಯದ ಕುರುಹಿಗಾಗಿ ಅಧಿವೇಶನ ನಡೆದ ಸ್ಥಳವನ್ನು ವಿಜಯನಗರ ಎಂದು ನಾಮಕರಣ ಮಾಡಿದ್ದರು. ಪ್ರವೇಶ ದ್ವಾರಕ್ಕೆ ಹಂಪಿ ವಿರೂಪಾಕ್ಷ ದೇವಾಲಯದ ಗೋಪುರ ನಿರ್ಮಿಸಲಾಗಿತ್ತು. ಸ್ವಾತಂತ್ರ್ಯಾ ನಂತರ ಪಂಪಾ ಸರೋವರ ಹೆಸರುಗೊಂಡಿದ್ದ ಬಾವಿಯನ್ನು ಜನ ಕಾಂಗ್ರೆಸ್ ಬಾವಿ ಎಂದು ಕರೆಯಲು ಆರಂಭಿಸಿದರು. ಈಗಲೂ ಕಾಂಗ್ರೆಸ್ ಬಾವಿ ಅಂತಾನೆ ಇದು ಪ್ರಸಿದ್ಧಿ ಪಡೆದುಕೊಂಡಿದೆ ಎಂಬುದು ಸುಭಾಷ ಕುಲಕರ್ಣಿ ಅವರ ಅಭಿಪ್ರಾಯ.
ಬಾವಿ ನಿರ್ಮಾಣಕ್ಕಾದ ಖರ್ಚು ಎಷ್ಟು?: ಬಾವಿ ನಿರ್ಮಾಣಕ್ಕೆ ಸುಮಾರು 4 ತಿಂಗಳು ಸಮಯ ತೆಗೆದುಕೊಳ್ಳಲಾಗಿತ್ತು. 50 ಅಡಿ ಉದ್ದ, 40 ಅಡಿ ಅಗಲ, 60 ಅಡಿ ಆಳದ ಬಾವಿಗೆ 4370 ರೂ. 3 ಆಣೆ ಖರ್ಚಾಗಿತ್ತು. ಕರಿ ಕಲ್ಲಿನಿಂದ ಕಟ್ಟಿರುವ ಈ ಬಾವಿಯಲ್ಲಿ ಮೇಲಿನಿಂದ ಕೆಳಗಿನವರೆಗೂ ಮೆಟ್ಟಿಲು ಇದ್ದವು. ಮೆಟ್ಟಿಲುಗಳ ಒಂದು ಬದಿಗೆ ಕಟ್ಟೆ ಕೂಡ ಇತ್ತು. ನೀರು ತುಂಬಿಕೊಳ್ಳಲು 10 ಗಡಗಡಿಗಳು, 10 ಕಮಾನುಗಳು ಇದ್ದವು. ಇನ್ನು ನೀರಿನ ಮಟ್ಟ ಗೊತ್ತಾಗಲು ಬಾವಿಯ ಸುತ್ತಲೂ ಕಲ್ಲಿನಿಂದ ಮಾಪನ ಅಳವಡಿಸಲಾಗಿತ್ತು ಎಂದು ಸುಭಾಷ ಕುಲಕರ್ಣಿ ವಿವರಿಸಿದರು.
ಕಾಂಗ್ರೆಸ್ ಅಧಿವೇಶನಕ್ಕೆ ಆಗಮಿಸಿದ ಗಾಂಧೀಜಿ ಮೊದಲು ಪಂಡಿತ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್ ಸೇರಿ ಎಲ್ಲರೂ ಇದೇ ಬಾವಿಯ ನೀರನ್ನು ಕುಡಿಯಲು ಮತ್ತು ಬಳಸಲು ಬಳಸಿದ್ದರು ಎಂಬುದು ವಿಶೇಷ. ಇನ್ನು ಅಧಿವೇಶನ ಬಳಿಕ ಬ್ರಿಟಿಷ್ ಅಧಿಕಾರಿಗಳು ಬಾವಿ ಬಗ್ಗೆ ಲಕ್ಷ ವಹಿಸದ ಹಿನ್ನೆಲೆ ಬಾವಿ ಈಗಲೂ ಆಗಿನ ಚರಿತ್ರೆ ಸಾರುತ್ತಿದೆ.
ಕುಸಿದಿದ್ದ ಬಾವಿಯ ಒಂದು ಭಾಗದ ಗೋಡೆಯನ್ನು ಹೋರಾಟಗಾರರ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ದುರಸ್ಥಿಪಡಿಸಿದೆ. ಆಯತಾಕಾರದ ಬಾವಿ ಈಗ ಗೋಲಾಕಾರದಲ್ಲಿ ರೂಪಾಂತರಗೊಂಡಿದೆ. ಬಾವಿಯ ಹಿಂಭಾಗದ ಗೋಡೆಯ ಮೇಲೆ ಮಹಾತ್ಮಾ ಗಾಂಧೀಜಿ ಸೇರಿ ಹಲವಾರು ಹೋರಾಟಗಾರರ ಉಬ್ಬು ಚಿತ್ರಗಳನ್ನು ಬಿಡಿಸಲಾಗಿದೆ. ಬಾವಿಯ ಮೇಲ್ಭಾಗದಲ್ಲಿ ತಂತಿಯಿಂದ ಮುಚ್ಚಲಾಗಿದ್ದು, ಬಾವಿ ತುಂಬಾ ನೀರಿದೆ. ಈಗ ಮಹಾನಗರ ಪಾಲಿಕೆಯಿಂದ ಸುತ್ತಲಿನ ನಿವಾಸಿಗಳಿಗೆ ಬಾವಿಯ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿದೆ.
ವೀರಸೌಧ ನಿರ್ಮಾಣ: ಕಾಂಗ್ರೆಸ್ ಅಧಿವೇಶನ ನಡೆದ ಧ್ಯೋತಕವಾಗಿ ಇಲ್ಲಿ ವೀರಸೌಧ ನಿರ್ಮಿಸಲಾಗಿದೆ. 2002ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಉದ್ಘಾಟಿಸಿದ್ದರು. ವೀರಸೌಧದಲ್ಲಿ ಮಹಾತ್ಮಾ ಗಾಂಧೀಜಿ ಸುಂದರ ಪುತ್ಥಳಿ, ಹಿಂಭಾಗದಲ್ಲಿ ಅತಿರಥ, ಮಹಾರಥ ಸ್ವಾತಂತ್ರ್ಯ ಹೋರಾಟಗಾರರ ಉಬ್ಬು ಚಿತ್ರಗಳು, ಅಧಿವೇಶನದ ಛಾಯಾಚಿತ್ರಗಳು, ಗಾಂಧೀಜಿ ಬಾಲ್ಯ, ಹೋರಾಟ ಸೇರಿ ಪ್ರಮುಖ ಸಂದರ್ಭದ ಭಾವಚಿತ್ರಗಳು ಗಮನ ಸೆಳೆಯುತ್ತಿವೆ.
ಕಾಂಗ್ರೆಸ್ ರಸ್ತೆ ಮೊದಲು ಏನಾಗಿತ್ತು?: ಬೆಳಗಾವಿ ಗೋಗಟೆ ವೃತ್ತದಿಂದ ಎರಡನೇ ರೈಲ್ವೆ ಗೇಟ್ವರೆಗಿನ ರಸ್ತೆಯನ್ನು ಆಗ ಮುಂಬೈ ಪ್ರಾಂತ್ಯದ ಗವರ್ನರ್ ಬ್ರೆಬೊರ್ನ್ ರೋಡ್ ಎಂದು ಕರೆಯುತ್ತಿದ್ದರು. ಅಧಿವೇಶನ ಮುಗಿದ ತಕ್ಷಣ ಅಧಿವೇಶನದ ಸವಿನೆನಪಿಗೋಸ್ಕರ ಕಾಂಗ್ರೆಸ್ ರಸ್ತೆ ಎಂದು ನಾಮಕರಣ ಮಾಡುವಂತೆ ಸ್ವಾತಂತ್ರ್ಯ ಹೋರಾಟಗಾರರು ಹೋರಾಟ ಶುರು ಮಾಡಿದರು. ಈ ಹೆಸರು ಉಳಿಸಲು ಅದೇಷ್ಟೋ ಸ್ವಾತಂತ್ರ್ಯ ಸೈನಿಕರು ಲಾಠಿ ಏಟು ಕೂಡ ತಿಂದಿದ್ದಾರೆ. ಸ್ವಾತಂತ್ರ್ಯಾ ನಂತರದಲ್ಲಿ ಈ ರಸ್ತೆಯನ್ನು ಕಾಂಗ್ರೆಸ್ ರಸ್ತೆ ಎಂದು ಅಧಿಕೃತಗೊಳಿಸಲಾಗಿದೆ.
ಇದನ್ನೂ ಓದಿ: ಟರ್ಕಿ ದೇಶದ ಸಜ್ಜೆ ಬೆಳೆದು ಯಶಸ್ವಿಯಾದ ಗಂಗಾವತಿ ರೈತ - Turkey Pearl Millet