ಬೆಂಗಳೂರು: ಕರ್ನಾಟಕ ಲೋಕಸಮರ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಮೈಲುಗೈ ಸಾಧಿಸಿದ್ದು, ಕಾಂಗ್ರೆಸ್ ಒಂದಂಕಿಗೆ ತೃಪ್ತಿ ಪಟ್ಟುಕೊಂಡಿದೆ. ರಾಜ್ಯ ಲೋಕಸಮರದಲ್ಲಿ ಮೂರು ಪಕ್ಷಗಳು ಪಡೆದ ಮತ ಪ್ರಮಾಣ ಏನು ಎಂಬ ವರದಿ ಇಲ್ಲಿದೆ.
ಲೋಕಸಮರ ಫಲಿತಾಂಶದ ಕುತೂಹಲ ಮುಕ್ತಾಯವಾಗಿದೆ. ಕರ್ನಾಟಕದಲ್ಲಿ ಬಿಜೆಪಿ 17 ಸ್ಥಾನ, ಕಾಂಗ್ರೆಸ್ 9 ಹಾಗೂ ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ಬಾರಿ 25 ಸ್ಥಾನ ಗೆದ್ದಿದ್ದ ಬಿಜೆಪಿ, ಈ ಸಲ 8 ಸ್ಥಾನ ಕುಸಿತ ಕಂಡಿದೆ. ಇತ್ತ 2019ರಲ್ಲಿ 1 ಸ್ಥಾನ ಪಡೆದ ಕಾಂಗ್ರೆಸ್, ಈ ಸಲ 8 ಸ್ಥಾನ ಹೆಚ್ಚಿಸಿಕೊಂಡಿದೆ. ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ.
ಮತ ಪ್ರಮಾಣ ಹೆಚ್ಚಿಸಿಕೊಂಡ ಕಾಂಗ್ರೆಸ್: ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎರಡಂಕಿ ದಾಟುವಲ್ಲಿ ವಿಫಲವಾದರೂ, ಕರ್ನಾಟಕದಲ್ಲಿ ಗಣನೀಯ ಪ್ರಮಾಣದಲ್ಲಿ ಮತ ಹೆಚ್ಚಿಸಿಕೊಳ್ಳುವಲ್ಲಿ ಯಶ ಕಂಡಿದೆ. ರಾಜ್ಯದಲ್ಲಿ ಶೇ. 45.64ರಷ್ಟು ಮತ ಗಳಿಸಿದೆ. 2019ರ ಚುನಾವಣೆಯಲ್ಲಿ 1 ಸ್ಥಾನ ಜಯಿಸಿದ್ದ ಕಾಂಗ್ರೆಸ್, ರಾಜ್ಯದಲ್ಲಿ ಕೇವಲ ಶೇ. 32ರಷ್ಟು ಮತ ಗಳಿಸಿತ್ತು. ಈ ಬಾರಿ ಒಟ್ಟು 1,76,06,669 ಮತಗಳು ಕೈ ಪಡೆಗೆ ಲಭಿಸಿವೆ.
ಕಾಂಗ್ರೆಸ್ ಈ ಸಲ ಪಂಚ ಗ್ಯಾರಂಟಿ ಬಲದೊಂದಿಗೆ ಎರಡಂಕಿ ಸ್ಥಾನ ಗೆಲ್ಲುವ ವಿಶ್ವಾಸ ಹೊಂದಿತ್ತು. ಆದರೆ ಮೈತ್ರಿ ಮುಂದೆ ಗ್ಯಾರಂಟಿ ನಿರೀಕ್ಷಿತ ಫಲ ನೀಡಲು ಸಾಧ್ಯವಾಗಿಲ್ಲ. ಕೇವಲ 9 ಸ್ಥಾನಗಳನ್ನು ಗೆದ್ದು ಒಂದಂಕಿಗೆ ತೃಪ್ತಿ ಪಡಬೇಕಾಯಿತು. ರಾಜ್ಯದಲ್ಲಿ ಏಕಾಂಗಿಯಾಗಿ ಹೋರಾಟ ಮಾಡಿದ್ದ ಕಾಂಗ್ರೆಸ್ ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಬಿರುಸಿನ ಸ್ಪರ್ಧೆ ನೀಡಿದೆ.
ಬಿಜೆಪಿ ಮತ ಪ್ರಮಾಣದಲ್ಲಿ ಇಳಿಕೆ: ಈ ಬಾರಿ ಬಿಜೆಪಿ ಮತದಲ್ಲಿ ತೀವ್ರ ಕುಸಿತವಾಗಿದೆ. ಕಳೆದ ಸಲ 25 ಸ್ಥಾನ ಗೆದ್ದಿದ್ದ ಬಿಜೆಪಿ, ಸದ್ಯ 17 ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿಯ ಲೋಕಸಮರದಲ್ಲಿ ಶೇ. 51ರಷ್ಟು ಮತ ಪ್ರಮಾಣ ಗಳಿಸಿತ್ತು. ಆದರೀಗ ಮತ ಪ್ರಮಾಣ ಶೇ.46.35ಕ್ಕೆ ಕುಸಿದಿದೆ. 2019ಕ್ಕಿಂತ ಮತ ಪ್ರಮಾಣ ಸುಮಾರು ಶೇ.5ರಷ್ಟು ಕಡಿತವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕೇವಲ ಶೇ. 1ಕ್ಕಿಂತಲೂ ಕಡಿಮೆ ಪ್ರಮಾಣದ ವ್ಯತ್ಯಾಸ ಆಗಿದೆ. ಬಿಜೆಪಿಗೆ ಒಟ್ಟು 1,78,79,261 ಮತಗಳು ಬಿದ್ದಿವೆ.
ಜೆಡಿಎಸ್ ಮತ ಪ್ರಮಾಣದಲ್ಲೂ ಕುಸಿತ: ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ಗೆ ಈ ಬಾರಿ ಲೋಕಸಮರ ಸಮಾಧಾನಕರ ಫಲಿತಾಂಶವನ್ನೇ ನೀಡಿದೆ. ಸ್ಪರ್ಧಿಸಿದ್ದ ಮೂರು ಕ್ಷೇತ್ರಗಳಲ್ಲಿ 2 ಸ್ಥಾನಗಳನ್ನು ಗೆದ್ದಿದೆ. ಕಳೆದ ಬಾರಿ ಹಾಸನ ಕ್ಷೇತ್ರವನ್ನು ಮಾತ್ರ ಗೆದ್ದಿದ್ದ ಜೆಡಿಎಸ್, ಈ ಸಲ ಅಲ್ಲಿ ಮುಗ್ಗರಿಸಿದರೆ, ಮಂಡ್ಯ ಹಾಗೂ ಕೋಲಾರವನ್ನು ಗಿಟ್ಟಿಸಿಕೊಂಡಿದೆ. ಈ ಹಿಂದೆ ಕಾಂಗ್ರೆಸ್ ಜೊತೆಗಿನ ಮೈತ್ರಿ ಜೆಡಿಎಸ್ಗೆ ದುಬಾರಿಯಾಗಿತ್ತು. ಈ ಸಲ ಬಿಜೆಪಿ ಜೊತೆಗಿನ ಮೈತ್ರಿ ಜೆಡಿಎಸ್ಗೆ ಲಾಭ ತಂದಿದೆ.
ಆದರೆ, ಜೆಡಿಎಸ್ ಈ ಬಾರಿ ಶೇ. 5.60ರಷ್ಟು ಪ್ರಮಾಣದ ಮತ ಗಳಿಸಿದೆ. 2019ರಲ್ಲಿ ಸುಮಾರು ಶೇ. 10ರಷ್ಟು ಮತ ಲಭಿಸಿತ್ತು. ಕಳೆದ ಬಾರಿಗಿಂತ ಮತ ಗಳಿಕೆಯಲ್ಲಿ ಕುಸಿತ ಕಂಡಿದ್ದರೂ, ಹೆಚ್ಚಿನ ಸ್ಥಾನಗಳ ಗೆಲುವು ದಾಖಲಿಸಿದೆ. ಜೆಡಿಎಸ್ಗೆ ಸುಮಾರು 21,63,203 ಮತಗಳು ಸಿಕ್ಕಿವೆ.