ಕೋಲಾರ : ಕೋಲಾರದ ಮುಳಬಾಗಿಲಿನ ಕುರುಡುಮಲೆ ವಿನಾಯಕನ ಸನ್ನಿಧಿಯಲ್ಲಿ ಪ್ರಜಾಧ್ವನಿ ಯಾತ್ರೆಗೆ ಅಧಿಕೃತವಾಗಿ ಕಾಂಗ್ರೆಸ್ ಚಾಲನೆ ನೀಡಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯ ರಣಕಹಳೆ ಊದಲಾಗಿದೆ.
ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಜಾಲಪ್ಪ ಆಸ್ಪತ್ರೆ ಆವರಣದಲ್ಲಿ ಬಂದಿಳಿದ ಸಿಎಂ ಹಾಗೂ ಡಿಸಿಎಂ ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಹೈದರ್ ಅಲಿ ದರ್ಗಾಕ್ಕೆ ಭೇಟಿ ನೀಡಿದರು. ನಗರದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತೆರೆದ ವಾಹನದಲ್ಲಿ ಕೈ ನಾಯಕರು ಪ್ರಜಾಧ್ವನಿ ಯಾತ್ರೆಯ ರೋಡ್ ಶೋ ಮಾಡಿದರು.
ನಾಮಪತ್ರ ಸಲ್ಲಿಕೆ ವೇಳೆ ಕಾಣಿಸಿಕೊಂಡಿದ್ದ ಸಚಿವ ಕೆ.ಎಚ್. ಮುನಿಯಪ್ಪ, ಶಾಸಕಿ ರೂಪಕಲಾ ಹಾಗು ಕಾಂಗ್ರೆಸ್ ಮುಖಂಡರು ಇಂದು ಗೈರಾಗಿದ್ದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಬಣದ ಮುಖಂಡರು ಹಾಜರಾಗುವ ಮೂಲಕ ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಇರುವುದು ಪ್ರದರ್ಶನವಾಯಿತು.
ಇದೆ ವೇಳೆ ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ''ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಆದರೆ ಬಿಜೆಪಿಯವರು ಅಕ್ಕಿ ಕೊಡುವ ವಿಚಾರದಲ್ಲಿ ಮೋಸ ಮಾಡಿದ್ದಾರೆ. ನರೇಂದ್ರ ಮೋದಿ ಅವರು 10 ವರ್ಷ ಅಧಿಕಾರದಲ್ಲಿ ಇದ್ದರೂ ನುಡಿದಂತೆ ನಡೆದಿಲ್ಲ. ಎಲ್ಲಾ ವಸ್ತುಗಳ ಬೆಲೆ ಹೆಚ್ಚು ಮಾಡಿದ್ದಾರೆ. 15 ಲಕ್ಷ ರೂ. ಬಂದಿಲ್ಲ. ಜಾತಿ ಹೆಸರಲ್ಲಿ ಜನರನ್ನು ವಿಂಗಡಣೆ ಮಾಡುತ್ತಿರುವ ಬಿಜೆಪಿಗೆ ಯಾವತ್ತೂ ಮತ ನೀಡಬೇಡಿ. ಬಿಜೆಪಿ ಮತ್ತು ಜೆಡಿಎಸ್ನವರು ಒಂದಾಗಿದ್ದಾರೆ'' ಎಂದರು.
''ಮೋದಿ ಅವರು ಪ್ರಧಾನಿ ಆದ್ರೆ ದೇಶ ಬಿಡುವೆ ಎಂದು ಹೆಚ್.ಡಿ ದೇವೇಗೌಡ ಅವರು ಹೇಳಿದರು. ಮುಂದೆ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದಿದ್ದರು. ಈಗ ಮೋದಿ ನನ್ನನ್ನು ಪ್ರೀತಿಸುತ್ತಾರೆ ಎನ್ನುತ್ತಾರೆ ಎಂದು ಗೇಲಿ ಮಾಡಿದ ಸಿಎಂ ಕೋಲಾರದಲ್ಲಿ ಮೈತ್ರಿ ಅಭ್ಯರ್ಥಿಯನ್ನು ಸೋಲಿಸಬೇಕು'' ಎಂದು ಕರೆ ನೀಡಿದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿ, ''ಇಂಡಿಯಾ ಒಕ್ಕೂಟದ ಚುನಾವಣೆ ಇದಾಗಿದ್ದು, ಗ್ಯಾರಂಟಿಗಳಿಗೆ ಸಹಿ ಹಾಕಿದ್ದಾರೆ. ಸೂರ್ಯ ಹೇಗೆ ಹುಟ್ಟುತ್ತದೆಯೋ ಹಾಗೆ ಕೈ ಹುಟ್ಟುತ್ತದೆ. ಸೂರ್ಯ ಹೇಗೆ ಅಸ್ತಂಗತ ಆಗುತ್ತೋ ಹಾಗೆ ಕಮಲ ಮುದುಡುತ್ತೆ, ತೆನೆ ಬೀಳುತ್ತೆ. ದಾನ ಧರ್ಮ ಮಾಡುವ ಕೈ ಅಧಿಕಾರಕ್ಕೆ ಬಂದದ್ದಕ್ಕೆ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಕೇಂದ್ರದಲ್ಲಿ ಇಂಡಿಯಾ ಒಕ್ಕೂಟದ ಮೈತ್ರಿ ಕೂಟದ ಸರ್ಕಾರ ಬಂದರೆ ಹೆಚ್ಚಾಗಿ ಕೊಡುತ್ತೇವೆ'' ಎಂದು ಭರವಸೆ ನೀಡಿದರು.
ಇದೆ ವೇಳೆ ಸಚಿವರಾದ ಬಿ.ಎಸ್. ಸುರೇಶ್, ಎಂ.ಸಿ. ಸುಧಾಕರ್, ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ, ಕೆ.ವೈ. ನಂಜೇಗೌಡ, ಶರತ್ ಬಚ್ಚೇಗೌಡ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಜಯಚಂದ್ರ, ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ. ಗೌತಮ್ ಉಪಸ್ಥಿತರಿದರು.
ಇದನ್ನೂ ಓದಿ : ಏ.16ರಂದು ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸುತ್ತೇನೆ: ಶಿವಾನಂದ ಮುತ್ತಣ್ಣವರ - Shivananda Muttannavara