ಬೆಳಗಾವಿ: ಬುಲ್ಡೋಜರ್, ಜೆಸಿಬಿ ಸೇರಿ ಎಲ್ಲವೂ ನಮ್ಮ ಬಳಿ ಇವೆ. ಈ ಬಾರಿ ಗಿಡವನ್ನು ಕೆಡವಲೇಬೇಕು ಎನ್ನುವ ಮೂಲಕ ಬಿಜೆಪಿ ಶಾಸಕ ಅಭಯ್ ಪಾಟೀಲ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪರೋಕ್ಷವಾಗಿ ಗಿಡಕ್ಕೆ ಹೋಲಿಸುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಇಂದು ನಡೆದ ಕಾಂಗ್ರೆಸ್ ಬಿಎಲ್ಒಗಳ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಬ್ಬಿಣ ಕಾಸಿ ಬಡಿದರೆ ತಾನೇ ತೆಳುವಾಗುತ್ತದೆ. ಕಬ್ಬಿಣ ಕಾಸಿ ಹೊಡೆಯುವ ರೀತಿ ಮತದಾರರಿಗೆ ತಿಳಿಸಿ ಹೇಳಿ, ಕಾಂಗ್ರೆಸ್ ಅಭ್ಯರ್ಥಿ ಪರ ಮತ ಪಡೆಯಿರಿ ಎಂದು ಕಾರ್ಯಕರ್ತರಿಗೆ ಎಂದು ಕಿವಿಮಾತು ಹೇಳಿದರು.
ಬರುವ ಚುನಾವಣೆಯಲ್ಲಿ ನಾವು ಗೆಲ್ಲಲೇಬೇಕು. ಗ್ಯಾರಂಟಿ ಯೋಜನೆಗಳು ಕಡು ಬಡವರಿಗೆ ಸರ್ಕಾರ ಮನೆ ಬಾಗಿಲಿಗೆ ಮುಟ್ಟಿಸಿದ್ದೇವೆ. ಕಳೆದ ಚುನಾವಣೆಯಲ್ಲಿ ನಾವು ಕೊಟ್ಟ ಭರವಸೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಹಾಗಾಗಿ, ನಾವು ಹಕ್ಕಿನಿಂದ ನಿಮ್ಮ ಬಳಿ ಮತ ಕೇಳುತ್ತಿದ್ದೇವೆ ಎಂದು ಮನವಿ ಮಾಡಿದರು.
ಚಿಕ್ಕೋಡಿ ಮತ್ತು ಬೆಳಗಾವಿಯಲ್ಲಿ ಯಾರನ್ನೇ ಅಭ್ಯರ್ಥಿ ಮಾಡಿದ್ರೂ ಸಹ ಚುನಾವಣೆಗೆ ಸನ್ನದ್ಧರಾಗಿರಬೇಕು. ಐದಾರು ವರ್ಷಗಳಿಂದ ದಕ್ಷಿಣ ಕ್ಷೇತ್ರಕ್ಕೆ ನಾವು ಗಮನ ಹರಿಸಿದ್ದೇವೆ. ಆರ್ ಆಂಡ್ ಡಿ ಇದ್ದಹಾಗೆ ರಿಸರ್ಚ್ ಅಂಡ್ ಡೆವಲಪ್ಮೆಂಟ್ ರೀತಿ ನಾವು ಕೆಲಸ ಮಾಡುತ್ತಿದ್ದೇವೆ. ನಮಗೆ ದಕ್ಷಿಣ ಕ್ಷೇತ್ರದಿಂದ 60 ಸಾವಿರ ಮತಗಳು ಬಂದರೆ ನಾವು ಗೆಲ್ಲುತ್ತೇವೆ. ಪ್ರತಿ ಹಳ್ಳಿಯಲ್ಲಿಯೂ ಸಹ ಬಿಎಲ್ಒಗಳು ಬೂತ್ ನೋಡಬೇಕು ಎಂದು ಸತೀಶ ಜಾರಕಿಹೊಳಿ ಸೂಚಿಸಿದರು.
ನೇಕಾರರ ಮಗ್ಗಗಳಿಗೆ ವಿದ್ಯುತ್ ನೀಡುವ ವಿಚಾರ ಪ್ರಸ್ತಾಪಿಸಿದ ಸಚಿವ ಸತೀಶ ಜಾರಕಿಹೊಳಿ, 20 ವರ್ಷದ ಹಿಂದೆ ಜಗಳ ಮಾಡಿ ನಾನು ಮತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದೆವು. ಆಗ 1 ರೂ 20 ಪೈಸೆ ಆಯ್ತು ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಅದನ್ನು 4 ರೂ. ಮಾಡಿದ್ದಾರೆ. ಇದನ್ನೆಲ್ಲವನ್ನು ಹಂತ ಹಂತವಾಗಿ ಜನರಿಗೆ ತಿಳಿ ಹೇಳುವ ಕೆಲಸ ಆಗಬೇಕು. ಸಿದ್ದರಾಮಯ್ಯ ಸರ್ಕಾರ ಬಡವರ ಪಕ್ಷ, ಆದರೆ, ಬಿಜೆಪಿ ಗಾಳಿ ಮೇಲೆ ಇರುವ ಪಕ್ಷ.
ಸರ್ಜಿಕಲ್ ಸ್ಟ್ರೈಕ್ ಅಂದ್ರು ಈಗ ರಾಮ ಅಂತಿದ್ದಾರೆ. ರಾಮ ಅವರಿಗೆ ವರ್ಕ್ ಆಗ್ತಿಲ್ಲ ಯಾಕೆಂದ್ರೆ ರಾಮ ಎಲ್ಲರ ಮನೆಯಲ್ಲೂ ಇದ್ದಾನೆ. ನಿನ್ನೆ ಯಾವುದೋ ಒಂದು ಚಾನಲ್ನಲ್ಲಿ ನೋಡ್ತಿದ್ದೆ ಅಲ್ಲಿ ವಾದ ಶುರುವಾಗಿತ್ತು. ಕಾಂಗ್ರೆಸ್ನವರು ಗಿಡ ಬೆಳೆಸಿದ್ದಾರೆ ಅಂತ ಈಗಿನವರು ಹಣ್ಣು ತಿನ್ನುತ್ತಿದ್ದಾರೆ ಎಂದು ವಾದ ಮಾಡ್ತಿದ್ದರು. ಹಾಗಾಗಿ ಬೆಳಗಾವಿ ಮತ್ತು ಚಿಕ್ಕೋಡಿ ಎರಡರಲ್ಲೂ ನಾವು ಗೆಲ್ಲಬೇಕು ಎಂದು ಸತೀಶ ಜಾರಕಿಹೊಳಿ ಹೇಳಿದರು.
ಸತೀಶ್ ಅವರಿಗೆ ಬೆಳಗಾವಿ ದಕ್ಷಿಣ ಕ್ಷೇತ್ರದ ಮೇಲೆ ಕಾಳಜಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಕಳೆದ ಚುನಾವಣೆಯಲ್ಲಿ 136 ಸೀಟ್ನೊಂದಿಗೆ ರಾಜ್ಯದ ಜನ ಗೆಲ್ಲಿಸಿದ್ದೀರಿ. ಆ ಮೂಲಕ ಇಡೀ ದೇಶವೇ ಕರ್ನಾಟಕ ದತ್ತ ತಿರುಗಿ ನೋಡುವಂತೆ ಮಾಡಿದ್ದೀರಿ. ಕಾಂಗ್ರೆಸ್ ಪಕ್ಷದ ಉದ್ದೇಶ ಸ್ವಾರ್ಥ ರಾಜಕಾರಣ ಅಲ್ಲ. ಕಾಂಗ್ರೆಸ್ ಪಕ್ಷ ಎಂದರೆ ಸಾಮಾಜಿಕ ಬದ್ಧತೆ ಬಸವಣ್ಣ, ಅಂಬೇಡ್ಕರ್ ತತ್ವದ ಮೇಲೆ ನಡೆಯುವ ಪಕ್ಷ. ಪಂಚ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದ್ದೇವೆ. ಬೂತ್ ಮಟ್ಟದ ಕಾರ್ಯಕರ್ತರು ಮತ್ತು ಬಿಎಲ್ಒಗಳು ಬಹಳ ಶ್ರಮ ಪಡಬೇಕಿದೆ. ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಸಂಘಟನೆ ಮಾಡೋಕೆ ಬಹಳ ಜನ ಶ್ರಮಿಸಿದ್ದಾರೆ. ಸತೀಶ ಜಾರಕಿಹೊಳಿಯವರು ಯಮಕನಮರಡಿಗಿಂತ ಹೆಚ್ಚು ಬೆಳಗಾವಿ ದಕ್ಷಿಣ ಕ್ಷೇತ್ರದ ಮೇಲೆ ಕಾಳಜಿ ವಹಿಸುತ್ತಾರೆ ಎಂದರು.
ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ಇದೆ. ಸ್ವಾಭಿಮಾನದಿಂದ ಮತದಾರರ ಮನೆಗೆ ಹೋಗುವ ಶಕ್ತಿ ನಮ್ಮ ಪಕ್ಷ ನೀಡಿದೆ. 10 ಹೆಚ್ ಪಿ ವಿದ್ಯುತ್ ನೀಡಿದ್ದು, ಗ್ಯಾರಂಟಿ ಯೋಜನೆಗಳನ್ನು ಸಾಕಾರಗೊಳಿಸಿದ್ದೇವೆ. ಇವನ್ನೆಲ್ಲ ಇಟ್ಟುಕೊಂಡು ನೀವು ಮತದಾರರ ಬಳಿಗೆ ಹೋಗಬೇಕು. ಇವತ್ತು ಸಂಜೆ ಹಾಗೂ ನಾಳೆಯವರೆಗೆ ಅಭ್ಯರ್ಥಿ ಫೈನಲ್ ಆಗಬಹುದು. ಪ್ರಿಯಾಂಕಾ ಹಾಗೂ ಮೃಣಾಲ್ ಹೆಸರು ಮುನ್ನೆಯಲ್ಲಿದೆ. ನೀವೆಲ್ಲ ನಮಗೆ ಸಹಕಾರ ಕೊಡ್ತಿರಿ ಎನ್ನುವ ವಿಶ್ವಾಸ ಇದೆ.
2014ರಲ್ಲಿ ನಾನು 70 ಸಾವಿರ ಮತಗಳ ಅಂತರದಿಂದ ನಾನು ಸೋತಿದ್ದೆ. ಈಗ ನಮ್ಮಲ್ಲಿ ಐವರು ಶಾಸಕರಿದ್ದಾರೆ. ಸತೀಶ ಜಾರಕಿಹೊಳಿಯವರ ನೇತೃತ್ವ, ಸಹಕಾರ ಕೊಡುವುದಕ್ಕೆ ನಾನಿದ್ದೇನೆ. ಕಾರ್ಯಕ್ರಮ, ಸಂಘಟನೆ ಮಾಡೋಕೆ ನಿಮಗೆ ಶಕ್ತಿ ತುಂಬುವೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಪಕ್ಷದ ಮೇಲೆ ಇರಲಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಕೇಳಿಕೊಂಡರು.
ಜನರು ಗ್ಯಾರಂಟಿ ಯೋಜನೆಗಳಿಂದ ಖುಷಿ: ಬೆಳಗಾವಿ ಲೋಕಸಭೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮೃಣಾಲ್ ಹೆಬ್ಬಾಳ್ಕರ್ ಮಾತನಾಡಿ, ಸತೀಶ್ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೆವೆ. ನಿಮ್ಮೆಲ್ಲರ ಆಶೀರ್ವಾದದಿಂದ ನನ್ನ ಹೆಸರು ಮುಂಚೂಣಿಯಲ್ಲಿದೆ. ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಅವರ ಹೆಸರು ಮುಂಚೂಣಿಯಲ್ಲಿದೆ. ನಾವು ಸರ್ವೇ ಮಾಡಿದಾಗ ಬಡ ಜನರು ಗ್ಯಾರಂಟಿ ಯೋಜನೆಗಳಿಂದ ಖುಷಿಯಾಗಿದ್ದಾರೆ ಎಂದು ಗೊತ್ತಾಗಿದೆ.
ಬಹಳ ಕಡಿಮೆ ಅಂತರದಲ್ಲಿ ನಾವು ಕಳೆದ ಚುನಾವಣೆಯಲ್ಲಿ ಕ್ಷೇತ್ರ ಕಳೆದುಕೊಂಡಿದ್ದೇವೆ. ಆದರೆ, ಈ ಬಾರಿ ಜನ ಬಹಳ ಹುಷಾರ್ ಆಗಿದ್ದಾರೆ. ಯಾರು ಕೆಲಸ ಮಾಡ್ತಾರೆ ಯಾರು ಕೇವಲ ಭಾಷಣ ಮಾಡ್ತಾರೆ ಎನ್ನುವುದು ಜನರಿಗೆ ಗೊತ್ತಿದೆ. ನಿಮ್ಮ ಆಶೀರ್ವಾದ ಇಲ್ಲದೇ ಏನೂ ಆಗೋದಿಲ್ಲ. ನಿಮ್ಮ ಆಶೀರ್ವಾದ ಇರಲಿ. ಜನರಿಗೆ ನೀಡಿದ ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಹೀಗಾಗಿ ಜನ ನಮ್ಮನ್ನು ಕೈ ಹಿಡಿಯುವ ವಿಶ್ವಾಸ ಇದೆ ಎಂದರು.
ಸಭೆಯಲ್ಲಿ ಬೆಳಗಾವಿ ಉತ್ತರ ಶಾಸಕ ಆಸೀಫ್(ರಾಜು) ಸೇಠ್, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸೇರಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಇದನ್ನೂಓದಿ:ಬಿಜೆಪಿ ಪಕ್ಷದಲ್ಲಿನ ಬಂಡಾಯ ಕಾಂಗ್ರೆಸ್ಗೆ ಅನುಕೂಲ ಆಗಬಹುದು: ಸಚಿವ ಸತೀಶ್ ಜಾರಕಿಹೊಳಿ