ಮಂಗಳೂರು: ಮಹಾರಾಷ್ಟ್ರದಲ್ಲಿ ಸಾವರ್ಕರ್ ಹಿಂದುತ್ವದ ಭದ್ರಕೋಟೆ ಕಟ್ಟಿದ್ದರು. ಆದರೆ ಅಲ್ಲಿಯೇ ಹಿಂದುತ್ವದ ಕೋಟೆ ಈಗ ಭದ್ರವಾಗಿಲ್ಲ. ರಾಜಕಾರಣಿಗಳನ್ನು ಖರೀದಿ ಮಾಡಿ ಹಿಂದುತ್ವದ ಕೋಟೆ ನಿರ್ಮಿಸಲಾಗದು. ದಕ್ಷಿಣ ಕನ್ನಡದಲ್ಲಿ ಬೇರೆ ಬೇರೆ ಕಾರಣಗಳಿಂದ ಬಿಜೆಪಿ ಗೆದ್ದಿದೆ. ಅಂದಮಾತ್ರಕ್ಕೆ ಈ ಜಿಲ್ಲೆಯನ್ನು ಹಿಂದುತ್ವದ ಕೋಟೆ ಎನ್ನಲಾಗದು. ದೊಡ್ಡ ದೊಡ್ಡ ಕೋಟೆಗಳೆಲ್ಲ ಮುರಿದು ಹೋಗಿವೆ. ರಾಜ–ಮಹಾರಾಜರ ಕಾಲದ ಕೋಟೆಗಳು ಪಾಳುಬಿದ್ದಿವೆ. ಅದೇ ರೀತಿ ಇಲ್ಲೂ ಆಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐದು ವರ್ಷಗಳ ಬಳಿಕ ಮತ್ತೆ ಚುನಾವಣೆ ಬರಬೇಕು. ಅದಕ್ಕಾಗಿ ಸಂವಿಧಾನವನ್ನು ಉಳಿಸಿಕೊಳ್ಳಬೇಕಿದೆ. ಸ್ವಾತಂತ್ರ್ಯ ಹೋರಾಟದ ಆಶಯಗಳನ್ನು ಕಾಪಾಡಬೇಕಿದೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಅತ್ಯಂತ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರಿದ್ದ ಜಿಲ್ಲೆಗಳು. ಸ್ವತಂತ್ರ ಭಾರತ ನಿರ್ಮಾಣದ ಆಶಯ ಉಳಿಸಿಕೊಳ್ಳಲು ಹೋರಾಟ ನಡೆಯುತ್ತಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ–ಬಿಲ್ಲವರ ನಡುವೆ ಹಣಾಹಣಿ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಾತ್ಯತೀತ ತತ್ವಗಳನ್ನು ಕಾಪಾಡುವ ಚುನಾವಣೆ ಇದು. ಇಲ್ಲಿನ ಹೋರಾಟ ಯಾವುದೇ ಜಾತಿ ಧರ್ಮ ಭಾಷೆಗಳ ಮಧ್ಯೆ ಅಲ್ಲ. ಜಿಲ್ಲೆಯಲ್ಲಿ ರಾಜಕೀಯವಾಗಿ ಹೊಸ ಅಧ್ಯಾಯ ಆರಂಭಿಸಲು ಕಾಂಗ್ರೆಸ್ ಹೊಸ ಮುಖಕ್ಕೆ ಅವಕಾಶ ನೀಡಿದೆ. ವಕೀಲ ಪದ್ಮರಾಜ್ ಅವರು ಗೆಲ್ಲಲಿದ್ದಾರೆ ಎಂದು ತಿಳಿಸಿದರು.
ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಕೊಟ್ಟಿರುವುದನ್ನು ಮೋದಿ ಟೀಕಿಸಿದ್ದಾರೆ. 1975ರಲ್ಲಿ ಸಿಕ್ಕಿಂ ರಾಜ್ಯವನ್ನು ಇಂದಿರಾ ಗಾಂಧಿ ಭಾರತಕ್ಕೆ ಸೇರಿಸಿದ್ದರು. ಬಾಂಗ್ಲಾ ದೇಶವನ್ನು ಸೃಷ್ಟಿಸಿ ಪಾಕಿಸ್ತಾನವನ್ನು ವಿಭಜನೆ ಮಾಡಿದ್ದು ಅದೇ ಇಂದಿರಾ ಗಾಂಧಿ ಎಂಬುದನ್ನು ತಿಳಿದುಕೊಳ್ಳಲಿ. ನಮ್ಮ ದೇಶಕ್ಕೆ ಸೇರಿದ 2 ಸಾವಿರ ಚದರ ಕಿ.ಮೀ ನೆಲವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂದು ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಾಯಕರೇ ಆರೋಪಿಸಿದ್ದಾರೆ. ಅದನ್ನು ಯಾವಾಗ ಬಿಡಿಸಿಕೊಳ್ಳುತ್ತಾರೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಮೊದಲು ಸ್ಪಷ್ಟಪಡಿಸಲಿ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ದಕ್ಷಿಣ ಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ನಾಮಪತ್ರ ಸಲ್ಲಿಕೆ - LOK SABHA ELECTION