ಬೆಂಗಳೂರು/ನವದೆಹಲಿ: ತೆರಿಗೆದಾರರ ಹಣವನ್ನು ಬಳಸಿಕೊಂಡು ತೆರಿಗೆದಾರರಿಗೇ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತೂ ನಾಚಿಕೆ ಇಲ್ಲ. ತೆರಿಗೆದಾರರ ಹಣದಿಂದಲೇ ಪತ್ರಿಕೆ ಮುಖಪುಟದಲ್ಲಿ ಸುಳ್ಳು ಆರೋಪಗಳನ್ನು ಜಾಹೀರಾತು ನೀಡಿ ಒಣಪ್ರತಿಷ್ಠೆ ತೋರುತ್ತಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.
ಈ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿವರಿಸುತ್ತಿರುವ ವಿಡಿಯೋದೊಂದಿಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಜೋಶಿ, ''ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಅಸಮಾನತೆ ತೋರಿಲ್ಲ. ಯುಪಿಎ ಅವಧಿಗಿಂತ ಶೇಕಡಾ 159ರಷ್ಟು ಭಾರಿ ಹೆಚ್ಚು ಹಣವನ್ನು ನೀಡಿದೆ ಎಂಬುದನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಾಬೀತು ಪಡಿಸಿದ್ದಾರೆ. ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಸಮಾನತೆ ತೋರಿದೆ. ರಾಜ್ಯಕ್ಕೆ 5 ವರ್ಷದಲ್ಲಿ ₹62,098 ಕೋಟಿ ನಷ್ಟವಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಹಣಕಾಸು ಸಚಿವರು ವಾಸ್ತವವನ್ನು ತೆರೆದಿಟ್ಟಿದ್ದಾರೆ. ಮಧ್ಯಸ್ಥಗಾರರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿದ ನಂತರ ತಜ್ಞರ ಸಂಸ್ಥೆ ಹಣಕಾಸು ಆಯೋಗ ಪ್ರತಿ ರಾಜ್ಯಕ್ಕೂ ತೆರಿಗೆ ನಿಧಿಯ ಮೊತ್ತವನ್ನು ನಿರ್ಧರಿಸುತ್ತದೆ ಎಂದು ತಿಳಿಸಿದ್ದಾರೆ'' ಎಂದಿದ್ದಾರೆ.
''ಈ ಹಿಂದಿನ ಯುಪಿಎ ಅವಧಿಯಲ್ಲಿ ಕರ್ನಾಟಕ ಸುಮಾರು ₹74,376 ಕೋಟಿ ಹಣ ಪಡೆದಿತ್ತು. ಆದರೆ ಎನ್‌ಡಿಎ ದುಪ್ಪಟ್ಟು ಮೊತ್ತ ನೀಡಿದೆ. 2021-22 ರಿಂದ 2025-26ರ ಅವಧಿಗೆ ₹1,92,514 ಕೋಟಿ ತೆರಿಗೆ ಹಂಚಿಕೆ ನಿಧಿ ಪಡೆಯುತ್ತಿದೆ ಎಂದು ವಿತ್ತ ಸಚಿವರು ದಾಖಲೆ ಸಮೇತ ಸಾಬೀತುಪಡಿಸಿದ್ದಾರೆ. 2021-₹4,659.2022 ಮತ್ತು 2025-26ರ ನಡುವಿನ 5 ವರ್ಷಗಳವರೆಗೆ ಕರ್ನಾಟಕಕ್ಕೆ ಒಟ್ಟು ₹4,659.20 ಕೋಟಿ ನಿಗದಿಪಡಿಸಲಾಗಿದೆ. 2021-22 ರಿಂದ 2023-24ರವರೆಗೆ ಮೋದಿ ಸರ್ಕಾರ ತನ್ನ ಪಾಲಿನ ₹1,681.60 ಕೋಟಿ ಪರಿಹಾರ ವಿತರಿಸಿದೆ. ಕರ್ನಾಟಕಕ್ಕೆ ಎನ್‌ಡಿಆರ್‌ಎಫ್‌ನಂತೆ ₹2,563.13 ಕೋಟಿ ಹೆಚ್ಚುವರಿ ಪೂರಕ ಹಣವನ್ನೂ ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವರು ಸ್ಪಷ್ಟಪಡಿಸಿದ್ದಾರೆ'' ಎಂದು ಜೋಶಿ ತಿಳಿಸಿದ್ದಾರೆ.
''ಮೋದಿ ಸರ್ಕಾರ ಫೆಬ್ರವರಿ 2023 ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ನೀಡಿದ್ದೆಲ್ಲದೆ ₹ 5,300 ಕೋಟಿ ನಿಗದಿಪಡಿಸಿ ಮೀಸಲಿಟ್ಟಿದೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜುಲೈ 2023-24ರ ಬಜೆಟ್‌ನಲ್ಲಿ ಯೋಜನೆಗೆ ನಿಗದಿಪಡಿಸಿದ್ದು, ಶೂನ್ಯ ಅನುದಾನ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ'' ಎಂದು ಸಂಸದೀಯ ಸಚಿವರು ಪೋಸ್ಟ್ನಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ: 'ಇದು ರಾಜಕೀಯ ಚಳವಳಿ ಅಲ್ಲ, ಕರ್ನಾಟಕದ ಹಾಗೂ ಕನ್ನಡಿಗರ ಹಿತ ಕಾಯುವ ಚಳವಳಿ' : ಸಿಎಂ ಸಿದ್ದರಾಮಯ್ಯ