ಬಳ್ಳಾರಿ : ಸಂಡೂರು ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಂ ಅವರು ಗುರುವಾರ ಬೆಳಗ್ಗೆ ನಾಮಪತ್ರ ಸಲ್ಲಿಸಿದರು.
ಸಂಸದ ಇ. ತುಕಾರಾಂ ಪತ್ನಿಯಾಗಿರುವ ಅನ್ನಪೂರ್ಣ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದೆ. ಇದೇ ಮೊದಲ ಬಾರಿಗೆ ರಾಜಕೀಯ ಅಖಾಡಕ್ಕೆ ಇಳಿದಿರುವ ಅನ್ನಪೂರ್ಣ ನಾಮಿನೇಷನ್ಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆಗೆ ಸಚಿವರಾದ ಜಮೀರ್ ಅಹ್ಮದ್ ಖಾನ್, ಸಂತೋಷ್ ಲಾಡ್ ಸಾಥ್ ನೀಡಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ರೋಡ್ ಶೋ ನಡೆಯಿತು. ಸಂಡೂರಿನ ಎಪಿಎಂಸಿಯಿಂದ ತಾಲೂಕು ಆಡಳಿತದ ಕಚೇರಿವರೆಗೂ ರೋಡ್ ಶೋ ಸಾಗಿತು.
ಎಸ್ಟಿ ಮೀಸಲು ಕ್ಷೇತ್ರ ಸಂಡೂರು ಉಪ ಚುನಾವಣೆ ನಿಮಿತ್ತ ಸಂಡೂರಿನ ಸಾರ್ವಜನಿಕರು ಭಾರಿ ಸಂಖ್ಯೆಯಲ್ಲಿ ರೋಡ್ ಶೋನಲ್ಲಿ ಭಾಗಿಯಾಗಿದ್ದರು. ಸುಮಾರು ಎರಡು ಕಿ. ಮೀ ವರೆಗೆ ವಿವಿಧ ಕಲಾತಂಡಗಳು, ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು. ಎಲ್ಲಿ ನೋಡಿದರೂ ರಸ್ತೆಯ ತುಂಬಾ ಕಾಂಗ್ರೆಸ್ ಬಾವುಟಗಳು ರಾರಾಜಿಸಿದವು.
ತೆರೆದ ವಾಹನದಲ್ಲಿ ರಾಜ್ಯ ನಾಯಕರು ಮತ್ತು ಸಂಡೂರು ನಾಯಕರು ಆಗಮಿಸಿದರು. ಈ ವೇಳೆ ಅಭಿಮಾನಿಗಳು ಕ್ರೇನ್ ಮೂಲಕ ಹೂಮಾಲೆ ಹಾಕಿ ಬರಮಾಡಿಕೊಂಡರು. ಸಂಡೂರು ನಗರದ ಕೇಂದ್ರವಾದ ವಿಜಯ ಸರ್ಕಲ್ನಲ್ಲಿ ಬಹಿರಂಗ ಸಭೆ ನಡೆಯಿತು.
ವೇದಿಕೆಯ ಮುಂಭಾಗದಲ್ಲಿ ಅವಳಿ ಜೆಸಿಬಿ ಯಂತ್ರಗಳ ಮೂಲಕ ಅಭಿಮಾನಿಗಳು ಹೂಮಳೆ ಸುರಿಸಿದರು. ಮೆರವಣಿಗೆಯುದ್ದಕ್ಕೂ ಕುಣಿತ, ಕೇಕೆಗಳು ಕೇಳಿಬಂದವು. ಸಚಿವರಾದ ಜಮೀರ್ ಅಹಮ್ಮದ್, ಸಂತೋಷ್ ಲಾಡ್, ಮಾಜಿ ಸಚಿವ ನಾಗೇಂದ್ರ, ಪಿ. ಟಿ ಪರಮೇಶ್ವರ್, ಸಂಸದ ತುಕಾರಾಂ, ಶಾಸಕ ಬಿ. ಎಂ ನಾಗರಾಜ್, ಶ್ರೀನಿವಾಸ, ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ್ ಭಾಗಿಯಾಗಿದ್ದರು.
ನಾಮಪತ್ರ ಸಲ್ಲಿಕೆಯ ಬಹಿರಂಗ ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು, ಈ ಹಿಂದೆ ಮಾಜಿ ಸಂಸದ ಅನಂತಕುಮಾರ್ ಹೆಗಡೆ ನೀಡಿದ್ದ ಹೇಳಿಕೆ ಬಗ್ಗೆ ಮಾತನಾಡಿದ್ದಾರೆ. ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತೇವೆ ಎಂಬ ಹೆಗಡೆ ಹೇಳಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು, ಹಾಗೇನಾದ್ರು ಆಗಿದ್ರೆ ನಾವು ಇಂದು ಇಲ್ಲಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಬೈ ಎಲೆಕ್ಷನ್ಗೆ ನಿಲ್ಲೋದು ಬೇಡ ಅಂದ್ರು: ತುಕಾರಾಂ ಅವರು ನಮ್ಮ ಕುಟುಂಬದವರು ಬೈ ಎಲೆಕ್ಷನ್ಗೆ ನಿಲ್ಲೋದು ಬೇಡ ಅಂದ್ರು. ಆದ್ರೆ ಸಂತೋಷ್ ಲಾಡ್ ಅವರ ಮಾತು ಮೀರಲ್ಲ ಎಂದು ಅವರ ಕಡೆಯಿಂದ ಹೇಳಿಸಲಾಯ್ತು ಎಂದರು.
ಸಿದ್ದರಾಮಯ್ಯ ಅವರಿಗೆ ಬಡವರ ಬಗ್ಗೆ ಕಾಳಜಿ ಇದೆ. ಈ ಕಾರಣದಿಂದ ಅವರು ಐದು ಗ್ಯಾರಂಟಿಗಳನ್ನು ನೀಡಿದ್ರು. ಗ್ಯಾರಂಟಿಗಳನ್ನು ನಿಲ್ಲಿಸುವ ಕಾರ್ಯವೇ ಇಲ್ಲ. ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯವರನ್ನು ಸೋಲಿಸಬೇಕು : ಬಿಜೆಪಿ ಹಗರಣದ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಹಗರಣಗಳಿಂದ ಬಳ್ಳಾರಿಯ ಸಂಪತ್ತನ್ನು ಜನಾರ್ದನ್ ರೆಡ್ಡಿ ಆ್ಯಂಡ್ ಟೀಂ ಕೊಳ್ಳೆ ಹೊಡೆದಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಅವರು ಹಿಂದು-ಮುಸ್ಲಿಂ ಗಲಾಟೆ ಮಾಡುವ ಮೂಲಕ ಮತ ಕೇಳುತ್ತಾರೆ. ಬಿಜೆಪಿ ಅಭಿವೃದ್ಧಿಯ ಹೆಸರೇ ಹೇಳುವುದಿಲ್ಲ. ಆದ್ದರಿಂದ ಬಿಜೆಪಿಯವರನ್ನು ಸೋಲಿಸಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ : ಚನ್ನಪಟ್ಟಣದಲ್ಲಿ ಸಿಎಂ, ಡಿಸಿಎಂ ನೇತೃತ್ವದಲ್ಲಿ ಬೃಹತ್ ಮೆರವಣಿಗೆ: ಸಿ.ಪಿ. ಯೋಗೇಶ್ವರ್ ನಾಮಪತ್ರ ಸಲ್ಲಿಕೆ