ETV Bharat / state

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ - ಬಿಜೆಪಿ: ಮುನ್ನೆಲೆಗೆ ಬಂದಿರುವ ಅಭ್ಯರ್ಥಿಗಳು ಯಾರು?

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ. ಮಾಜಿ ಕೇಂದ್ರ ಸಚಿವ ಡಿ. ವಿ ಸದಾನಂದಗೌಡ ಅವರು ನಿವೃತ್ತಿಯಾದ ಮೇಲೆ ಎರಡೂ ಪಕ್ಷಗಳ ಅಭ್ಯರ್ಥಿಗಳ ದಂಡೇ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ.

author img

By ETV Bharat Karnataka Team

Published : Mar 12, 2024, 4:10 PM IST

ಬಿಜೆಪಿ -ಕಾಂಗ್ರೆಸ್
ಬಿಜೆಪಿ- ಕಾಂಗ್ರೆಸ್

ಬೆಂಗಳೂರು : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎರಡು ಬಾರಿ ಗೆದ್ದು ಸಂಸದರಾಗಿರುವ ಮಾಜಿ ಕೇಂದ್ರ ಸಚಿವ ಡಿ. ವಿ ಸದಾನಂದಗೌಡರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿರುವುದು ಎಲ್ಲರಿಗೂ ತಿಳಿದ ವಿಷಯ. ಆದರೆ, ಅಂದಿನಿಂದಲೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಚರ್ಚೆಯಾಗುತ್ತಲೇ ಇದೆ. ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಯಾರು?. ಬಿಜೆಪಿ ಭದ್ರಕೋಟೆಯನ್ನು ಈ ಬಾರಿ ಕಾಂಗ್ರೆಸ್ ಭೇದಿಸುವುದೇ? ಎಂಬೆಲ್ಲಾ ವಿಷಯಗಳು ಚರ್ಚೆಗೆ ಗ್ರಾಸವಾಗಿವೆ.

2004 ರಿಂದ 2019ರವರೆಗೂ ಸತತವಾಗಿ ನಾಲ್ಕು ಲೋಕಸಭೆ ಚುನಾವಣೆಯಿಂದ ಬಿಜೆಪಿ ಸಂಸದರನ್ನು ನೀಡಿದ ಉತ್ತರ ಲೋಕಸಭೆ ಕ್ಷೇತ್ರ, ಬಿಜೆಪಿಯ ಭದ್ರಕೋಟೆ ಆಗಿದ್ದು, ಸದಾನಂದಗೌಡ ನಿವೃತ್ತಿಯಾದ ಬೆನ್ನಲ್ಲೇ ಎರಡೂ ಪಕ್ಷಗಳಲ್ಲಿ ಅಭ್ಯರ್ಥಿಗಳ ದಂಡೇ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ. ಯಾವ ಮಾನದಂಡದ ಮೇಲೆ ಕೇಂದ್ರಕ್ಕೆ ಹೆಸರು ಶಿಫಾರಸು ಮಾಡಬೇಕು ಎಂಬ ತಲೆಬಿಸಿ ರಾಜ್ಯ ಬಿಜೆಪಿಗೆ ಎದುರಾಗಿದೆ.

ಸವಾಲುಗಳ ಸುಳಿಯಲ್ಲಿ ರಾಜ್ಯ ಬಿಜೆಪಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಆದರೆ, ಸೋತ ಅಭ್ಯರ್ಥಿಗಳು ಪಕ್ಷಕ್ಕೆ ದುಡಿದವರು. ಇವರನ್ನು ಪರಿಗಣಿಸಬೇಕಾ? ತಳಮಟ್ಟದ ಕಾರ್ಯಕರ್ತರಿಗೆ ಅವಕಾಶ ನೀಡಬೇಕಾ? ಪಕ್ಷದ ಮೇಲೆ ಮುನಿಸು ಇರುವವರಿಗೆ ಟಿಕೆಟ್ ನೀಡಬೇಕಾ? ಸ್ವಂತ ಕ್ಷೇತ್ರದಿಂದ ಟಿಕೆಟ್ ಕಳೆದುಕೊಂಡ ನಾಯಕರಿಗೆ ಆದ್ಯತೆ ನೀಡಬೇಕೇ? ಅಥವಾ ಸದಾನಂದ ಗೌಡರಿಗೆ ನಿವೃತ್ತಿ ಹಿಂಪಡೆದು ಮತ್ತೆ ನೀವೇ ಸ್ಪರ್ಧೆ ಮಾಡಿ ಎಂದು ಒತ್ತಡ ತರಬೇಕಾ? ಎಂಬ ಸವಾಲುಗಳ ಸುಳಿಯಲ್ಲಿ ರಾಜ್ಯ ಬಿಜೆಪಿ ಸಿಲುಕಿದೆ.

ಈ ಮಧ್ಯೆ ಬಿಜೆಪಿಯಲ್ಲಿ ಕೆಲ ಹೆಸರುಗಳು ಹಾಗೂ ಕಾರಣಗಳು ಮುನ್ನೆಲೆಗೆ ಬಂದಿವೆ. ಸಿ. ಟಿ ರವಿ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಸೋಲು ಆಗಿದೆ. ಆದರೆ ಪಕ್ಷದ ಪರವಾಗಿ ಗಟ್ಟಿ ಧ್ವನಿ ಎತ್ತುವ ನಾಯಕರಲ್ಲಿ ಇವರೂ ಒಬ್ಬರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಹಿನ್ನಲೆ ಡೆಲ್ಲಿ ನಂಟು ಹಾಗೂ ಕೇಂದ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ಇವರಿಗೆ ಚೆನ್ನಾಗಿ ತಿಳಿದಿದೆ. ಹಿಂದುತ್ವದ ಫೈರ್ ಬ್ರಾಂಡ್, ತಮಿಳುನಾಡು ಚುನಾವಣೆ ಸೇರಿದಂತೆ ಇತರ ಚುನಾವಣೆಯಲ್ಲಿ ಇವರು ಕೆಲಸ ಮಾಡಿರುವ ನಾಯಕರಾಗಿದ್ದಾರೆ.

ಇನ್ನು ಕಾಂಗ್ರೆಸ್​ನಿಂದ ಬಿಜೆಪಿಗೆ ಬಂದ ಉಡುಪಿ ರಾಜಕೀಯ ನಾಯಕ ಪ್ರಮೋದ್ ಮಧ್ವರಾಜ್​ಗೆ ಉಡುಪಿ, ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ನೀಡಿದ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ ಕಾಂಗ್ರೆಸ್​ನಿಂದ ಬಿಜೆಪಿಗೆ ಬಂದು ಮತ್ತೆ ಕಾಂಗ್ರೆಸ್​ನತ್ತ ಮುಖಮಾಡಿರುವ ಎಸ್. ಟಿ ಸೋಮಶೇಖರ್ ಅವರ ಹೆಸರು ಹರಿದಾಡುತ್ತಿದೆ. ಅದೇ ರೀತಿ ಸುಮಲತಾ ಅಂಬರೀಷ್ ಅವರ ಹೆಸರು ಸಹಾ ಚಾಲ್ತಿಯಲ್ಲಿದೆ. ಇವೆಲ್ಲಾ ಕುತೂಹಲ ಮೂಡಿಸಿವೆ.

ಈ ಹೆಸರುಗಳಲ್ಲದೇ ಇನ್ನು ಅನೇಕ ಹೆಸರುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ. ಕೆಲ ಹಿರಿಯ ನಾಯಕರು, ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದರೆ, ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಾಗಲಿದೆ ಎಂದು ಸಲಹೆ ನೀಡಿದ್ದಾರೆ. ಒಟ್ಟಾರೆ ಹೇಳುವುದಾದರೆ, ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಸವಾಲು ಈಗ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಮುಂದಿದೆ. ರಾಜ್ಯ ಬಿಜೆಪಿ ನೀಡಿರುವ ಶಿಫಾರಸ್ಸಿಗೆ ಕೇಂದ್ರ ಬಿಜೆಪಿ ಹೈಕಮಾಂಡ್ ಅಸ್ತು ಅನ್ನುತ್ತಾ? ಅಥವಾ ಕೇಂದ್ರ ಬಿಜೆಪಿ ಸ್ವತಂತ್ರವಾಗಿ ಟಿಕೆಟ್ ಘೋಷಣೆ ಮಾಡುವುದೇ?. ಇದಕ್ಕೆ ಈ ವಾರದಲ್ಲೇ ಉತ್ತರ ಸಿಗಲಿದೆ.

ಭೌಗೋಳಿಕವಾಗಿ ವಿಸ್ತಾರಗೊಂಡಿದ್ದ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರವು 2008ರ ಕ್ಷೇತ್ರ ಪುನರ್ವಿಂಗಡಣೆ ನಂತರ ಕ್ಷೇತ್ರ ಕಡಿತವಾಯಿತು. ಕ್ಷೇತ್ರದ ರಾಜಕೀಯ, ಅಭಿವೃದ್ಧಿ ನಕ್ಷೆಯು ಈಗಿನ ಸ್ವರೂಪ ಹೋಲುವಂತಿದ್ದರೆ ಕಾಕತಾಳೀಯವೇನಲ್ಲ. ಘಟಾನುಘಟಿಗಳು ಪ್ರತಿನಿಧಿಸಿದ್ದ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಎಲ್ಲ ಇದ್ದು ಏನೂ ಇಲ್ಲ ಎಂಬ ಪರಿಸ್ಥಿತಿಯಿದೆ.

ಕಳೆದ ಒಂದು ದಶಕದಿಂದ ಅಲ್ಪಮಟ್ಟಿಗೆ ಸುಧಾರಣೆ ಗಾಳಿ ಬೀಸುತ್ತಿದೆ ಎನ್ನುವುದು ಕ್ಷೇತ್ರದ ಜನರ ಅನಿಸಿಕೆ. ಮೊದಲ ಬಾರಿಗೆ ಕಮಲ ಅರಳಿದಾಗಿನಿಂದ ಕ್ಷೇತ್ರವನ್ನು ಬಿಜೆಪಿ ಬಿಟ್ಟುಕೊಟ್ಟಿಲ್ಲ. ಸತತ ನಾಲ್ಕು ಬಾರಿ ಗೆದ್ದಿರುವ ಪಕ್ಷ 2024ರಲ್ಲೂ ಜಯಭೇರಿ ಬಾರಿಸುವ ಉತ್ಸಾಹದಲ್ಲಿದೆ. ಆದರೆ ಹಾಲಿ ಸಂಸದ ಡಿ ವಿ ಸದಾನಂದಗೌಡ ದಿಢೀರ್ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ, ಪಕ್ಷದ ಕೆಲವು ಮುಖಂಡರ ಆಂತರಿಕ ಒತ್ತಡದಿಂದ ಮತ್ತೆ ಅರೆಮನಸ್ಕ ಸ್ಥಿತಿಯಾಗಿದೆ.

ಕ್ಷೇತ್ರದ ಸಂಭಾವ್ಯರ ಸಾಲಿನಲ್ಲಿ ಹಾಲಿ ಸಂಸದರಾದ ಸುಮಲತಾ ಅಂಬರೀಷ್, ಶೋಭಾ ಕರಂದ್ಲಾಜೆ, ಮಾಜಿ ಸಚಿವ ಸಿ ಟಿ ರವಿ ಹೆಸರುಗಳು ಸುಳಿದಾಡಿದವು. ಈ ಪಟ್ಟಿಗೆ ಬಿ. ನಾರಾಯಣಗೌಡ ಅವರ ಹೆಸರು ಹೊಸದಾಗಿ ಸೇರಿದ್ದರೆ, ಇನ್ನೂ ಕೆಲವರ ಹೆಸರುಗಳು ಗೌಪ್ಯವಾಗಿ ಹರಿದಾಡುತ್ತಿವೆ.

ಇನ್ನು ಕಾಂಗ್ರೆಸ್‌ನಲ್ಲಿ ಆರ್ ಆರ್‌ ನಗರ ವಿಧಾನಸಭೆ ಕ್ಷೇತ್ರದಲ್ಲಿ ಸೋತ ಕುಸುಮಾ, ಸಚಿವ ರಾಮಲಿಂಗಾರೆಡ್ಡಿ ಪುತ್ರಿ, ಜಯನಗರದಲ್ಲಿ ಸೋತ ಸೌಮ್ಯರೆಡ್ಡಿ ಹೆಸರುಗಳು ಕೇಳಿಬರುತ್ತಿವೆ. ಆದರೆ ಆಕಾಂಕ್ಷಿಗಳ ಪೈಪೋಟಿ ಮೇಲ್ನೋಟಕ್ಕೆ ಕಂಡುಬರುತ್ತಿಲ್ಲ. ಕಾಂಗ್ರೆಸ್​ನಲ್ಲೂ ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ.

ಮೋದಿ ವರ್ಚಸ್ಸಿನ ಮೇಲೆ ಸಾಗಿರುವ ಬಿಜೆಪಿಗೆ ಈ ಬಾರಿ ತಕ್ಕಪಾಠ ಕಲಿಸಲು ಕಾಂಗ್ರೆಸ್ ನಾಯಕರು ಲೆಕ್ಕಾಚಾರ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಅಧಿಕಾರದ ಸೂತ್ರ ಹಿಡಿದಿರುವುದು, ಗ್ಯಾರಂಟಿ ಯೋಜನೆಗಳು ನೆರವಾಗುವ ನಿರೀಕ್ಷೆಯನ್ನು ಕಾಂಗ್ರೆಸ್ ಇಟ್ಟುಕೊಂಡಿದೆ. ಆದರೆ, ಸಮರ್ಥ ಅಭ್ಯರ್ಥಿಯದ್ದೇ ನಾಯಕರಿಗೆ ಚಿಂತೆಯಾಗಿದೆ. ಕಳೆದ ಬಾರಿ ವರಿಷ್ಠರ ಒತ್ತಾಸೆ, ಮನವೊಲಿಕೆ ಮೇರೆಗೆ ಕೃಷ್ಣಬೈರೇಗೌಡ ಒಲ್ಲದ ಮನಸ್ಸಿನಿಂದ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಕಂದಾಯ ಸಚಿವರಾಗಿದ್ದು, ಮತ್ತೆ ಅವರನ್ನೇ ಕಣಕ್ಕೆ ಇಳಿಸುವ ಯೋಚನೆ ಕೆಲವರಲ್ಲಿ ಸುಳಿದಾಡಿದೆ. ಆದರೆ, ಅವರು ಸ್ಪಷ್ಟವಾಗಿ ಲೋಕಸಭೆಗೆ ಸ್ಪರ್ಧಿಸುವುದನ್ನು ನಿರಾಕರಿಸಿದ್ದಾರೆ.

ವಿಧಾನಸಭಾ ಕ್ಷೇತ್ರದ ಬಲಾಬಲ : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಎಂಟು ವಿಧಾನಸಭಾ ಕ್ಷೇತ್ರಗಳು ಸೇರುತ್ತವೆ. ಅದರಲ್ಲಿ ಐದು ವಿಧಾನಸಭಾ ಕ್ಷೇತ್ರಗಳು ಬಿಜೆಪಿ ತೆಕ್ಕೆಯಲ್ಲಿದ್ದರೆ, ಇನ್ನು ಮೂರು ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಯಲ್ಲಿವೆ.

ವಿಧಾನಸಭಾ ಕ್ಷೇತ್ರದ ಬಲಾಬಲ ಈ ರೀತಿ ಇದೆ. ಯಶವಂತಪುರ (ಬಿಜೆಪಿ), ಕೆ. ಆರ್ ಪುರ (ಬಿಜೆಪಿ), ದಾಸರಹಳ್ಳಿ (ಬಿಜೆಪಿ), ಮಹಾಲಕ್ಷ್ಮಿಲೇಔಟ್ (ಬಿಜೆಪಿ), ಮಲ್ಲೇಶ್ವರ (ಬಿಜೆಪಿ), ಬ್ಯಾಟರಾಯನಪುರ (ಕಾಂಗ್ರೆಸ್), ಪುಲಕೇಶಿನಗರ (ಕಾಂಗ್ರೆಸ್) ಹಾಗೂ ಹೆಬ್ಬಾಳ (ಕಾಂಗ್ರೆಸ್).

ಕಳೆದ ಬಾರಿ ಮತಗಳು ಗಳಿಸಿದೆಷ್ಟು? : ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಡಿ. ವಿ ಸದಾನಂದಗೌಡರು 8,24,500 ಮತಗಳನ್ನು ಪಡೆದು ಗೆಲುವು ಕಂಡಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೃಷ್ಣಬೈರೇಗೌಡ ಅವರು 6,76,982 ಮತಗಳನ್ನು ಪಡೆದು ಸೋತಿದ್ದರು. ಅಂತರ 1,47,518 ಇತ್ತು.

ಇದನ್ನೂ ಓದಿ : ಬಿಜೆಪಿ ಹೈಕಮಾಂಡ್ ಬಯಸಿದರೆ ಚುನಾವಣೆ ನಿವೃತ್ತಿ ನಿರ್ಧಾರ ವಾಪಾಸ್ಸು: ಸದಾನಂದಗೌಡ ಸುಳಿವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.