ವಿಜಯಪುರ: "ವಕ್ಫ್ ಆಸ್ತಿಗಳ ಬಗ್ಗೆ ಜಿಲ್ಲೆಯಲ್ಲಿ ಅನವಶ್ಯಕವಾಗಿ ಗೊಂದಲ ಸೃಷ್ಟಿಯಾಗಿದೆ. ಹಳೆಯ ಗೆಜೆಟ್ ಅಧಿಸೂಚನೆಯಲ್ಲಿನ ದೋಷದ ಹಿನ್ನೆಲೆ ವಕ್ಫ್ ಕಾಯ್ದೆಯಡಿ ಜಿಲ್ಲೆಯ ಹೊನವಾಡ ಗ್ರಾಮದ ಜನರಿಗೆ ತಮ್ಮ ಪೂರ್ವಜರ ಜಮೀನುಗಳಿಂದ ತೆರವಾಗುವಂತೆ ನೋಟಿಸ್ ನೀಡಲಾಗಿದೆ. ಆದರೆ ಗ್ರಾಮದಲ್ಲಿರುವ 1,200 ಎಕರೆ ರೈತರ ಜಮೀನಿನ ಮೇಲೆ ಕರ್ನಾಟಕ ವಕ್ಫ್ ಮಂಡಳಿ ಹಕ್ಕು ಪಡೆಯಲು ಸಾಧ್ಯವಿಲ್ಲ" ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್ ಭಾನುವಾರ ಹೇಳಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿದ ಅವರು, "1974ರಲ್ಲಿ ಗೆಜೆಟ್ ನೋಟಿಫಿಕೇಶನ್‌ನಲ್ಲಿ ಹೊನವಾಡ ಗ್ರಾಮ ಎಂದು ತಪ್ಪಾಗಿ ಬರೆಯಲಾಗಿತ್ತು. ಅಲ್ಲಿನ ಜಮೀನು ಮೂಲತಃ ಮಹಲ್ ಬಾಗ್ ಸರ್ವೆ ನಂಬರ್ ನ ಭಾಗವಾಗಿದೆ. 1977 ರಲ್ಲಿ, ವಕ್ಫ್ ಮಂಡಳಿ ತನ್ನ ದಾಖಲೆಗಳನ್ನು ಸರಿಪಡಿಸಿದ್ದು, ಕೇವಲ 10 ಎಕರೆ ಸ್ಮಶಾನ ಭೂಮಿ ಸೇರಿದೆ ಎಂದು ಸ್ಪಷ್ಟಪಡಿಸಿದೆ. ಉಳಿದ 1,200 ಎಕರೆ ಭೂಮಿ (ವಕ್ಫ್ದು ಎಂದು ಹೇಳಲಾಗುತ್ತಿರುವ) ರೈತರಿಗೆ ಸೇರಿದ್ದು, ಹೀಗಾಗಿ ರೈತರಿಗೆ ಸೇರಿದ ಒಂದು ಇಂಚು ಭೂಮಿಯೂ ವಕ್ಫ್ ಆಸ್ತಿ ಅಲ್ಲ" ಎಂದು ಸಚಿವರು ವಿವರಿಸಿದರು.
10 ಎಕರೆ 29 ಗುಂಟೆ ಮಾತ್ರ ನೋಟಿಫಿಕೇಷನ್ ಆಗಿದೆ. ಜಿಲ್ಲೆಯಲ್ಲಿ 124 ಮಂದಿ ರೈತರಿಗೆ ನೋಟಿಸ್ಗಳು ಹೋಗಿವೆ. ಮ್ಯುಟೇಷನ್ ಕಾಲಂ 9ರಲ್ಲಿ ಒಂದು ಎಕರೆ ಆಸ್ತಿಯೂ ದಾಖಲಾಗಿಲ್ಲ. ಕಾಲಂ 11ರಲ್ಲಿ ಇಂಡಿಯಲ್ಲಿ 41 ಸರ್ವೇ ನಂಬರ್ಗಳು ಯಾವುದೇ ನೋಟಿಸ್ ನೀಡದೆ, ವಕ್ಫ್ ಆಸ್ತಿ ಎಂದು ಇಂಡೀಕರಣ ಮಾಡಲಾಗಿದೆ. ಎಸಿಯವರು ಅದನ್ನು ಈಗ ಸುಮೋಟೊ ತೆಗೆದುಕೊಂಡು ಪರಿಶೀಲನೆ ಮಾಡುತ್ತಿದ್ದಾರೆ. ಚಡಚಣದಲ್ಲಿ ಇಂತಹ 3 ಪ್ರಕರಣಗಳು ಇವೆ ಎಂದರು.
ಈ ಗೊಂದಲಗಳ ಬಗ್ಗೆ ಕಂದಾಯ ಇಲಾಖೆ ಹಾಗೂ ವಕ್ಫ್ ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಗೆಹರಿಸಲಾಗುವುದು. 10 ಎಕರೆ ಸ್ಮಶಾನಕ್ಕೆ ಸಂಬಂಧಿಸಿದ ವಿಷಯವೂ ಅಧೀನವಾಗಿದ್ದು, ಫಲಿತಾಂಶಕ್ಕಾಗಿ ಜನರು ಕಾಯಬೇಕು. ಸ್ಮಶಾನ ಭೂಮಿ ಕೂಡ ಪಂಚಾಯತ್ ಆಸ್ತಿಯಾಗಿದೆ" ಎಂದು ತಿಳಿಸಿದರು.
ವಿಜಯಪುರದ ಇಂಡಿ ತಾಲೂಕಿನ ಗ್ರಾಮಗಳಲ್ಲಿ ಮ್ಯುಟೇಶನ್ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ, ಹೊನವಾಡ ಗ್ರಾಮವನ್ನು ಉಲ್ಲೇಖಿಸಿ ಇಂಡಿ ಅಲ್ಲ ಎಂದು ಹೇಳಿದರು.
ತಮ್ಮ ಜಮೀನು ವಕ್ಫ್ ಮಂಡಳಿಗೆ ಸೇರಿದ್ದು ಎಂದು ನೋಟಿಸ್ ಬಂದ ಹಿನ್ನೆಲೆ ಆಕ್ರೋಶಗೊಂಡ ಹೊನವಾಡದ ಗ್ರಾಮಸ್ಥರು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಧರಣಿ ನಡೆಸಿದ್ದರು.
ಇದನ್ನೂ ಓದಿ: ಬೇರೆಯವರ ಒಂದಿಂಚು ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಹೇಳಲ್ಲ: ಸಚಿವ ಜಮೀರ್ ಅಹ್ಮದ್