ಮಂಗಳೂರು: ದೀಪಾವಳಿ ಹಬ್ಬದ ಸಂದರ್ಭ ಪಟಾಕಿಯ ಬೆಳಕು ಮತ್ತು ಸದ್ದು ಎಲ್ಲರಿಗೂ ಸಂತಸವನ್ನು ನೀಡುತ್ತದೆ. ಆದರೆ ಪಟಾಕಿ ಪರಿಸರ ಮತ್ತು ಆರೋಗ್ಯಕ್ಕೆ ಹಾನಿ ಮಾಡುವುದನ್ನೂ ಒಪ್ಪಿಕೊಳ್ಳಲೇಬೇಕಾದ ಸತ್ಯ. ಇಂತಹ ಹಾನಿಕಾರಕ ಪಟಾಕಿಗಳ ಬದಲಿಗೆ "ಹಸಿರು ಪಟಾಕಿ" ಎಂಬ ಪರಿಸರಸ್ನೇಹಿ ಪಟಾಕಿ ಬಳಸುವುದು ಬಹುಮುಖ್ಯವಾಗಿದೆ.
ಹಸಿರು ಪಟಾಕಿ ಎಂದರೇನು?: ಹಸಿರು ಪಟಾಕಿ ಪರಿಸರಕ್ಕೆ ತೊಂದರೆ ಕೊಡದಂತೆ ತಯಾರಿಸಲ್ಪಟ್ಟ ಪಟಾಕಿಗಳು. ಇವು ಕಡಿಮೆ ಶಬ್ದ ಹೊಂದಿದ್ದು, ಕಡಿಮೆ ಹೊಗೆ ಹೊರಸೂಸುತ್ತದೆ. ಇದರಿಂದ ಕಣ್ಣು ಸೇರಿದಂತೆ ಆರೋಗ್ಯಕ್ಕೆ ಆಗುವ ಅಪಾಯವನ್ನು ತಗ್ಗಿಸುತ್ತದೆ.
ಹಸಿರು ಪಟಾಕಿಗಳನ್ನು ಬಳಸುವುದರಿಂದ ಕೆಲವು ಪ್ರಮುಖ ಲಾಭಗಳಿವೆ:
- ಶಬ್ದ ಮಾಲಿನ್ಯ ಕಡಿಮೆ: ಹಸಿರು ಪಟಾಕಿಗಳು ಕಡಿಮೆ ಶಬ್ದ ಹೊಂದಿರುವುರಿಂದ ಸುತ್ತಮುತ್ತಲಿನ ಜನರಿಗೆ ತೊಂದರೆ ಕಡಿಮೆಯಾಗಲಿದೆ.
- ಹೊಗೆ ಕಡಿಮೆ: ಮರ್ಕ್ಯುರಿ, ಲೆಡ್ ಇಂತಹ ಅಪಾಯಕಾರಿ ವಸ್ತುಗಳ ಬದಲು ಇವು ಕಡಿಮೆ ಹೊಗೆ ನೀಡುವ ಪಟಾಕಿಗಳಾಗಿದೆ.
- ಆರೋಗ್ಯದ ಮೇಲೆ ಕಡಿಮೆ ಹಾನಿ: ಹಸಿರು ಪಟಾಕಿಗಳಲ್ಲಿ ಬಳಕೆ ಆಗುವ ವಸ್ತುಗಳು ಮಾನವ ಮತ್ತು ಪ್ರಾಣಿಗಳಿಗೆ ಹಾನಿ ಮಾಡುವುದಿಲ್ಲ.
ಹಸಿರು ಪಟಾಕಿಗಳನ್ನು ಗುರುತಿಸಲು ಕೆಲವು ಸರಳ ವಿಧಾನಗಳಿವೆ:
1. ಬಾಕ್ಸ್‌ನಲ್ಲಿರುವ ಬಾರ್ಕೋಡ್ ಸ್ಕ್ಯಾನ್ ಮಾಡಿ: ಪಟಾಕಿ ಬಾಕ್ಸ್‌ನಲ್ಲಿ ಬಾರ್ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅದು ಹಸಿರು ಪಟಾಕಿಯೇ ಅಲ್ಲವೇ ಎಂದು ತಿಳಿದುಕೊಳ್ಳಬಹುದು.
2. ರಾಸಾಯನಿಕ ಲೇಬಲ್ ಪರಿಶೀಲನೆ: ರಾಸಾಯನಿಕ ಲೇಬಲ್ ಪರಿಶೀಲನೆ ಎಂದರೆ ಪಟಾಕಿ ಡಬ್ಬಿಯನ್ನು ತೆರೆದು ಅದರೊಳಗೆ ಇರುವ ಲೇಬಲ್ (label) ಅನ್ನು ನೋಡಿ ಅದು ಯಾವ ವಸ್ತುಗಳಿಂದ (noble gas , ಹೊಗೆ, ಇತ್ಯಾದಿ ಕಡಿಮೆ ಮಾಡುವಂತಹ) ತಯಾರಿಸಲ್ಪಟ್ಟಿದೆ ಎಂಬುದನ್ನು ಪರಿಶೀಲಿಸುವುದು. ಅದರ ಮೇಲೆ ಹಸಿರು ಪಟಾಕಿಯ ಬಗ್ಗೆ ಮಾಹಿತಿಯಿರಬಹುದು, ಉದಾಹರಣೆಗೆ, ಅದು ಪರಿಸರ ಸ್ನೇಹಿ ರಾಸಾಯನಿಕಗಳಿಂದ (ಬ್ಯಾರಿಯಮ್ ನೈಟ್ರೇಟ್ ಮುಂತಾದವುಗಳ ಬದಲಿಗೆ ಇತರ ಸುರಕ್ಷಿತ ವಸ್ತುಗಳು) ತಯಾರಿಸಿದ ಬಗ್ಗೆ.
3. ಕಂಪನಿಯ ಹೆಸರು ಹುಡುಕಿ: "ಕಂಪನಿಯ ಹೆಸರನ್ನು ಗೂಗಲ್‌ನಲ್ಲಿ ಹುಡುಕಿದರೆ ಹಸಿರು ಪಟಾಕಿಯ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ".
ಈ ಬಗ್ಗೆ ಫೆಸ್ಟಿವಲ್ ಸೀಸನ್ ಹೋಲ್ಸೇಲ್ ಮತ್ತು ರಿಟೇಲ್ ಪಟಾಕಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಆಲ್ವಿನ್ ಪಿಂಟೋ ಮಾತನಾಡಿ, "ನೀವು ಪಟಾಕಿಯ ಡಬ್ಬಿಯ ಬಾರ್ ಕೋಡ್ ಸ್ಕ್ಯಾನ್ ಮಾಡಿ ಅದು ಹಸಿರು ಪಟಾಕಿಯೇ ಅಲ್ಲವೇ ಎಂದು ನೋಡಬಹುದು. ಡಬ್ಬಿಯನ್ನು ತೆರೆದಾಗ ರಾಸಾಯನಿಕ ಲೇಬಲ್ ಕೂಡ ಕಾಣುತ್ತದೆ. ಕಂಪನಿಯ ಹೆಸರನ್ನು ಗೂಗಲ್‌ನಲ್ಲಿ ಹುಡುಕಬಹುದು. ಹಸಿರು ಪಟಾಕಿ ಎಂದರೆ ಪರಿಸರಕ್ಕೆ ಹಾನಿಯಿಲ್ಲದ ಪಟಾಕಿ, ಇದು ಶಬ್ದವನ್ನು ಕಡಿಮೆ ಮಾಡುತ್ತದೆ".
"ಇವು ಮಾನವ ಅಥವಾ ಪ್ರಾಣಿಗಳಿಗೆ ಹಾನಿ ಮಾಡುವುದಿಲ್ಲ. ಮುಂಚಿನ ಪಟಾಕಿಗಳಲ್ಲಿ ಶಬ್ದ ಹೆಚ್ಚಾಗುವ ರಾಸಾಯನಿಕಗಳನ್ನೂ ಸೇರಿಸುತ್ತಿದ್ದರು, ಆದರೆ, ಈಗ ಸುಪ್ರೀಂ ಕೋರ್ಟ್ ಅವುಗಳನ್ನು ನಿಷೇಧಿಸಿದೆ. ಹಸಿರು ಪಟಾಕಿಗಳಲ್ಲಿ ಧ್ವನಿಯ ಮಟ್ಟ ಕಡಿಮೆ ಮಾಡಲಾಗಿದೆ. ಫ್ಲವರ್ ಪಾಟ್ಸ್, ಸ್ಪಾರ್ಕ್ಲರ್‌ಗಳು ಹಸಿರು ಪಟಾಕಿಗಳಲ್ಲಿ ಬರುತ್ತವೆ. ಈಗ, ಹೆಚ್ಚಿನ ಪಟಾಕಿಗಳು ಉಪ್ಪಿನಿಂದ ತಯಾರಿಸಲ್ಪಟ್ಟಿವೆ, ಇದು ಮಾನವ ಮತ್ತು ಪ್ರಾಣಿಗಳಿಗೆ ಹಾನಿಯಿಲ್ಲ" ಎನ್ನುತ್ತಾರೆ.
ಯಾವ ಪಟಾಕಿಗಳನ್ನು ಹಸಿರು ಪಟಾಕಿ ಎನ್ನುತ್ತಾರೆ?: ಹಸಿರು ಪಟಾಕಿಗಳಲ್ಲಿ ಫ್ಲವರ್ ಪಾಟ್ಸ್, ಸ್ಪಾರ್ಕ್ಲರ್, ಗ್ರೌಂಡ್ ಸ್ಪಿನ್ನರ್ ಮೊದಲಾದವುಗಳು ಇವೆ. ಮುಖ್ಯವಾಗಿ ಶಿವಕಾಶಿ, ರಾಜಸ್ಥಾನ, ಹರಿಯಾಣದಂತಹ ಸ್ಥಳಗಳಲ್ಲಿ ಇವುಗಳನ್ನು ತಯಾರಿಸಲಾಗುತ್ತದೆ. ಇನ್ನು ಕೆಲ ದಿನಗಳಲ್ಲಿ ದೀಪಾವಳಿ ಆಚರಣೆ ವಿಜೃಂಭಣೆಯಿಂದ ನಡೆಯಲಿದೆ. ಈ ಹಬ್ಬದ ಸಮಯದಲ್ಲಿ ಹಸಿರು ಪಟಾಕಿಗಳನ್ನು ಆಯ್ಕೆ ಮಾಡುವ ಮೂಲಕ ನಾವು ಪರಿಸರ ಮತ್ತು ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ದೀಪಾವಳಿ: ಮಾಲಿನ್ಯಕಾರಕ ಪಟಾಕಿ ಮಾರಾಟದ ವಿರುದ್ಧ ಪೊಲೀಸ್ ಕಾರ್ಯಾಚರಣೆ