ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹನಾಗರ ಪಾಲಿಕೆಗೆ ನೂತನ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದಂತೆ ಈಗ ಪಾಲಿಕೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಬಿಜೆಪಿ ಆಡಳಿತವಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ವಿಪಕ್ಷ ನಾಯಕ ಸ್ಥಾನಕ್ಕೆ ಮುಂದಿನ ವಾರದೊಳಗೆ ಆಯ್ಕೆ ನಡೆಯಬೇಕಿದೆ. ವಿರೋಧ ಪಕ್ಷವಾದ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.
ಜೂನ್ 29ಕ್ಕೆ ಪಾಲಿಕೆಗೆ ನೂತನ ಮೇಯರ್, ಉಪ ಮೇಯರ್ ಆಯ್ಕೆ ನಡೆದಿದೆ. ಬಳಿಕ ಸಭಾ ನಾಯಕ ಸ್ಥಾನಕ್ಕೆ ಹಿರಿಯ ಸದಸ್ಯ ವೀರಣ್ಣ ಸವಡಿ ಅವರನ್ನು ಬಿಜೆಪಿ ನೇಮಕ ಮಾಡಿದೆ. ಇದೀಗ ವಿಪಕ್ಷ ನಾಯಕ ಯಾರು ಎಂಬುದು ಕುತೂಹಲ ಮೂಡಿಸಿದೆ.
ಹಾಲಿ ವಿಪಕ್ಷ ನಾಯಕಿ ಸುವರ್ಣಾ ಕಲ್ಲಕುಂಟ್ಲ ಅವಧಿ ಜುಲೈ 15ಕ್ಕೆ ಕೊನೆಗೊಳ್ಳಲಿದೆ. ಅಷ್ಟರೊಳಗೆ ಅಥವಾ ಪಾಲಿಕೆಯ ಜುಲೈ ತಿಂಗಳ ಸಾಮಾನ್ಯ ಸಭೆಯ ನೋಟಿಸ್ ಹೊರಡಿಸುವ ಪೂರ್ವ ನೂತನ ವಿಪಕ್ಷ ನಾಯಕನ ಆಯ್ಕೆ ನಡೆಯಬೇಕು. ಇಮ್ರಾನ್ (ಇಮಾಮಹುಸೇನ) ಎಲಿಗಾರ, ರಾಜಶೇಖರ ಕಮತಿ, ಶಂಭುಗೌಡ ಸಾಲಿಮನಿ, ಮಹ್ಮದ್ ಇಸ್ಮಾಯಿಲ್ ಭದ್ರಾಪುರ, ಶಂಕರಪ್ಪ ಹರಿಜನ, ಕವಿತಾ ಕಬ್ಬೇರ ವಿಪಕ್ಷ ನಾಯಕ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ್ದಾರೆ.
ಕ್ಷೇತ್ರ ಲೆಕ್ಕಾಚಾರ: ಪಾಲಿಕೆಯ ಮೇಯರ್, ಉಪ ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಯಲ್ಲಿ ವಿಧಾನಸಭಾ ಕ್ಷೇತ್ರಗಳಿಗೆ ಸಮಾನ ಪ್ರಾತಿನಿಧ್ಯ ನೀಡುವ ಸೂತ್ರವು ಬಹಳ ಮಹತ್ವ ಪಡೆಯುತ್ತದೆ. ಇವು ಆಡಳಿತ ಪಕ್ಷದ ಪಾಲಿಗಿರುವ ಸ್ಥಾನಗಳು. ವಿಪಕ್ಷ ನಾಯಕನ ಆಯ್ಕೆಯಲ್ಲೂ ವಿಧಾನಸಭಾ ಕ್ಷೇತ್ರಗಳಿಗೆ ಸಮಾನ ಪ್ರಾತಿನಿಧ್ಯ ನೀಡುವ ಸೂತ್ರವನ್ನು ಅನುಸರಿಸಲಾಗುತ್ತದೆ.
ಮೊದಲ ಅವಧಿಗೆ ವಿಪಕ್ಷ ನಾಯಕರಾಗಿದ್ದ ದೋರಾಜ್ (ರಾಜಾರಾಮ) ಮಣಿಕುಂಟ ಪ್ರತಿನಿಧಿಸುವ 61ನೇ ವಾರ್ಡ್ ಹು-ಧಾ ಪೂರ್ವ ಹಾಗೂ 2ನೇ ಅವಧಿ (ಹಾಲಿ)ಗೆ ವಿಪಕ್ಷ ನಾಯಕಿಯಾಗಿರುವ ಸುವರ್ಣಾ ಕಲ್ಲಕುಂಟ ಪ್ರತಿನಿಧಿಸುವ 59ನೇ ವಾರ್ಡ್ ಹು-ಧಾ ಸೆಂಟ್ರಲ್ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ
ಬರುತ್ತದೆ. ಹಾಗಾಗಿ ಈ ಬಾರಿ ಹು-ಧಾ ಪಶ್ಚಿಮ ಅಥವಾ ಧಾರವಾಡ ವಿಧಾನಸಭೆ ಕ್ಷೇತ್ರಕ್ಕೆ ವಿಪಕ್ಷ ನಾಯಕ ಸ್ಥಾನ ಸಿಗಬೇಕು.
ರೇಸ್‌ನಲ್ಲಿರುವ 4ನೇ ವಾರ್ಡ್ ಸದಸ್ಯ ರಾಜಶೇಖರ ಕಮತಿ ಧಾರವಾಡ ವಿಧಾನಸಭೆ ಕ್ಷೇತ್ರವನ್ನು, 14ನೇ ವಾರ್ಡ್ ಸದಸ್ಯ ಶಂಭುಗೌಡ ಸಾಲಮನಿ, 20ನೇ ವಾರ್ಡ್ ಸದಸ್ಯೆ ಕವಿತಾ ಕಬ್ಬೇರ, 31ನೇ ವಾರ್ಡ್ ಸದಸ್ಯ ಶಂಕರಪ್ಪ ಹರಿಜನ, 33ನೇ ವಾರ್ಡ್ ಸದಸ್ಯ ಇಮ್ರಾನ್ ಎಲಿಗಾರ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಅತಿ ಹೆಚ್ಚು 11 ಸದಸ್ಯರು ಆಯ್ಕೆಯಾಗಿದ್ದಾರೆ. ಹಾಗಾಗಿ ಈ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಹೆಚ್ಚು ಪ್ರಾತಿನಿಧ್ಯ ಸಿಗಬೇಕಿದೆ. 53ನೇ ವಾರ್ಡ್ ಸದಸ್ಯ ಮಹ್ಮದ್ ಇಸ್ಮಾಯಿಲ್ ಭದ್ರಾಪುರ ಹು-ಧಾ ಸೆಂಟ್ರಲ್ ಕ್ಷೇತ್ರಕ್ಕೆ ಸೇರಿದವರು.
ಹು-ಧಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷವನ್ನು ಸಮರ್ಥವಾಗಿ ಎದುರಿಸಲು ಹಾಗೂ ಅವರ ವೈಫಲ್ಯವನ್ನು ಎತ್ತಿ ಹಿಡಿಯಲು, ಅವಳಿ ನಗರದ ಸಾರ್ವಜನಿಕರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತವಿದ್ದು, ಇಲ್ಲಿಯ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಂಥ ಸಮರ್ಥ ವಿಪಕ್ಷ ನಾಯಕನನ್ನು ಆಯ್ಕೆ ಮಾಡುವ ಅವಶ್ಯಕತೆ ಇದ್ದು, ಯಾರನ್ನು ಕಾಂಗ್ರೆಸ್ ನಾಯಕರು ಆಯ್ಕೆ ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಮಹಾ ಮಳೆಗೆ ಮುಳುಗಿದ ಮುಂಬೈ: ಶಾಲೆಗಳು ಬಂದ್, ರೈಲು, ವಾಹನ ಸಂಚಾರಕ್ಕೆ ಅಡಚಣೆ - Mumbai Rain